ಕುಂದಾಪುರ: ಮೇ 15ರಂದು ವಡ್ಡರ್ಸೆ ಬರಹಗಳ ಸಂಗ್ರಹ; ‘ಬೇರೆಯೇ ಮಾತು’ ಪುಸ್ತಕ ಬಿಡುಗಡೆ

Update: 2022-05-13 13:08 GMT

ಕುಂದಾಪುರ : ಕನ್ನಡದ ಹೆಮ್ಮೆಯ ಪತ್ರಕರ್ತ, ಓದುಗರ ಒಡೆತನದ ಪತ್ರಿಕೆ ‘ಮುಂಗಾರು’ವಿನ ಸಂಪಾದಕರಾಗಿದ್ದ ವಡ್ಡರ್ಸೆ ರಘುರಾಮ ಶೆಟ್ಟಿ ಇವರ ಸಂಪಾದಕೀಯ ಬರಹಗಳ ಸಂಕಲನ ‘ಬೇರೆಯೇ ಮಾತು’ ಕೃತಿಯ ಬಿಡುಗಡೆ ಹಾಗೂ ಸಂವಾದ ಕಾರ್ಯಕ್ರಮ ಮೇ ೧೫ರ ರವಿವಾರ ಅಪರಾಹ್ನ ೩:೩೦ಕ್ಕೆ  ಕುಂದಾಪುರದ ಕಲಾಮಂದಿರದಲ್ಲಿ ನಡೆಯಲಿದೆ.

ಕನ್ನಡದ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರ ಸಂಪಾದಕತ್ವದಲ್ಲಿ ಹೊರಬಂದಿರುವ ಈ ಪುಸ್ತಕವನ್ನು ಕನ್ನಡದ ಸುದ್ದಿ ಜಾಲತಾಣ ‘ಕನ್ನಡ ಮೀಡಿಯಾ ಡಾಟ್ ಕಾಂ’ನ ವರ್ಷಾಚರಣೆಯ ಅಂಗವಾಗಿ ಕುಂದಾಪುರದಲ್ಲಿ ಬಿಡುಗಡೆಗೊಳಿಸಲಾಗುತ್ತಿದೆ. 

ಕರ್ನಾಟಕ ವಿಧಾನಪರಿಷತ್‌ನ ಮಾಜಿ ಸಭಾಪತಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಕೆ.ಪ್ರತಾಪ್‌ಚಂದ್ರ ಶೆಟ್ಟಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಮಾಧ್ಯಮ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದ ದಿನೇಶ್ ಅಮಿನ್ ಮಟ್ಟು ಪುಸ್ತಕವನ್ನು ಪರಿಚಯಿಸಲಿದ್ದಾರೆ.

ಜನಪರ ಬರಹಗಾರರು, ಸಾಮಾಜಿಕ ಚಿಂತಕರಾಗಿರುವ ಹೊಸದಿಲ್ಲಿಯ ಜೆಎನ್‌ಯುನ ನಿವೃತ್ತ ಪ್ರಾಧ್ಯಾಪಕ ಪುರುಷೋತ್ತಮ ಬಿಳಿಮಲೆ ಪುಸ್ತಕ ಬಿಡುಗಡೆ ಗೊಳಿಸಲಿದ್ದಾರೆ. ವಕೀಲರು, ಜನಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರಾದ ಸುದೀರ್‌ಕುಮಾರ್ ಮರೋಳಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. 

ಬಳಿಕ ನಡೆಯುವ ಸಂವಾದ ಕಾರ್ಯಕ್ರಮದಲ್ಲಿ ಮುಂಗಾರು ಬಳಗದಲ್ಲಿ  ಪತ್ರಕರ್ತರಾಗಿ, ವ್ಯಂಗ್ಯಚಿತ್ರಕಾರರಾಗಿ ಕಾರ್ಯನಿರ್ವಹಿಸಿದ್ದ ಅನೇಕ ಮಂದಿ ಭಾಗವಹಿಸಲಿದ್ದಾರೆ ಎಂದು ಕನ್ನಡ ಮೀಡಿಯಾ ಡಾಟ್ ಕಾಮ್‌ನ ಸಂಪಾದಕ ಚಂದ್ರಶೇಖರ ಶೆಟ್ಟಿ ವಿನಂತಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News