ಕೊರಗ ಸಮುದಾಯದ ಅಖಿಲೇಶ್‌ಗೆ ಎಸೆಸೆಲ್ಸಿಯಲ್ಲಿ 602 ಅಂಕ; ಇಂಜಿನಿಯರ್ ಆಗುವ ಗುರಿ

Update: 2022-05-24 14:33 GMT

ಕುಂದಾಪುರ: ಅಂಚಿಗೆ ತಳ್ಳಲ್ಪಟ ಕೊರಗ ಸಮುದಾಯದ ಕೂಲಿ ಕಾರ ಕುಟುಂಬದಿಂದ ಬಂದ ಆಲೂರು ಸರಕಾರಿ ಪೌಢ ಶಾಲೆಯ ವಿದ್ಯಾರ್ಥಿ ಅಖಿಲೇಶ್, ಯಾವುದೇ ಟ್ಯೂಷನ್, ಕೋಚಿಂಗ್ ಪಡೆಯದೆ ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ 602(ಶೇ.96.32) ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.

ಆಲೂರು ಗ್ರಾಮದ ನವ ಗ್ರಾಮ ಕಾಲನಿಯ ನಿವಾಸಿ ಗಣೇಶ ಮತ್ತು ಮಾಲತಿ ದಂಪತಿ ಮಗ ಅಖಿಲೇಶ್, ಸ್ವಂತ ಪರಿಶ್ರಮದಿಂದ ಈ ಅಪ್ರತಿಮ ಸಾಧನೆ ಮಾಡಿದ್ದಾರೆ. ಗಣೇಶ ಆಲೂರು ಕಲ್ಲು ಗಣಿಯಲ್ಲಿ ಕಾರ್ಮಿಕರಾಗಿ ದುಡಿದು ಕುಟುಂಬ ನಿರ್ವಹಣೆ, ಮಕ್ಕಳ ಶಿಕ್ಷಣ, ಹದಗೆಟ್ಟ ತಾಯಿಯ ಆರೋಗ್ಯ ನೋಡಿಕೊಂಡರೆ, ಮಾಲತಿ ಗೇರು ಬೀಜ ಸಂಸ್ಕರಣೆ ಕೆಲಸ ಮಾಡುತ್ತಾ ಮಕ್ಕಳಿಗೆ ನೆರವಾಗುತ್ತಿದ್ದಾರೆ.

ಮುಂದೆ ಪಿಯುಸಿಯಲ್ಲಿ ಪಿಸಿಎಂಸಿ ವಿಭಾಗದಲ್ಲಿ ಮುಂದುವರೆದು ಇಂಜಿನಿಯರ್ ಆಗುವ ಗುರಿ ಹೊಂದಿದ್ದೇನೆ. ಮನೆಮಂದಿ ಏಳುವ ಮುಂಚೆಯೇ ಬೆಳಗಿನ ಜಾವ ಮೂರು ಗಂಟೆಗೆ ಎದ್ದು ಓದುತ್ತಿದ್ದೆ. ಸಂಜೆಯೂ ಕೂಡ ಓದುತ್ತಿದ್ದೆ. ಶಾಲಾ ಪಾಠ, ಶಿಕ್ಷಕರ ಹೊರತಾಗಿ ಯಾರ ಸಹಕಾರ ಪಡೆಯದೆ ಎಸೆಸೆಲ್ಸಿ ಮುಗಿಸಿದ್ದೇನೆ ಎಂದು ಅಖಿಲೇಶ್ ತಿಳಿಸಿದ್ದಾರೆ. ಅಖಿಲೇಶ್ ಉಡುಪಿ ಜಿಲ್ಲೆಯ ಕೊರಗ ಸಮುದಾಯದಲ್ಲಿ ಈವರೆಗೆ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿ ಎಂಬ ಕೀರ್ತಿ ಭಾಜನರಾಗಿದ್ದಾರೆ.

ಸಾಧಕ ವಿದ್ಯಾರ್ಥಿಗೆ ಸನ್ಮಾನ

ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಜಿಲ್ಲಾ ಸಂಘಟನೆ ಆಶ್ರಯದಲ್ಲಿ ಆಲೂರು ಹಾಡಿಮನೆ ವಠಾರದಲ್ಲಿ ಮಂಗಳವಾರ ಆಯೋಜಿಸ ಲಾದ ಕಾರ್ಯಕ್ರಮದಲ್ಲಿ ಕೊರಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿ ಅಖಿಲೇಶ್ ಅವರನ್ನು ಆಲೂರು ಗ್ರಾಪಂ ಉಪಾಧ್ಯಕ್ಷ ರವಿ ಶೆಟ್ಟಿ ಸನ್ಮಾನಿಸಿದರು.

ಸಮಿತಿಯ ಜಿಲ್ಲಾ ಸಂಘಟನೆ ಅಧ್ಯಕ್ಷ ಶ್ರೀಧರ ನಾಡಾ ಮಾತನಾಡಿ, ಕೊರಗ ಸಮುದಾಯ ಅಳಿವಿನಂಚಿನಲ್ಲಿದ್ದು ಸರಕಾರ ಹಾಗೂ ಬೇರೆ ವರ್ಗದವರು ಸಮುದಾಯಕ್ಕೆ ವಿಶೇಷ ಮಾನ್ಯತೆ ನೀಡಬೇಕು. ಕೊರಗ ಸಮಾಜ ಅವನತಿ ಹಾದಿಯಲ್ಲಿರುವಾಗಲೇ ಎಸೆಸೆಲ್ಸಿ ಪರೀಕ್ಷೆಯಲ್ಲಿ ಕೊರಗ ಸಮುದಾಯದ ಯುವಕ ಅತ್ಯುತ್ತಮ ಅಂಕ ಪಡೆದು ಉತ್ತೀರ್ಣನಾಗುವ ಮೂಲಕ ಸಮಾಜದಲ್ಲಿ ಶೈಕ್ಷಣಿಕ ಭರವಸೆ ಮೂಡಿಸಿದ್ದಾನೆ ಎಂದು ಹೇಳಿದರು.

ವಂಡ್ಸೆ ಗ್ರಾಪಂ ಮಾಜಿ ಸದಸ್ಯ ಗುಂಡು ಪೂಜಾರಿ, ಅಖಿಲೇಶ್‌ಗೆ 10 ಸಾವಿರ ನಗದು ಪ್ರೋತ್ಸಾಹ ಧನ ಘೋಷಿಸಿದರು. ಆಲೂರು ಗ್ರಾಪಂ ಸದಸ್ಯ ರಾಜೇಶ್ ದೇವಾಡಿಗ, ಅಖಿಲೇಶ್ ತಂದೆ ಗಣೇಶ್ ಉಪಸ್ಥಿತರಿದ್ದರು.

"ನಾನು 8ನೇ ತರಗತಿ ಓದಿದ್ದು ಕಷ್ಟದ ಹಿನ್ನೆಲೆ ಅರ್ಧಕ್ಕೆ ಶಾಲೆ ಬಿಡುವಂತಾಯಿತು. ನನ್ನ ಹಾಗೆ ನನ್ನ ಮಕ್ಕಳಾಗಬಾರದೆಂದು ಅವರಿಗೆ ಉತ್ತಮ ಶಿಕ್ಷಣ ನೀಡುವ ಯೋಚನೆಯಿದೆ. ಮಗ ಓದಿದರೆ ನನಗೆ ಖುಷಿ. ಅವನ ಚಿಂತನೆಯಂತೆ ಅಗತ್ಯ ಶಿಕ್ಷಣ ನೀಡುತ್ತೇನೆ".
-ಗಣೇಶ್, ಅಖಿಲೇಶ್ ತಂದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News