‘ಉಳಿತಾಯ, ಸಹಕಾರ ಮನೋಭಾವ ಭಾರತದ ಪ್ರಗತಿಗೆ ಪೂರಕ’

Update: 2022-05-24 15:16 GMT

ಉಡುಪಿ : ಉಳಿತಾಯ, ಸಹಕಾರ ಮನೋಭಾವದಿಂದಾಗಿ ಭಾರತ 2030ರ ವೇಳೆಗೆ ಜಗತ್ತಿನ ಸಶಕ್ತ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ದಕ್ಷಿಣ ಕನ್ನಡ ಸಹಕಾರ ಸಂಘಗಳ ಉಪನಿಬಂಧಕರಾಗಿ ವರ್ಗಾವಣೆ ಗೊಂಡಿರುವ ಪ್ರವೀಣ್ ಬಿ. ನಾಯಕ್ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಉಡುಪಿ ಜಿಲ್ಲಾ ಸಹಕಾರ  ಇಲಾಖೆಗಳ ಸಹಯೋಗ ದಲ್ಲಿ ಉಡುಪಿ ತಾಲೂಕಿನಲ್ಲಿ ಚುನಾವಣೆ ನಡೆಯಲಿರುವ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರಿಗೆ ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಜಗನ್ನಾಥ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಚುನಾವಣಾ ಪೂರ್ವ ತಯಾರಿ ಕುರಿತ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.  

ಭಾರತ  ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದುವಲ್ಲಿ ಸಹಕಾರ ಸಂಘಗಳ ಪಾತ್ರ ಮಹತ್ವದ್ದಾಗಿದೆ. ನಾವು ಶಿಸ್ತು, ಬದ್ದತೆ, ಗುರಿ, ಪಾರದರ್ಶಕತೆಯೊಂದಿಗೆ ಜವಾಬ್ದಾರಿಯುತವಾಗಿ ಮುನ್ನಡೆದರೆ ಬದಲಾವಣೆ ಸಾಧ್ಯವಿದೆ ಎಂದವರು ಅಭಿಪ್ರಾಯಪಟ್ಟರು.  

ರಾಜ್ಯದ ೪೦,೦೦೦ ಸಹಕಾರಿ ಸಂಸ್ಥೆಗಳಲ್ಲಿ ೩೫,೦೦೦ ಸಂಸ್ಥೆಗಳು ಸದೃಢವಾಗಿವೆ. ಕರಾವಳಿಯ ಅಭಿವೃದ್ಧಿಗೆ ಸಹಕಾರಿ ಆರ್ಥಿಕತೆಯ ಕೊಡುಗೆ ಸಾಕಷ್ಟಿದೆ ಎಂದು ಅಭಿಪ್ರಾಯಪಟ್ಟ ಅವರು, ದಿನನಿತ್ಯದ ವ್ಯವಹಾರದಲ್ಲಿ ಒತ್ತಡಕ್ಕೆ ಒಳಗಾಗದೆ ಕಾರ್ಯನಿರ್ವಹಿಸಲು ಕಿವಿಮಾತು ಹೇಳಿದರು.  

ಉಡುಪಿ ಜಿಲ್ಲಾ ಸಹಕಾರ ಸಂಘಗಳ ನೂತನ ಉಪನಿಬಂಧಕರಾಗಿ ಅಧಿಕಾರ ಸ್ವೀಕರಿಸಿರುವ ಲಕ್ಷ್ಮೀನಾರಾಯಣ್ ಜೆ. ಎನ್. ಅವರನ್ನು ಇದೇ ಸಂದರ್ಭದಲ್ಲಿ ಸ್ವಾಗತಿಸಿ ಗೌರವಿಸಲಾಯಿತು. 

ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರಾದ ಕಟಪಾಡಿ ಶಂಕರ ಪೂಜಾರಿ, ಯಶಪಾಲ್ ಎ. ಸುವರ್ಣ, ಅಶೋಕ್‌ಕುಮಾರ್ ಶೆಟ್ಟಿ ಬೆಳ್ಳಂಪಳ್ಳಿ, ಕೆ. ಕೊರಗ ಪೂಜಾರಿ, ಹರೀಶ್ ಕಿಣಿ ಅಲೆವೂರು, ಎಂ. ಗೋಪಿಕೃಷ್ಣ ರಾವ್, ಹಿರಿಯ ಸಹಕಾರಿ ಧುರೀಣರಾದ ಶಿವಾಜಿ ಸುವರ್ಣ, ವೈ.ಸುಧೀರ್ ಕುಮಾರ್, ಹರೀಶ್ ಶೇರಿಗಾರ್, ಸತೀಶ್ ಶೆಟ್ಟಿ ಕೆಮ್ಮಣ್ಣು, ನಾರಾಯಣ ಬಲ್ಲಾಳ್, ಉಡುಪಿ ವಕೀಲರ ಸಂಘದ ಅಧ್ಯಕ್ಷ ನಾಗರಾಜ್ ಬಿ.  ಉಪಸ್ಥಿತರಿದ್ದರು. 

ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿದರು. ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರೀಶ್ ಬಿ.ಬಿ. ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News