ಐಸಿಸಿ ಟೆಸ್ಟ್ ರ‍್ಯಾಂಕಿಂಗ್: ಅಗ್ರ-10ರಲ್ಲಿ ಸ್ಥಾನ ಕಾಯ್ದುಕೊಂಡ ಕೊಹ್ಲಿ, ರೋಹಿತ್ ಶರ್ಮಾ, ಅಶ್ವಿನ್

Update: 2022-05-26 04:05 GMT
Photo: Twitter

ದುಬೈ: ಬಾಂಗ್ಲಾದೇಶದ ಲಿಟನ್ ದಾಸ್ ಹಾಗೂ ಶ್ರೀಲಂಕಾದ ಹಿರಿಯ ಬ್ಯಾಟರ್ ಆ್ಯಂಜೆಲೊ ಮ್ಯಾಥ್ಯೂಸ್ ಬುಧವಾರ ಬಿಡುಗಡೆಯಾಗಿರುವ ಐಸಿಸಿ ಟೆಸ್ಟ್ ಆಟಗಾರರ ರ್ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಿದ್ದಾರೆ. ಈ ಇಬ್ಬರು ಡ್ರಾಗೊಂಡಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು.

ಬ್ಯಾಟರ್‌ಗಳ ಹೊಸ ರ್ಯಾಂಕಿಂಗ್‌ನಲ್ಲಿ ಮಾರ್ನಸ್ ಲಾಬುಶೇನ್ ಅಗ್ರ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಭಾರತದ ನಾಯಕ ರೋಹಿತ್ ಶರ್ಮಾ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ ಕ್ರಮವಾಗಿ 8ನೇ ಹಾಗೂ 10ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಅದೇ ರೀತಿ ಬೌಲಿಂಗ್ ರ್ಯಾಂಕಿಂಗ್‌ನಲ್ಲಿ ಆಸ್ಟ್ರೇಲಿಯದ ಪ್ಯಾಟ್ ಕಮಿನ್ಸ್(901 ಅಂಕ)ತನ್ನ ಸಮೀಪದ ಪ್ರತಿಸ್ಪರ್ಧಿ ಆರ್.ಅಶ್ವಿನ್ ವಿರುದ್ಧ 51 ಅಂಕ ಮುನ್ನಡೆಯಲ್ಲಿದ್ದಾರೆ.

ಭಾರತದ ರವೀಂದ್ರ ಜಡೇಜ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.

ಬಾಂಗ್ಲಾದೇಶದ ಪರ ಇನಿಂಗ್ಸ್‌ವೊಂದರಲ್ಲಿ 88 ರನ್ ಗಳಿಸಿದ್ದ ವಿಕೆಟ್‌ಕೀಪರ್-ಬ್ಯಾಟರ್ ಲಿಟನ್ ದಾಸ್ ಮೂರು ಸ್ಥಾನ ಭಡ್ತಿ ಪಡೆದು 17ನೇ ಸ್ಥಾನಕ್ಕೇರಿದರು. ಮೊದಲ ಇನಿಂಗ್ಸ್‌ನಲ್ಲಿ 199 ರನ್ ಗಳಿಸಿ ‘ಪಂದ್ಯಶ್ರೇಷ್ಠ’ ಗೌರವ ಪಡೆದಿದ್ದ ಮ್ಯಾಥ್ಯೂಸ್ ಐದು ಸ್ಥಾನ ಮೇಲಕ್ಕೇರಿ 21ನೇ ಸ್ಥಾನ ತಲುಪಿದ್ದಾರೆ.

105 ರನ್ ಗಳಿಸಿದ್ದ ಮುಶ್ಫಿಕುರ್ರಹೀಂ 4 ಸ್ಥಾನ ಭಡ್ತಿ ಪಡೆದು 25ನೇ ರ್ಯಾಂಕಿಗೆ ಹಾಗೂ ಇನಿಂಗ್ಸ್‌ವೊಂದರಲ್ಲಿ 133 ರನ್ ಗಳಿಸಿದ್ದ ತಮೀಮ್ ಇಕ್ಬಾಲ್ ಆರು ಸ್ಥಾನ ಮೇಲಕ್ಕೇರಿ 27ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News