ಉಡುಪಿ: ಕೊಕ್ಕರ್ಣೆ ಬಳಿ ಇಮ್ಮಡಿ ದೇವರಾಯನ ಕಾಲದ ಶಾಸನ ಪತ್ತೆ

Update: 2022-05-28 13:53 GMT

ಉಡುಪಿ, ಮೇ28: ಬ್ರಹ್ಮಾವರ ತಾಲೂಕು ಕೊಕ್ಕರ್ಣೆಯ ಕುದಿ- ಪೆಜಮಂಗೂರು ಗ್ರಾಮದ ಚಗ್ರಿಬೆಟ್ಟು ಎಂಬಲ್ಲಿ ವಿಜಯನಗರ ಕಾಲದ ಸಂಗಮ ಮನೆತನದ ಇಮ್ಮಡಿ ದೇವರಾಯನ ಶಿಲಾ ಶಾಸನವೊಂದು ಪತ್ತೆಯಾಗಿದೆ.

ಕ್ರಿ.ಶ.1442ರ ಈ ಶಾಸನ ಕನ್ನಡ ಲಿಪಿ ಹಾಗೂ ಭಾಷೆಯಲ್ಲಿದೆ. ಒಟ್ಟು 16 ಸಾಲುಗಳನ್ನು ಹೊಂದಿರುವ ಈ ಶಾಸನವನ್ನು ಖ್ಯಾತ ಇತಿಹಾಸಜ್ಞ, ನಿವೃತ್ತ ಪ್ರಾಂಶುಪಾಲ ಹಾಗೂ ಸದ್ಯ ಉಡುಪಿಯ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿಯಾಗಿರುವ ಡಾ.ಬಿ.ಜಗದೀಶ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶುೃತೇಶ್ ಆಚಾರ್ಯ ಮೂಡುಬೆಳ್ಳೆ ಅಧ್ಯಯನ ನಡೆಸಿದ್ದಾರೆ.

ಕೊಕ್ಕರ್ಣೆ ಗ್ರಾಪಂ ಅಧ್ಯಕ್ಷ ಲಕ್ಷ್ಮೀ ಅವರು ಈ ಶಾಸನದ ಬಗ್ಗೆ ಪ್ರಾಥಮಿಕ ಮಾಹಿತಿಯನ್ನು ನೀಡಿದ್ದರು. ಪ್ರಸ್ತುತ ಈ ಶಾಸನವನ್ನು ರಕ್ಷಣೆಯ ದೃಷ್ಟಿಯಿಂದ ಚಗ್ರಿಬೆಟ್ಟು ಪ್ರದೇಶದಿಂದ ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರಕ್ಕೆ ವರ್ಗಾಯಿಸಲಾಗಿದೆ.

ಗ್ರಾನೈಟ್ ಶಿಲೆಯಲ್ಲಿ ಕೊರೆಯಲಾಗಿರುವ ಈ ಶಾಸನದ ಕೆಳಭಾಗ ತುಂಡಾಗಿದೆ. ಪ್ರಸ್ತುತ ತುಂಡಾದ ಈ ಶಾಸನವು 2 ಅಡಿ ಎತ್ತರ ಹಾಗೂ 2 ಅಡಿ ಅಗಲವನ್ನು ಹೊಂದಿದೆ. 16 ಸಾಲುಗಳನ್ನು ಒಳಗೊಂಡಿರುವ ಈ ಶಾಸನವು ಕನ್ನಡ ಲಿಪಿ ಹಾಗೂ ಭಾಷೆಯಲ್ಲಿದೆ. ಶಾಸನದ ಹೆಚ್ಚಿನ ಭಾಗ ಸವೆದು ಹೋಗಿದೆ.

‘ಶ್ರೀಗಣಾಧಿಪತಯೆ ನಮ’ ಎಂಬ ಶ್ಲೋಕದಿಂದ ಪ್ರಾರಂಭಗೊಳ್ಳುವ ಈ ಶಾಸನವು ಶಕವರುಷ 1364 (ಕ್ರಿ.ಶ.1442)ರ ದುಂದುಭಿ ಸಂವತ್ಸರಕ್ಕೆ ಸೇರಿದೆ. ಈ ಸಂದರ್ಭದಲ್ಲಿ ಬಾರಕೂರ ರಾಜ್ಯವನ್ನು ಇಮ್ಮಡಿ ದೇವರಾಯನ ನಿರೂಪದಿಂದ ಮಹಾಪ್ರಧಾನ ಚಂಡರಸ ಒಡೆಯನು ಆಳ್ವಿಕೆ ನಡೆಸುತಿದ್ದ. ಉಳಿದಂತೆ ಶಾಸನದಲ್ಲಿ ಬೊಂಮಣ, ಗೋವಿಂದ ಸೆಟಿ, ಶಂಕರ ನಾರಾಯಣ, ಕುದು (ಪ್ರಸ್ತುತ ಕುದಿ ಗ್ರಾಮ?) ಎಂಬ ಹೆಸರುಗಳ ಉಲ್ಲೇಖ ಕಂಡುಬರುತ್ತದೆ. ಇದು ಶಂಕರನಾರಾಯಣ ದೇವರಿಗೆ ಕೊಟ್ಟಂತಹ ದಾನ ಶಾಸನ ಆಗಿರಬಹುದು ಎಂದು ಡಾ.ಬಿ.ಜಗದೀಶ್ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಶಾಸನದ ಕ್ಷೇತ್ರಕಾರ್ಯ ಶೋಧನೆಯಲ್ಲಿ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ, ನಾಗೇಶ್ ನಾಯಕ್ ಹಾಗೂ ರಾಘವೇಂದ್ರ ಕೊಡ್ಲಯ ಸಹಕರಿಸಿದ್ದಾರೆ ಎಂದು ಡಾ.ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News