ಧೋನಿ ನನ್ನನ್ನು ಕೈಬಿಟ್ಟ ನಂತರ ಏಕದಿನದಿಂದ ನಿವೃತ್ತಿಯಾಗಲು ಬಯಸಿದ್ದೆ: ಸೆಹ್ವಾಗ್
ಹೊಸದಿಲ್ಲಿ: ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿ ಸುಮಾರು 7 ವರ್ಷಗಳ ನಂತರವೂ ವೀರೇಂದ್ರ ಸೆಹ್ವಾಗ್ ಅವರನ್ನು ಈಗಲೂ ಅತ್ಯಂತ ಸ್ಫೋಟಕ ಆರಂಭಿಕ ಬ್ಯಾಟರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಇದು ಇನ್ನೂ ಹಲವು ವರ್ಷಗಳ ಕಾಲ ಹಾಗೆಯೇ ಉಳಿಯುವ ಸಾಧ್ಯತೆ ಹೆಚ್ಚಿದೆ.
ಇತ್ತೀಚಿನ ಸಂವಾದದಲ್ಲಿಮಾತನಾಡಿದ ಸೆಹ್ವಾಗ್ ಅವರು 2008 ರಲ್ಲಿ ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ ಭಾರತ ತಂಡದ ಆಗಿನ ನಾಯಕ ಎಂ.ಎಸ್ . ಧೋನಿ ನನ್ನನ್ನು ಕೆಲವು ಪಂದ್ಯಗಳಿಂದ ಕೈಬಿಟ್ಟಾಗ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ಬಯಸಿದ್ದೆ. ಸಚಿನ್ ತೆಂಡುಲ್ಕರ್ ನನ್ನ ಮನಸ್ಸನ್ನು ಬದಲಾಯಿಸಿದರು ಎಂದು ಹೇಳಿದರು.
"2008 ರಲ್ಲಿ ನಾವು ಆಸ್ಟ್ರೇಲಿಯಾದಲ್ಲಿದ್ದಾಗ, ಈ ಪ್ರಶ್ನೆ (ನಿವೃತ್ತಿ) ನನ್ನ ಮನಸ್ಸಿಗೆ ಬಂದಿತು. ನಾನು ಟೆಸ್ಟ್ ಸರಣಿಯಲ್ಲಿ ಪುನರಾಗಮನ ಮಾಡಿದೆ., 150 ರನ್ ಗಳಿಸಿದ್ದೆ. ಏಕದಿನಗಳಲ್ಲಿ ನಾನು ಮೂರು-ನಾಲ್ಕು ಪ್ರಯತ್ನಗಳಲ್ಲಿ ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಎಂ.ಎಸ್. ಧೋನಿ ನನ್ನನ್ನು ಆಡುವ 11ರ ಬಳಗದಿಂದ ಕೈಬಿಟ್ಟರು. ಆಗ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ಆಲೋಚನೆ ನನ್ನ ಮನಸ್ಸಿಗೆ ಬಂದಿತು. ನಾನು ಕೇವಲ ಟೆಸ್ಟ್ ಕ್ರಿಕೆಟ್ ಆಡುವುದನ್ನು ಮುಂದುವರಿಸಬಲ್ಲೆ ಎಂದು ನಾನು ಆಗ ಭಾವಿಸಿದ್ದೆ" ಎಂದು ಸೆಹ್ವಾಗ್ ಕ್ರಿಕ್‌ಬಝ್ ಶೋ 'ಮ್ಯಾಚ್ ಪಾರ್ಟಿ'ಯಲ್ಲಿ ಹೇಳಿದರು.
ಅನಿಲ್ ಕುಂಬ್ಳೆ ನಾಯಕತ್ವದಲ್ಲಿ ಟೆಸ್ಟ್ ತಂಡದಲ್ಲಿ ಪುನರಾಗಮನ ಮಾಡಿದ ಒಂದು ತಿಂಗಳ ನಂತರ ಸೆಹ್ವಾಗ್ ಆತಿಥೇಯ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾವನ್ನು ಒಳಗೊಂಡ ಕಾಮನ್‌ವೆಲ್ತ್ ಬ್ಯಾಂಕ್ ತ್ರಿಕೋನ ಸರಣಿಯಲ್ಲಿ ಭಾರತ ಆಡಿದ 10 ಪಂದ್ಯಗಳಲ್ಲಿ ಕೇವಲ 5 ಪಂದ್ಯಗಳನ್ನು ಮಾತ್ರ ಆಡಿದ್ದರು. ತ್ರಿಕೋನ ಸರಣಿಯ ಭಾರತ ಆಡಿದ್ದ ಮೊದಲ 4 ಪಂದ್ಯಗಳಲ್ಲಿ 6, 33,11 ಹಾಗೂ 14 ರನ್ ಗಳಿಸಿದ್ದರು. ಹೀಗಾಗಿ ಅವರು ಉಳಿದೆರಡು ಪಂದ್ಯಗಳ ಆಡುವ 11ರ ಬಳಗದಿಂದ ಹೊರಗುಳಿದಿದರು. ಸಿಡ್ನಿಯಲ್ಲಿ ಆಸ್ಟ್ರೇಲಿಯ ವಿರುದ್ಧ ನಡೆದ ಮುಂದಿನ ಲೀಗ್ ಪಂದ್ಯದಲ್ಲಿ ಸೆಹ್ವಾಗ್ ವಾಪಸಾಗಿದ್ದರು. ಆದರೆ 14 ರನ್ ಗಳಿಸಿ ವೈಫಲ್ಯ ಕಂಡಾಗ ಮತ್ತೊಮ್ಮೆ ತಂಡದಿಂದ ಹೊರಗುಳಿದಿದ್ದರು.
ಸೆಹ್ವಾಗ್ 2013ರಲ್ಲಿ ಪಾಕಿಸ್ತಾನದ ವಿರುದ್ಧ ಕೋಲ್ಕತಾದಲ್ಲಿ ಕೊನೆಯ ಏಕದಿನ ಪಂದ್ಯವನ್ನಾಡಿದ್ದರು.