ಸಾಹಿತ್ಯೋತ್ಸವದಿಂದ ಮಾನವೀಯ ಸಂಬಂಧ ವೃದ್ಧಿ: ಡಾ.ಮಹಾಬಲೇಶ್ವರ ರಾವ್‌

Update: 2022-06-05 16:09 GMT

ಉಡುಪಿ : ಉಡುಪಿ ಸುಹಾಸಂ, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಜಂಟಿ ಆಶ್ರಯದಲ್ಲಿ ಕು.ಗೋ.(ಎಚ್.ಗೋಪಾಲ ಭಟ್ಟ)- ೮೪ ಅಭಿನಂದನಾ ಸಮಾರಂಭವು ರವಿವಾರ ಉಡುಪಿ ಕಿದಿಯೂರು ಹೋಟೆಲ್‌ನಲ್ಲಿ ಜರಗಿತು.

ಶಿಕ್ಷಣ ತಜ್ಞ ಡಾ.ಮಹಾಬಲೇಶ್ವರ ರಾವ್ ಮಾತನಾಡಿ, ಸಾಹಿತ್ಯೋತ್ಸವ ಸಂಭ್ರಮದಿಂದ ಮಾನವೀಯ ಸಂಬಂಧ ಹಾಗೂ ಸ್ನೇಹ ಮರುಸ್ಥಾಪನೆಯಾಗು ತ್ತದೆ. ಕು.ಗೋ ಸಾಹಿತ್ಯ, ಸಂಭ್ರಮ ಹಾಗೂ ಪುಸ್ತಕಾನುರಕ್ತರು. ಇಳಿ ವಯಸ್ಸಿ ನಲ್ಲೂ ಪುಸ್ತಕಗಳ ಮೇಲಿನ ಪ್ರೀತಿ ಕಿಂಚಿತ್ತೂ ಕಡಿಮೆಯಾಗಿಲ್ಲ ಎಂದರು.

ವಿಜ್ಞಾನಿ ಡಾ.ಕೆ.ಪಿ.ರಾವ್ ಮಾತನಾಡಿ, ಕನ್ನಡ ಸಾಹಿತ್ಯ ಲೋಕಕ್ಕೆ ಕು.ಗೋ. ಅಳಿಲು ಸೇವೆ ಹಾಗೂ ಅಳಿಯದ ಸೇವೆ ಸಲ್ಲಿಸಿದ್ದಾರೆ. ಕು.ಗೋ ಯುವ ಸಾಹಿತಿ ಗಳಿಗೆ ಬರೆಯಲು ಪ್ರೇರೇಪಿಸಿದವರು ಹಾಗೂ ಪ್ರೋತ್ಸಾಹ ನೀಡಿದವರು ಎಂದು ಅಭಿಪ್ರಾಯ ಪಟ್ಟರು.

ಹಾಸ್ಯ ಭಾಷಣಕಾರ ಎಂ.ಎಸ್.ನರಸಿಂಹ ಮೂರ್ತಿ ಮಾತನಾಡಿ, ಹಾಸ್ಯ ವನ್ನು ಹಾಸ್ಯವಾಗಿ ಸ್ವೀಕರಿಸಬೇಕೆ ಹೊರತು ವಿವಾದ ಹುಡುಕಬಾರದು. ಹಿಂದೆಲ್ಲ ಪ್ರಸಿದ್ಧ ಲೇಖಕರ ಕಾವ್ಯ, ಕವನಗಳನ್ನು ಪ್ರಸ್ತುತ ಸನ್ನಿವೇಶಕ್ಕೆ ತಕ್ಕಂತೆ ಅಣಕ ವಾಡಲಾಗಿದೆ. ಸಮಾಜವನ್ನು ತಿದ್ದುವ, ಹುಳುಕುಗಳನ್ನು ತೋರಿಸುವ ಮಾಧ್ಯಮ ವಾಗಿ ಬಳಸಿಕೊಳ್ಳಲಾಗಿದೆ. ಹಾಸ್ಯವನ್ನು ಹಾಸ್ಯವಾಗಿ ಅನುಭವಿಸಿ ಸವಿಯಬೇಕು ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕು.ಗೋ, ಕನ್ನಡ ಸಾಹಿತ್ಯ ದಶಕಗಳ ಕಾಲ ಸರಿಯಾದ ದಾರಿಯಲ್ಲಿ ಕೈಹಿಡಿದು ಮುನ್ನಡೆಸಿದೆ ಎಂಬ ಆತ್ಮತೃಪ್ತಿ ಇದೆ. ಅಭಿಮಾನಿಗಳ ಪ್ರೀತಿಗೆ ಮನಸ್ಸು ತುಂಬಿ ಬಂದಿದೆ ಎಂದು ಹೇಳಿದರು.

ಡಾ.ವಿರೂಪಾಕ್ಷ ದೇವರಮನೆ, ಸಂಧ್ಯಾ ಶೆಣೈ, ಜ್ಯೋತಿ ಮಹಾದೇವ್, ಪೂರ್ಣಿಮಾ ಸುರೇಶ್, ಪೂರ್ಣಿಮಾ ಜನಾರ್ದನ್, ಅನಿತಾ ಸಿಕ್ವೇರಾ ಕು.ಗೋ ಜೊತೆ ಮುಖಾಮುಖಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಕು.ಗೋ. ಪುಸ್ತಕ ಪ್ರೀತಿಯ ಕುರಿತು ಮಾತನಾಡಿದರು. ಎಸ್.ಎಸ್. ಷಡಶೆಟ್ಟಿ, ವಿ.ಗಣೇಶ್, ರಾಮದಾಸ್ ರಾವ್ ನಾವು ಕಂಡಂತೆ ಕು.ಗೋ ಕುರಿತು ಮಾತನಾಡಿದರು.

ಸಮಾರಂಭದಲ್ಲಿ ಜಯಕರ ಶೆಟ್ಟಿ ಇಂದ್ರಾಳಿ, ಡಾ.ಪಿ.ವಿ.ಭಂಡಾರಿ, ಡಾ. ಗಣನಾಥ ಎಕ್ಕಾರು. ಪ್ರೊ.ಶಂಕರ್, ಮುರಳಿ ಕಡೆಕಾರ್, ಕಸಾಪ ಉಡುಪಿ ತಾಲ್ಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ. ಭಾಗವಹಿಸಿದ್ದರು. ಸುಹಾಸಂ ಅಧ್ಯಕ್ಷ ಶಾಂತರಾಜ್ ಐತಾಳ್ ಸ್ವಾಗತಿಸಿದರು. ಶ್ರೀನಿವಾಸ್ ಉಪಾಧ್ಯಾ, ಶಿಲ್ಪಾ ಜೋಶಿ ಕಾರ್ಯಕ್ರಮ ನಿರೂಪಿಸಿದರು. ಜನಾರ್ದನ ಕೊಡವೂರು ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News