ಶಿಕ್ಷಣದಲ್ಲಿ ವಿಜ್ಞಾನ-ಕಲೆಯ ಸಮ್ಮಿಲನ ಅನಿವಾರ್ಯ : ಡಾ.ವಿನೋದ್ ಭಟ್

Update: 2022-06-08 13:38 GMT

ಮಣಿಪಾಲ : ಮುಂಬರುವ ದಿನಗಳಲ್ಲಿ ವಿಜ್ಞಾನ ಮತ್ತು ಕಲೆಗಳ ಸಮ್ಮಿಲನದಿಂದ ಶಿಕ್ಷಣವು ಹೆಚ್ಚು ಹೆಚ್ಚು ಅಂತರ ಶಿಸ್ತಿಯವಾಗಲಿದೆ ಎಂದು ಮಾಹೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಹಾಗೂ ನಿವೃತ್ತ ಕುಲಪತಿ ಡಾ. ಎಚ್.ವಿನೋದ್ ಭಟ್ ಅಭಿಪ್ರಾಯಪಟ್ಟಿದ್ದಾರೆ.

ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್‌ನ ವಾರ್ಷಿಕೋತ್ಸವ ‘ಸರ್ವೋದಯ’ದಲ್ಲಿ ಅವರು ಮಾತನಾಡುತಿದ್ದರು. ಸಾಮಾನ್ಯ ವಿಜ್ಞಾನ ಹಾಗೂ ಕಲಾ ಶಾಸ್ತ್ರೀಯ ವಿಷಯಗಳು ಮುಂದಿನ ದಿನಗಳಲ್ಲಿ ವೈದ್ಯಕೀಯ ಹಾಗೂ ತಾಂತ್ರಿಕ ಶಿಕ್ಷಣದಲ್ಲೂ ಹೆಚ್ಚಿನ ಮಹತ್ವವನ್ನು ಪಡೆಯಲಿವೆ ಎಂದವರು ಹೇಳಿದರು.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯೂ ಇದೇ ದೃಷ್ಟಿಕೋನವನ್ನು ಪ್ರತಿಪಾದಿಸುತ್ತದೆ ಹಾಗೂ ಅನುಮೋದಿಸುತ್ತದೆ. ಇಂತಹ ಸನ್ನಿವೇಶದಲ್ಲಿ ಮಾಹೆಯ ಜಿಸಿಪಿಎಎಸ್ ಒದಗಿಸುತ್ತಿರುವ ಕೋರ್ಸ್‌ಗಳು ಸಾಕಷ್ಟು ಮಹತ್ವ ವನ್ನು ಪಡೆಯುತ್ತವೆ ಎಂದು ಡಾ.ವಿನೋದ್ ಭಟ್, ನಮ್ಮ ವಿಶ್ವವಿದ್ಯಾನಿಲಯ ನಿಮ್ಮ ಕಲಿಕಾ ವಿಷಯಗಳಿಂದಲೇ ಸಾಕಷ್ಟು ಮಹತ್ವವನ್ನು ಪಡೆದುಕೊಂಡಿದೆ ಎಂದರು.

ನಿಮ್ಮ ಸಂಸ್ಥೆಯಿಂದ ಸಾಕಷ್ಟು ಬಹುಮುಖ ಪ್ರತಿಭೆಗಳು ಹೊರಬರಲಿ ಎಂದು ಹಾರೈಸಿದ ಡಾ.ಭಟ್, ಕುಂದಾಪುರದ ಉಮಾಬಾಯಿಯಂಥ ಸ್ವಾತಂತ್ರ್ಯ ಹೋರಾಟ ಹಾಗೂ ಗಾಂಧಿ ಚಳವಳಿಯ ಭಾಗವಾಗಿದ್ದು, ನಾವು ಹೆಚ್ಚು ಅರಿತಿರದವರ ಬಗ್ಗೆ ಆಳವಾಗಿ ಅಧ್ಯಯನ ಹಾಗೂ ಸಂಶೋಧನೆ ನಡೆಸುವ  ಮೂಲಕ ಇತಿಹಾಸ ವನ್ನು ಶ್ರೀಮಂತಗೊಳಿಸುವಂತೆ ಅವರು ಸಂಸ್ಥೆಯ ವಿದ್ಯಾರ್ಥಿ ಗಳಿಗೆ ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಡಾ.ವಿನೋದ್ ಭಟ್ ಅವರನ್ನು ಸನ್ಮಾನಿಸಲಾಯಿತು. ಜಿಸಿಪಿಎಎಸ್ ಸಂಸ್ಥೆಯ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಅವರು ಪರಿಸರ ಶಾಸ್ತ್ರ, ಸೌಂದರ್ಯ ಶಾಸ್ತ್ರ ಹಾಗೂ ಶಾಂತಿಯಂಥ ಸಂಸ್ಥೆಯ ಕೋರ್ಸ್‌ಗಳು ನಮ್ಮ ತಾತ್ವಿಕ ನೆಲೆಗಳಾಗಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News