ಉಡುಪಿ ಜಿಲ್ಲಾಮಟ್ಟದ ‘ಯಂಗ್ ಇಂಡಿಯಾ ಕೇ ಬೋಲ್’ ಸ್ಪರ್ಧೆಗೆ ಚಾಲನೆ

Update: 2022-06-10 14:17 GMT

ಉಡುಪಿ, ಜೂ.೧೦: ಯುವ ಕಾಂಗ್ರೆಸ್ ವಕ್ತಾರರನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಯುವ ಕಾಂಗ್ರೆಸ್ ವತಿಯಿಂದ ‘ಯಂಗ್ ಇಂಡಿಯಾ ಕೇ ಬೋಲ್ ಸೀಸನ್ -೨’ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ರಾಜ್ಯ ವಕ್ತಾರ ಚಿರಂಜೀವಿ ಆರ್. ತಿಳಿಸಿದ್ದಾರೆ.

ಉಡುಪಿ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ‘ಯಂಗ್ ಇಂಡಿಯಾ ಕೇ ಬೋಲ್ ಸೀಸನ್ -೨’ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಜಿಲ್ಲಾಮಟ್ಟದ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡುತಿದ್ದರು.

ಕಾಂಗ್ರೆಸ್ ಸಿದ್ಧಾಂತ ಒಪ್ಪುವ ೧೮-೩೫ ವಯೋಮಿತಿಯ ಯುವಕ ಯುವತಿಯರು ೧೦೦ರೂ. ಶುಲ್ಕ ಪಾವತಿಸಿ ಸ್ಪರ್ಧೆಯಲ್ಲಿ ಭಾಗವಹಿಸ ಬಹುದು. ಜೂ.೨೫ ಹೆಸರು ನೊಂದಾಯಿಸಲು ಕೊನೆಯ ದಿನಾಂಕವಾಗಿದೆ. ಸ್ಪರ್ಧೆಯ ದಿನಾಂಕ ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದರು.

ಬಿಜೆಪಿ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ೨ ನಿಮಿಷ ಭಾಷಣ ಮಾಡಬೇಕು. ಪ್ರಜಾಪ್ರಭುತ್ವ ಮೌಲ್ಯಗಳ ಕಗ್ಗೊಲೆ, ಹಣದುಬ್ಬರ, ಅಗತ್ಯ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ ಸೇರಿದಂತೆ ಹಲವು ವಿಷಯಗಳ ಕುರಿತು ಮಾತನಾಡಬಹುದು. ಕನ್ನಡ, ಹಿಂದಿ, ಇಂಗ್ಲೀಷ್ ಭಾಷೆಗಳಲ್ಲಿ ಭಾಷಣ ಮಾಡಬಹುದು ಎಂದು ಅವರು ಹೇಳಿದರು.

ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಹತ್ತು ಮಂದಿ ವಿಜೇತರು ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಹೊಂದುತ್ತಾರೆ. ರಾಜ್ಯ ಮಟ್ಟದ ಮೊದಲ ಮೂವರು ವಿಜೇತರಿಗೆ ಮೊಬೈಲ್ ಬಹುಮಾನ ನೀಡಲಾಗುವುದು. ರಾಜ್ಯ ಮಟ್ಟದಲ್ಲಿ ಅಯ್ಕೆಯಾದ ಮೊದಲ ಹತ್ತು ವಿಜೇತರನ್ನು ದೆಹಲಿಯಲ್ಲಿ ನಡೆಯುವ ರಾಷ್ಟೀಯ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗುತ್ತದೆ. ಇಲ್ಲಿನ ವಿಜೇತರನ್ನು ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಯುವ ಕಾಂಗ್ರೆಸ್ ವಕ್ತಾರರಾಗಿ ನೇಮಕ ಮಾಡಲಾಗುವುದು ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್, ಯುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಸುರಯ್ಯಾ ಅಂಜುಂ, ಯುವ ಮುಖಂಡ ರಾದ ಶಬರೀಶ್, ಹಮ್ಮದ್, ದಿನೇಶ್ ಶೆಟ್ಟಿ, ಝಿಯಾನ್, ಶ್ವೇತಾ, ಪ್ರೀತಿ, ಸಾಯಿರಾಜ್ ಉಪಸ್ಥಿತರಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News