ತಾತ್ಕಾಲಿಕ ಬಿಡುಗಡೆ ಕೋರಿ ನವಾಬ್ ಮಲಿಕ್ ಸಲ್ಲಿಸಿದ ಮನವಿ ತಿರಸ್ಕರಿಸಿದ ಹೈಕೋರ್ಟ್

Update: 2022-06-10 18:21 GMT

ಮುಂಬೈ, ಜೂ. 10: ರಾಜ್ಯಸಭೆ ಚುನಾವಣೆಯಲ್ಲಿ ಮತದಾನ ಮಾಡಲು ತಾತ್ಕಾಲಿಕವಾಗಿ ಬಿಡುಗಡೆ ಮಾಡುವಂತೆ ಕೋರಿ ಕಾರಾಗೃಹದಲ್ಲಿರುವ ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್ ಸಲ್ಲಿಸಿದ ಮನವಿಯನ್ನು ಬಾಂಬೆ ಉಚ್ಚ ನ್ಯಾಯಾಲಯ ಶುಕ್ರವಾರ ತಿರಸ್ಕರಿಸಿದೆ.

ದೇಶದಿಂದ ಪರಾರಿಯಾಗಿರುವ ದಾವೂದ್ ಇಬ್ರಾಹೀಂ ಹಾಗೂ ಆತನ ಸಹವರ್ತಿಗಳು ಭಾಗಿಯಾಗಿದ್ದಾರೆಂದು ಹೇಳಲಾದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಮಲಿಕ್ ಅವರನ್ನು ಫೆಬ್ರವರಿ 23ರಂದು ಬಂಧಿಸಲಾಗಿತ್ತು.

ರಾಜ್ಯಸಭೆ ಚುನಾವಣೆಯ ಮತದಾನದಲ್ಲಿ ಪಾಲ್ಗೊಳ್ಳಲು ಒಂದು ದಿನದ ಜಾಮೀನು ನೀಡುವಂತೆ ಕೋರಿ ಮಲಿಕ್ ಅವರು ಸಲ್ಲಿಸಿದ್ದ ಮನವಿಯನ್ನು ಮುಂಬೈಯ ವಿಶೇಷ ನ್ಯಾಯಾಲಯ ಬುಧವಾರ ತಿರಸ್ಕರಿಸಿತ್ತು. ಎನ್‌ಸಿಪಿ ನಾಯಕರಾಗಿರುವ ಮಲಿಕ್ ಅವರು ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದರು. ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರು ಕೂಡ ಇದೇ ರೀತಿ ತಾತ್ಕಾಲಿಕ ಬಿಡುಗಡೆಗೆ ಕೋರಿ ಮನವಿ ಸಲ್ಲಿಸಿದ್ದರು. ಆದರೆ ಈ ಮನವಿಯ ಕುರಿತು ನ್ಯಾಯಾಲಯ ಇದುವರೆಗೆ ಆದೇಶ ನೀಡಿಲ್ಲ. ಮುಂಬೈಯ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಅವರು ಮಾಡಿದ ಆರೋಪಕ್ಕೆ ಸಂಬಂಧಿಸಿ ಎನ್‌ಸಿಪಿ ನಾಯಕರೂ ಆಗಿರುವ ದೇಶಮುಖ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಗರದ ಬಾರ್ ಹಾಗೂ ರೆಸ್ಟೋರೆಂಟ್‌ಗಳಿಂದ ಪ್ರತಿ ತಿಂಗಳು 100 ಕೋಟಿ ರೂಪಾಯಿ ಸುಲಿಗೆ ಹಣ ಸಂಗ್ರಹಿಸುವಂತೆ ದೇಶಮುಖ್ ಕೆಲವು ಅಧಿಕಾರಿಗಳಿಗೆ ಸೂಚಿಸಿದ್ದರು ಎಂದು ಆರೋಪಿಸಿ ಪರಮ್ ಬೀರ್ ಸಿಂಗ್ ಅವರು ಕಳೆದ ವರ್ಷ ಮಾರ್ಚ್‌ನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಅವರಿಗೆ ಪತ್ರ ಬರೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News