ಭ್ರಷ್ಟಾಚಾರ ಆರೋಪ : ಕಾರ್ಮಿಕ ಸಚಿವರ ವಜಾಕ್ಕೆ ಆಗ್ರಹ

Update: 2022-06-11 15:54 GMT

ಉಡುಪಿ : ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಲ್ಯಾಣ ಮಂಡಳಿಯಲ್ಲಿ ನೂರಾರು ಕೋಟಿ ಭ್ರಷ್ಟಾಚಾರ ನಡೆಸಿರುವ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಅವರನ್ನು ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸ ಬೇಕೆಂದು ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಆಗ್ರಹಿಸಿದೆ.

ಕೊರೊನಾ ಮತ್ತು ಕೊರೊನೋತ್ತರ ಈ ಕಾಲಘಟ್ಟದಲ್ಲಿ ಕಾರ್ಮಿಕ ಸಚಿವರು ಮತ್ತು ಮಂಡಳಿ ಕಾರ್ಯದರ್ಶಿಗಳು ಹಾಗೂ ಕಾರ್ಮಿಕ ಆಯುಕ್ತರು ಸೇರಿ ಮಂಡಳಿ ಸಭೆಯನ್ನು ಸೇರಿಸದೇ ಎಲ್ಲ ನಿಯಮಾವಳಿ ಹಾಗೂ ಕೇಂದ್ರ ಕಾರ್ಮಿಕ ಇಲಾಖೆಯ ಆದೇಶವನ್ನು ಉಲ್ಲಂಘಿಸಿ ಸಾಮಾಗ್ರಿಗಳನ್ನು ಖರೀದಿಸಿ ನೂರಾರು ಕೋಟಿಗಳ ಅವ್ಯವಹಾರ ವನ್ನು ನಡೆಸಿದ್ದಾರೆ.

ಕಾರ್ಮಿಕರಿಗೆ ಮತ್ತು ಅವಲಂಬಿತರಿಗೆ ಉಚಿತ ಆರೋಗ್ಯ ತಪಾಸಣೆ ಹೆಸರಲ್ಲಿ ಕಾರ್ಮಿಕ ಸಚಿವರು ಮತ್ತು ಮಂಡಳಿ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿ ಗಳು ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಹಣವನ್ನು ಲೂಟಿ ಹೊಡೆಯುತ್ತಿ ದ್ದಾರೆ. ಮುಖ್ಯಮಂತ್ರಿಗಳು ಈ ಬಗ್ಗೆ ಕ್ರಮ ವಹಿಸದಿದ್ದರೆ ಕಾರ್ಮಿಕ ಸಚಿವರ ರಾಜೀ ನಾಮೆಗೆ ಆಗ್ರಹಿಸಿ ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು.

ಜೂ.೨೬-೨೭ ರಂದು ತುಮಕೂರಿನಲ್ಲಿ ನಡೆಯುವ ರಾಜ್ಯ ಸಮ್ಮೇಳನದಲ್ಲಿ ಕಲ್ಯಾಣ ಮಂಡಳಿ ಭ್ರಷ್ಟಾಚಾರ ಹಾಗೂ ಕಾರ್ಮಿಕ ಸಚಿವರ ವಜಾ ಹಾಗೂ ಕಾರ್ಮಿಕ ಆಯುಕ್ತರ ವರ್ಗಾವಣೆಗಾಗಿ ಆಗ್ರಹಿಸಿ ಹೋರಾಟದ ಕಾರ್ಯ ಕ್ರಮದ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News