ಎಸ್‌ಡಿಎಂ ಕಾಲೇಜಿನಲ್ಲಿ ನವಜಾತ ಶಿಶು ಪ್ರಾಣಪ್ರತ್ಯಾಗಮನ ತರಬೇತಿ
ಉಡುಪಿ : ಕುತ್ಪಾಡಿಯ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಬಾಲರೋಗ ವಿಭಾಗ, ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ (ಐಎಪಿ), ರಾಷ್ಟ್ರೀಯ ನಿಯೋನಾಟಾಲಜಿ ವೇದಿಕೆ ಹಾಗೂ ಕೆಎಂಸಿ ಮಣಿಪಾಲದ ಪಿಡಿಯಾಟ್ರಿಕ್ಸ್ ವಿಭಾಗಗಳ ಸಹಯೋಗ ದೊಂದಿಗೆ ಎರಡು ದಿನಗಳ ನವಜಾತ ಶಿಶು ಪ್ರಾಣ ಪ್ರತ್ಯಾಗಮನ ತರಬೇತಿ ಯನ್ನು ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಂಗಳೂರಿನ ಇಂಡಿಯಾನಾ ಆಸ್ಪತ್ರೆಯ ಪೀಡಿಯಾಟ್ರಿಕ್ಸ್ ವಿಭಾಗದ ವೈದ್ಯ ಡಾ. ಅಭಿಷೇಕ್ ಫಡ್ಕೆ, ಎ.ಜೆ. ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಪೀಡಿಯಾಟ್ರಿಕ್ಸ್ ವಿಭಾಗದ ಮಕ್ಕಳ ತಜ್ಞ ಡಾ. ಅಶ್ವಿಜ್ ಶ್ರೀಯಾನ್, ಕೊಡಗು ಗೋಣಿಕೊಪ್ಪ, ಲೋಪಮುದ್ರಾ ಮೆಡಿಕಲ್ ಸೆಂಟರ್‌ನ ಶಿಶು ಮತ್ತು ಮಕ್ಕಳ ತಜ್ಞ ಡಾ. ಗೌರವ್ ಅಯ್ಯಪ್ಪ ಹಾಗೂ ಮಂಗಳೂರಿನ ಯೆನಪೊಯಾ ಸ್ಪೆಷಾಲಿಟಿ ಆಸ್ಪತ್ರೆಯ ಶಿಶು ತಜ್ಞ ಡಾ. ಮಿಥುನ್ ಹೆಚ್.ಕೆ. ಉಪಸ್ಥಿತರಿದ್ದರು.
ಕಾಲೇಜಿನ ಬಾಲರೋಗ ವಿಭಾಗದ ಮುಖ್ಯಸ್ಥರಾದ ಡಾ. ಪೃಥ್ವಿರಾಜ್ ಪುರಾಣಿಕ್ ಅತಿಥಿಗಳನ್ನು ಸ್ವಾಗತಿಸಿದರು. ಕಾಲೇಜಿನ ಪ್ರಸೂತಿತಂತ್ರ ಮತ್ತು ಸ್ತ್ರೀರೋಗ ವಿಭಾಗ ಮುಖ್ಯಸ್ಥ ಡಾ. ರಮಾದೇವಿ ಜಿ. ತರಬೇತಿಯ ಉದ್ದೇಶ ಹಾಗೂ ಮಹತ್ವದ ಕುರಿತು ಮಾತುಗಳನ್ನಾಡಿದರು. ಸಹಾಯಕ ಪ್ರಾಧ್ಯಾಪಕ ಡಾ. ಕಾವ್ಯ ವಂದಿಸಿದರು.
ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮೂಡಬಿದ್ರೆ, ಎಸ್‌ಡಿಎಂ ಆಯುರ್ವೇದ ಕಾಲೇಜು ಹಾಸನ ಹಾಗೂ ಉಡುಪಿಯ ಬಾಲರೋಗ ವಿಭಾಗ ಹಾಗೂ ಪ್ರಸೂತಿತಂತ್ರ ಹಾಗೂ ಸ್ತ್ರೀರೋಗ ವಿಭಾಗದ ೪೦ ಮಂದಿ ವಿದ್ಯಾರ್ಥಿ ಗಳಿಗೆ‘ನವಜಾತ ಶಿಶು ಪ್ರಾಣಪ್ರತ್ಯಾಗಮನ’ದ ಪ್ರಾತ್ಯಕ್ಷಿಕೆಯನ್ನು ನೀಡಲಾಯಿತು.
ವಿಶ್ವದಲ್ಲಿ ಹುಟ್ಟುವ ಪ್ರತಿ 100 ಮಕ್ಕಳಲ್ಲಿ ೯೦ರಷ್ಟು ಶಿಶುಗಳು ಗರ್ಭದಿಂದ ಹೊರ ವಾತಾವರಣಕ್ಕೆ ಸಹಜವಾಗಿಯೇ ಹೊಂದಿಕೊಳ್ಳುತ್ತವೆ. ಉಳಿದ ೧೦ ಮಕ್ಕಳಿಗೆ ಉಸಿರಾಟದ ಪ್ರಾರಂಭಿಕ ಪ್ರಯತ್ನಕ್ಕೆ ಸಹಕಾರ ಅಗತ್ಯ. ಅದರಲ್ಲೂ ಒಂದು ಮಗುವಿಗೆ ತೀವ್ರತರದ ಸಹಾಯಕವಾಗಿ ವೆಂಟಿಲೇಷನ್, ಇಂಟ್ಯುಬೇಷನ್ ಹಾಗೂ ಮೆಡಿಕೇಶನ್‌ನಂತಹ ಸಹಕಾರ ಅತ್ಯಗತ್ಯ ಎಂದು ಡಾ.ಅಶ್ವಿಜ್ ಶ್ರೀಯಾನ್ ತಿಳಿಸಿದರು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅಂಬಲಪಾಡಿ ಹೈಟೆಕ್ ಆಸ್ಪತ್ರೆಯ ವೈದ್ಯ ಡಾ. ಜನಾರ್ಧನ ಪ್ರಭು ಭಾಗವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ.ಮಮತಾ ಕೆ.ವಿ. ಅಧ್ಯಕ್ಷತೆ ವಹಿಸಿದ್ದು, ಬಾಲರೋಗ ವಿಭಾಗ ಮುಖ್ಯಸ್ಥ ಡಾ. ಪೃಥ್ವಿರಾಜ್ ಪುರಾಣಿಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಹಪ್ರಾಧ್ಯಾಪಕ ರಾದ ಡಾ. ನಾಗರತ್ನ ಎಸ್. ಜೆ. ಅತಿಥಿಗಳನ್ನು ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ. ಚಿತ್ರಲೇಖಾ ವಂದಿಸಿದರು.