‘ಸಂಕರ’ದ ಬಗ್ಗೆ ಆತಂಕವೇಕೆ?

Update: 2022-06-12 06:01 GMT

ದ್ವೇಷಸಾಧನೆಯೇ ತತ್ವಸಿದ್ಧಾಂತ ಮಾಡುವವರಿಗೆ ಅಂತಃಕರಣ ಇರುವುದಿಲ್ಲ, ಮಾತ್ರವಲ್ಲ, ಜ್ಞಾನಪರಂಪರೆಗಳ ಜತೆಗೆ ಜೈವಿಕ ಸಂಬಂಧವೂ ಇರುವುದಿಲ್ಲ. ಬೆರಕೆಗೆ ನಿಷೇಧಾತ್ಮಕ ಅರ್ಥ ಕೊಟ್ಟುಬಿಟ್ಟರೆ ಭಾರತ ಮಾತ್ರವಲ್ಲ ಜಗತ್ತಿನ ಎಲ್ಲ ದೇಶಗಳು ತಮ್ಮ ಪೂರ್ವಜರು ಮಾಡಿರುವ ಪ್ರಯೋಗದ ಫಲಗಳನ್ನು ನಿರಾಕರಿಸಬೇಕಾಗುವುದು.

  ಪರಿಷ್ಕೃತ ಪಠ್ಯಪುಸ್ತಕಗಳಲ್ಲಿ ‘ಸಂಕರ’ ಶಬ್ದಕ್ಕೆ ಕೊಡಲಾಗಿರುವ ವಿವಿಧ ಅರ್ಥಗಳ ಬಗ್ಗೆ ಚರ್ಚೆ ನಡೆಯುತ್ತಿದೆಯಷ್ಟೆ. ಈ ಟಿಪ್ಪಣಿಯ ಉದ್ದೇಶ, ಈ ಅರ್ಥಗಳ ಹಿಂದಿರಬಹುದಾದ ಮತಪಾಂಥಿಕ ಅಸಹನೆಯ ಆಯಾಮಗಳನ್ನು ವಿಶ್ಲೇಷಿಸುವುದಲ್ಲ. ಬದಲಿಗೆ ಸಂಕರ ಅಥವಾ ಬೆರಕೆಯ ಬಗೆಗೆ ಸಮಾಜದಲ್ಲಿರುವ ಆತಂಕ ಮತ್ತು ಅಸಹನೆಗಳು, ಸ್ವಾಗತ ಮತ್ತು ಮೆಚ್ಚುಗೆಗಳು, ನಮ್ಮ ಆಲೋಚನೆ, ಜೀವನಕ್ರಮ, ದರ್ಶನ, ಭಾಷೆ, ಧರ್ಮ, ಸಂಸ್ಕೃತಿಗಳನ್ನು ರೂಪಿಸುವಲ್ಲಿ, ಚಾರಿತ್ರಿಕವಾಗಿ ಎಷ್ಟು ಮಹತ್ವದ ಪಾತ್ರ ವಹಿಸಿವೆ ಎಂಬುದನ್ನು ವಿವರಿಸುವುದು. ‘ಸಂಕರ’ಕ್ಕೆ ಪರಿಷ್ಕೃತ ಪಠ್ಯಗಳಲ್ಲಿ ಬೆರಕೆ ಎಂದು ಕೊಟ್ಟಿರುವ ಮೊದಲನೆಯ ಅರ್ಥವು ಮೌಲ್ಯ ನಿರಪೇಕ್ಷಿತವಾಗಿದೆ ಮತ್ತು ಉಚಿತವಾಗಿದೆ. ಆದರೆ ಕಲಬೆರಕೆ ಮತ್ತು ಒಪ್ಪತಕ್ಕದ್ದಲ್ಲದ ಮಿಶ್ರಣ ಎಂಬ ಎರಡು ಮತ್ತು ಮೂರನೆಯ ಅರ್ಥಗಳು, ಮೌಲ್ಯಮಾಪಕ (ವ್ಯಾಲೂಲೋಡೆಡ್ ) ಮತ್ತು ತೀರ್ಪುದಾಯಕ (ಜಡ್ಜಮೆಂಟಲ್) ಆಗಿವೆ. ಪರಿಣಾಮದಲ್ಲಿ ಬೆರಕೆ ಕೆಟ್ಟದ್ದು ಎಂದು ಧ್ವನಿಸುತ್ತಿವೆ. ನಿಜ, ನಾವು ಸೇವಿಸುವ ಆಹಾರದಲ್ಲಿ ಕಲಬೆರಕೆಯು ಒಂದು ದೋಷವೇ. ಕನ್ನಡದಲ್ಲಿ ಇದನ್ನು ಸೂಚಿಸಲು ಬೆರಕೆಗೆ ‘ಕಲ’ (ಕಲಸು ಎಂಬುದರ ಸವೆರೂಪ?) ಎಂಬ ವಿಶೇಷಣ ಲಗತ್ತಿಸಲಾಗುತ್ತದೆ. ಈ ಮೂಲಕ ಬೆರಕೆ ಶಬ್ದಕ್ಕೆ ಹೀನಾರ್ಥವನ್ನು ಹೇರದೆ, ಮೌಲ್ಯಮುಕ್ತವಾಗಿ ಇಡಲಾಗುತ್ತದೆ. ಉದಾ: ಬೆರಕೆಸೊಪ್ಪಿನ ಸಾರು. ಭಾಳ ಬೆರಕಿ ಇದೀಯಾ ಎನ್ನುವಲ್ಲಿ, ಹುಟ್ಟಿನ ಆಂಶದ ಬಗ್ಗೆ ಸಣ್ಣವ್ಯಂಗ್ಯವಿದ್ದರೂ, ಇದುವೇ ಜಾಣತನಕ್ಕೆ ಕಾರಣವಾಗಿದೆ ಎಂಬ ಪ್ರಶಂಸೆಯೂ ಅಡಗಿದೆ. ತಳಿಶಾಸ್ತ್ರದ ಪ್ರಕಾರವಂತೂ ಬೆರಕೆಗೆ ಬಾಳುವ ಕಸುವು ಹೆಚ್ಚು. ಸಜಾತಿ ಶುದ್ಧಕ್ಕಲ್ಲ. ‘ಕುಸುಮಬಾಲೆ’ ಈ ಸಂಕರವನ್ನೇ ‘ಸಂಬಂಜ’ವೆಂದು ಕರೆಯುತ್ತದೆ. ಆದರೆ ಶ್ರೇಣೀಕೃತ ಸಾಂಪ್ರದಾಯಿಕ ಸಮಾಜಗಳಲ್ಲಿ ಬೆರಕೆಯ ಬಗ್ಗೆ ವಿಚಿತ್ರ ಆತಂಕ. ನಮ್ಮ ವ್ಯಾಕರಣಕಾರರು ಸಂಸ್ಕೃತ ಶಬ್ದಗಳ ಜತೆ ದೇಶ್ಯಶಬ್ದಗಳನ್ನು ಸೇರಿಸಿ ಸಮಾಸ ಸಂಧಿ ಮಾಡಬಾರದು ಎಂದು ಸಾವಿರ ಸಲ ಎಚ್ಚರಿಸುತ್ತಾರೆ. ಭಾಷಾಶುದ್ಧತೆ ಕಾಪಾಡುವುದು ಅವರ ಇರಾದೆ. ಆದರೆ ಜನಭಾಷೆಗಳು ನದಿಗಳಂತೆ. ಅವು ತಮಗೆ ಉಪಯುಕ್ತವಾದ ಪದ ಎಲ್ಲಿಂದ ಬಂದರೂ ಸ್ವೀಕರಿಸಿ ಬೆರೆಸಿಬಿಡುತ್ತವೆ. ಕನ್ನಡದಲ್ಲಿ ಫಾರಸಿ, ಉರ್ದು, ಆಂಗ್ಲ, ತುಳು, ತಮಿಳು, ತೆಲುಗು, ಮರಾಠಿ (ಪದಗಳನ್ನಲ್ಲ) ಸಾಲುಸಾಲು ಗಳನ್ನು ಒಳಗೊಂಡಿರುವ ಶಾಸನ, ಲಾವಣಿ, ಕಾವ್ಯ, ಕತೆ, ಕಾದಂಬರಿ, ಕ್ರಯಪತ್ರ, ನಾಟಕ, ತತ್ವಪದ, ರಂಗಗೀತೆ, ಸಿನೆಮಾ ಗೀತೆಗಳ ‘ನುಡಿಸಂಕರ ಸಾಹಿತ್ಯ’ದ ಭಂಡಾರವೇ ಇದೆ. ಕವಿರಾಜಮಾರ್ಗಕಾರನು, ಪಾಲಿಸಬೇಕಾದ ನಿಯಮಗಳೆಲ್ಲವನ್ನೂ ಹೇಳಿ, ಕಡೆಗೆ ಕನ್ನಡಿಗರು ಈ ‘ದೋಸಮನೆ ಗುಣದವೋಲ್’ ಪರಿಭಾವಿಸಿರುವುದರಿಂದ ಇದು ಒಪ್ಪಿತವೆಂದುಬಿಡುತ್ತಾನೆ. ಜಗತ್ತಿನ ಯಾವ ಜೀವಂತ ಜನಭಾಷೆಯೂ ಸಾಹಿತ್ಯ ಲೋಕವು ಮತ್ತೊಂದರಿಂದ ಸ್ವೀಕಾರವಿಲ್ಲದೆ ಬೆಳೆದಿಲ್ಲ. ಉರ್ದುವಂತೂ ಹುಟ್ಟಿದ್ದೇ ಸಂಕರದಿಂದ. ಈ ತತ್ವವು ಗಾಂಧಾರ ಮೊದಲಾದ ಶಿಲ್ಪಶೈಲಿಗೂ, ಇಂಡೋಸಾರ್ಸೆನಿಕ್ ವಾಸ್ತುಶಿಲ್ಪಗಳಿಗೂ, ನಾವುಣ್ಣುವ ಆಹಾರಕ್ಕೂ, ನಮ್ಮ ಸಾಹಿತ್ಯ, ಸಂಸ್ಕೃತಿ, ಧರ್ಮಗಳಿಗೂ ಅನ್ವಯವಾಗುತ್ತದೆ. ಡಿಎನ್‌ಎ ಸಂಶೋಧನೆ ಹಾಗೂ ಮಾನವ ವಲಸೆಯ ಚರಿತ್ರೆಗಳಂತೂ, ಜನಾಂಗಶುದ್ಧತೆಯ ಪರಿಕಲ್ಪನೆಯನ್ನೇ ಛಿದ್ರಗೊಳಿಸಿವೆ. ಆದರೂ ಬೆರಕೆಯನ್ನು ಒಪ್ಪದೆ, ತಮ್ಮ ‘ಮೂಲ’ದ ಪರಂಪರೆ, ಜನಾಂಗ, ಜಾತಿ, ಧರ್ಮ, ಸಂಸ್ಕೃತಿಗಳನ್ನು ಶುದ್ಧವಾಗಿ ಉಳಿಸಿಕೊಳ್ಳುವ ಜಿಗುಟುತನದ ಆಲೋಚನಾಕ್ರಮಗಳು ಎಲ್ಲ ಸಮಾಜಗಳಲ್ಲೂ ಉಳಿದುಕೊಂಡಿವೆ. ತಮ್ಮನ್ನು ಸೋಲಿಸಿ ಅಧಿಕಾರಸ್ಥವಾದ ಸಂಸ್ಕೃತಿಯ ಮುಂದೆ, ತನ್ನತನ ಉಳಿಸಿಕೊಳ್ಳುವ ಅಧಿಕಾರರಹಿತ ಸಮುದಾಯಗಳ ಜಿಗುಟತನವಾದರೆ, ಅದಕ್ಕೆ ನ್ಯಾಯಬದ್ಧ ಪ್ರತಿರೋಧದ ಅರ್ಥವಿದೆ. ವಸಾಹತುಶಾಹಿ ಆಳ್ವಿಕೆಯಲ್ಲಿ ವಿನಾಶಕ್ಕೆ ಈಡಾಗುತ್ತಿದ್ದ ತಮ್ಮ ಭಾಷೆ, ಚಿಂತನೆ, ಜೀವನಕ್ರಮ ಉಳಿಸಿಕೊಳ್ಳುವುದಕ್ಕೆ ಕೆಲವು ಆಫ್ರಿಕನ್ ಬುಡಕಟ್ಟುಗಳು ಈ ಜಿಗುಟುತನ ತೋರಿದವು. ಸಮಸ್ಯೆಯೆಂದರೆ, ಬಹುಜನಾಂಗ, ಬಹುಧರ್ಮ, ಬಹುಭಾಷೆಗಳಿರುವ ಸಮಾಜಗಳಲ್ಲಿ, ಮೇಲುಶ್ರೇಣಿ ಯಲ್ಲಿರುವ ಸಮುದಾಯಗಳು, ಮಡಿವಂತಿಕೆಯಿಂದ ರೂಢಿಸಿಕೊಳ್ಳುವ ಸಂಕರವಿರೋಧವು, ಶ್ರೇಷ್ಠತೆಯಿಂದ ಕೂಡಿರುವುದು; ದ್ವೇಷಸಿದ್ಧಾಂತಗಳಿಗೆ ಜನ್ಮ ನೀಡುವುದು. ಆರ್ಯರ ಜನಾಂಗಶುದ್ಧತೆಯ ಬಗ್ಗೆ ವಿಪರೀತ ಗೀಳಿದ್ದ ನಾಝಿಗಳು, ಅಲೆಮಾರಿಗಳನ್ನು ಅಶ್ವೇತರನ್ನು ಕೊಂದು ನಿವಾರಿಸಬೇಕೆಂದು ಆಲೋಚಿಸಿದ್ದರು. ಭಾರತದಲ್ಲೂ ವರ್ಣಸಂಕರ ಜಾತಿಸಂಕರ ಆಗದಂತೆ ಎಚ್ಚರವಹಿಸುವುದು ರಾಜರ ಪವಿತ್ರ ಕರ್ತವ್ಯವಾಗಿತ್ತು. ಕುಮಾರವ್ಯಾಸ ಭಾರತದಲ್ಲಿ ನಾರದ ಪಟ್ಟಾಭಿಷಿಕ್ತ ಧರ್ಮರಾಯನಿಗೆ ಕೇಳುವ ಮೊದಲ ಪ್ರಶ್ನೆ: ‘ರಾಜ್ಯದಲ್ಲಿ ಜಾತಿಸಂಕರ ಆಗಿಲ್ಲ ತಾನೇ?’ ಕಲ್ಯಾಣದ ಕ್ರಾಂತಿಯನ್ನು ಸಂಪ್ರದಾಯವಾದಿಗಳು ಸದೆಬಡೆಯಲು ಕಾರಣವಾಗಿದ್ದು ಜಾತಿಸಂಕರದ ಮದುವೆ ಎನ್ನುವುದು ಗಮನಾರ್ಹ. ಪಾಕಿಸ್ತಾನದ ಪಂಜಾಬಿನಲ್ಲಿ ಬುಡಕಟ್ಟು ಮುಸ್ಲಿಮರ ಹುಡುಗರು ಜಮೀನ್ದಾರಿ ಮನೆತನದ ಹುಡುಗಿಯನ್ನು ಪ್ರೇಮಿಸಿ ಕೊಲೆಯಾದ ಪ್ರಕರಣಗಳು ನೂರಾರು. ಆದರೂ ಕೊಡುಕೊಳೆ ಮತ್ತು ಬೆರಕೆಯನ್ನು ನಿಲ್ಲಿಸಲು ಯಾರಿಗೂ ಸಾಧ್ಯವಾಗಿಲ್ಲ.

  ವಿಶೇಷವೆಂದರೆ, ಬೆರಕೆಗಳು ಒಂದು ಕಾಲಘಟ್ಟದ ಬಳಿಕ ಸ್ವತಂತ್ರ ರೂಪತಾಳುವುದು. ಮಾನ್ಯಗೊಳ್ಳುವುದು. ಆರ್ಯರು, ಹೂಣರು, ಶಕರು, ಮಂಗೋಲರು, ಅರಬರು, ಪಾರ್ಸಿಗಳು ಹಾಗೂ ಯೂರೋಪಿಯನ್ನರ ಸಹಸ್ರಮಾನಗಳ ವಲಸೆಯ ಪರಿಣಾಮ, ಭಾರತದ ಭಾಷೆ ಧರ್ಮ ಸಾಹಿತ್ಯ ಸಂಸ್ಕೃತಿಗಳಲ್ಲಿ ನಾನಾ ಬಗೆಯ ಮಿಶ್ರಣಗಳನ್ನು ಆಗುಮಾಡಿತು. ಮಿಶ್ರಣಗಳು ಕಾಲಕ್ರಮೇಣ ಸ್ಥಳೀಯವಾಗಿಬಿಡುತ್ತವೆ. ಇದಕ್ಕೆ ನಮ್ಮ ಶಾಲಾಮಕ್ಕಳು ಕಲಿವ ಅಂಗ್ರೇಜಿ, ಅವು ಕ್ಯಾಂಪಸ್ಸುಗಳಲ್ಲಿ ಆಡುವ ಭಾಷೆ, ಉಡುವ ಉಡುಗೆಗಳೇ ಸಾಕ್ಷಿ. ಬಿಜಿಎಲ್ ಸ್ವಾಮಿಯವರ ‘ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ’ ಬೆರಕೆ ಕುರಿತ ನಮ್ಮ ಕಲ್ಪನೆಗಳನ್ನೇ ಕಂಗೆಡಿಸುತ್ತದೆ. ಈ ಕುರಿತು ನಮ್ಮಲ್ಲಿ ಆಳವಾಗಿ ಚಿಂತಿಸಿದವರು ಶಂಬಾ ಜೋಷಿ. ಆಸಕ್ತರು ಅವರ ‘ಮರಾಠಿ ಸಂಸ್ಕೃತಿ’ಯನ್ನು ಗಮನಿಸಬಹುದು. ಭಾರತದ ರಾಜಕೀಯ ಪಕ್ಷಗಳ ಹಿನ್ನೆಲೆಯಲ್ಲಿರುವ ಸಿದ್ಧಾಂತಗಳು ಎಲ್ಲೆಲ್ಲಿಂದ ವಲಸೆ ಬಂದಿವೆ?

   ಸಂಕರವಿಲ್ಲದೆ ಜಗತ್ತಿನ ಯಾವ ಭಾಷೆ, ಧರ್ಮ, ಸಂಸ್ಕೃತಿಗಳೂ ಉಳಿದಿಲ್ಲ. ಇದು ದರ್ಶನಗಳ ವಿಷಯದಲ್ಲೂ ಸತ್ಯ. ಸೂಫಿ ದರ್ಶನದ ಹಿಂದೆ ಅರಬ್ ಇರಾನಿನ ದಾರ್ಶನಿಕರ, ಕುರ್‌ಆನ್‌ನ, ಆಫ್ಘನ್ ಬೌದ್ಧರ, ಭಾರತದ ಅದ್ವೈತದ ಪ್ರೇರಣೆಗಳಿವೆ. ಸೂಫಿ ದಾರ್ಶನಿಕ ರೂಮಿ (ಈ ಹೆಸರು ಬಂದಿದ್ದೇ ರೋಂ ಶಬ್ದದಿಂದ) ಕುರ್‌ಆನ್‌ನ ಜತೆಗೆ ಗ್ರೀಕ್ ತತ್ವಶಾಸ್ತ್ರದಿಂದಲೂ ಪ್ರೇರಣೆ ಪಡೆದಿದ್ದರು. ಜೀವಪರ ಉಪಯುಕ್ತ ಸ್ವೀಕಾರಕ್ಕೆ ಬೆರಕೆಯ ಭಯದಿಂದ ಭಾರತವೆಂದೂ ಹಿಂಜರಿದಿಲ್ಲ. ನಾವು ತಿನ್ನುವ ಹಣ್ಣು ಧಾನ್ಯಗಳ ಹಿಂದೆ ಕಸಿಯ ಸಂಕರದ ಪ್ರಯೋಗಗಳಿವೆ. ತಾಮ್ರವು ಮಿಶ್ರವಾಗದೆ ಚಿನ್ನದಿಂದ ಆಭರಣ ಮಾಡಲಾಗದು. ಕೆಲವು ಚಾರಿತ್ರಿಕ ಸಂದರ್ಭಗಳಲ್ಲಿ ಅರ್ಥಪೂರ್ಣ ಸಂಕರವೇ ಹೆಚ್ಚು ಉಪಯುಕ್ತ ಮತ್ತು ಜೀವದಾಯಕ. ಎಂತಲೇ ಪಂಪ ಮಾರ್ಗ ಮತ್ತು ದೇಸಿಗಳನ್ನು ಬೆರೆಸಬಾರದು ಎಂಬ ನಿಯಮ ಮುರಿದು ‘ದೇಸಿಯೊಳ್ ಪುಗುವುದು, ಪೊಕ್ಕು ಮಾರ್ಗದೊಳೆ ತಳ್ವುದು’ ಎಂಬ ನಿಲುವಿಗೆ ಬಂದ ಬಿಎಂಶ್ರೀಯವರು ‘ಅವಳ ತೊಡುಗೆ ಇವಳಿಗಿಟ್ಟು ನೋಡಬಯಸಿದೆ’ ಎಂದು ಘೋಷಿಸಿ ಅನುವಾದ ಮಾಡಿದರು. ಸ್ವತಃ ಅದ್ವೈತಿಗಳಾಗಿದ್ದ ಸ್ವಾಮಿ ವಿವೇಕಾನಂದರು ಭಾರತಕ್ಕೆ ವೇದಾಂತದ ಮೆದುಳು, ಇಸ್ಲಾಮಿನ ದೇಹದ ಅಗತ್ಯವಿದೆಯೆಂದು ಸಾರಿದರು. ಸಂಕರವನ್ನು ಸ್ವೀಕರಿಸುವುದು, ಬಹುತ್ವವನ್ನು ಮನ್ನಿಸಿದಂತೆ.

   ದ್ವೇಷಸಾಧನೆಯೇ ತತ್ವಸಿದ್ಧಾಂತ ಮಾಡುವವರಿಗೆ ಅಂತಃಕರಣ ಇರುವುದಿಲ್ಲ, ಮಾತ್ರವಲ್ಲ, ಜ್ಞಾನಪರಂಪರೆಗಳ ಜತೆಗೆ ಜೈವಿಕ ಸಂಬಂಧವೂ ಇರುವುದಿಲ್ಲ. ಬೆರಕೆಗೆ ನಿಷೇಧಾತ್ಮಕ ಅರ್ಥ ಕೊಟ್ಟುಬಿಟ್ಟರೆ ಭಾರತ ಮಾತ್ರವಲ್ಲ ಜಗತ್ತಿನ ಎಲ್ಲ ದೇಶಗಳು ತಮ್ಮ ಪೂರ್ವಜರು ಮಾಡಿರುವ ಪ್ರಯೋಗದ ಫಲಗಳನ್ನು ನಿರಾಕರಿಸಬೇಕಾಗುವುದು. ಜಾತಿ, ಬಣ್ಣ, ಭಾಷೆ ಧರ್ಮಗಳ ಹೆಸರಲ್ಲಿ ತಾರತಮ್ಯವುಳ್ಳ ಸಮಾಜಗಳಲ್ಲಿ, ಬೆರಕೆಯ ಭಯವು, ತನ್ನಂತೆಯೇ ಜತೆಗಿರುವ ಸಹವಾಸಿ ಸಂಗತಿಯನ್ನು ಅನ್ಯಗೊಳಿಸುತ್ತದೆ (ಅದರಿಂಗ್), ದೂರೀಕರಿಸುತ್ತದೆ ಮತ್ತು ದ್ವೇಷಿಸುತ್ತದೆ. ಮಾಧ್ಯಮಗಳಲ್ಲಿ ಬಳಕೆಯಲ್ಲಿರುವ ‘ಅನ್ಯಧರ್ಮೀಯ’, ‘ಅನ್ಯಕೋಮಿನ’ ಇತ್ಯಾದಿ ನುಡಿಗಟ್ಟುಗಳ ಹಿಂದೆ; ತಮ್ಮ ಹಿತಾಸಕ್ತಿ ಮತ್ತು ಸಿದ್ಧಾಂತವನ್ನು ವಿರೋಧಿಸುವ ಹಿಂದೂಗಳ ಹೆಸರುಗಳನ್ನು ಮುಸ್ಲಿಮೀಕರಿಸುವ ಹಿಂದೆ ಇರುವ ರಾಜಕಾರಣವಿದು. ಅಂತರ್ ಧರ್ಮೀಯ-ಅಂತರ್ಜಾತೀಯ ಪ್ರೇಮಿಗಳ ಕೊಲೆಯ ಹಿಂದೆ ಇರುವ ಕ್ರೌರ್ಯವೂ ಬೆರಕೆಯ ಭಯ ಮತ್ತು ಸ್ವಶ್ರೇಷ್ಠತೆಯ ವ್ಯಸನದ ಪರಿಣಾಮ. ಒಂದು ಶಬ್ದಕ್ಕೆ ನಾವು ಕೊಡಮಾಡುವ ಅರ್ಥವು ಕೇವಲ ನಿಘಂಟಿಗೆ ಸಂಬಂಧಿಸಿರುವುದಿಲ್ಲ. ಅದರ ಹೊಟ್ಟೆಯೊಳಗೆ ಒಂದು ಚರಿತ್ರೆಯಿರುತ್ತದೆ. ಅದು, ಅದನ್ನು ಬಳಸುವವರು ಕಟ್ಟಬಯಸುವ ಸಮಾಜ ಮತ್ತು ದೇಶಗಳಕಲ್ಪನೆಗೂ (ಐಡಿಯಾ) ಲಗತ್ತಾಗಿರುತ್ತದೆ. ಅಂತಿಮವಾಗಿ ರಾಜಕಾರಣವಾಗಿರುತ್ತದೆ.

Writer - ಡಾ. ರಹಮತ್ ತರೀಕೆರೆ

contributor

Editor - ಡಾ. ರಹಮತ್ ತರೀಕೆರೆ

contributor

Similar News