ಬೈಂದೂರು ಕ್ಷೇತ್ರದ ಮಾಜಿ ಶಾಸಕ, ಪ್ರಗತಿಪರ ಕೃಷಿಕ ಎ.ಜಿ.ಕೊಡ್ಗಿ ನಿಧನ

Update: 2022-06-13 13:15 GMT

ಉಡುಪಿ : ಕರಾವಳಿ ರಾಜಕೀಯದ ಭೀಷ್ಮ ಎಂದು ಕರೆಸಿಕೊಳ್ಳುತಿದ್ದ ಹಿರಿಯ ಬಿಜೆಪಿ ನಾಯಕ, ಪ್ರಗತಿ ಪರ ಕೃಷಿಕ ಹಾಗೂ ಎರಡು ಬಾರಿಯ ಶಾಸಕ ಅಮಾಸೆಬೈಲ್ ಗೋಪಾಲಕೃಷ್ಣ  ಕೊಡ್ಗಿ (ಎ.ಜಿ.ಕೊಡ್ಗಿ) ಅಸೌಖ್ಯದಿಂದ ಇಂದು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

93 ವರ್ಷ ಪ್ರಾಯದ ಎ.ಜಿ.ಕೊಡ್ಗಿ ಡೆಂಗಿಗಾಗಿ ಕುಂದಾಪುರದ ಖಾಸಗಿ ಆಸ್ಪತ್ರೆ ದಾಖಲಾಗಿದ್ದು, ಬಳಿಕ ಕಳೆದ ಬುಧವಾರ ಅವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಅವರು ನಿಧನ ಹೊಂದಿದರು.

ಅವರು ಪತ್ನಿ, ಐವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಅಮೆರಿಕದಲ್ಲಿರುವ ಪುತ್ರಿಯ ಆಗಮನದ ಬಳಿಕ ನಾಳೆ ಅಮಾಸೆಬೈಲಿನಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಕುಂದಾಪುರ ತಾಲೂಕು ಅಮಾಸೆಬೈಲಿನಲ್ಲಿ ಕೃಷಿಕ ಕುಟುಂಬದಲ್ಲಿ 1929ರ ಅ.1ರಂದು ಜನಿಸಿದ ಎ.ಜಿ.ಕೊಡ್ಗಿ ಅವರ ತಂದೆ ಎ.ಕೃಷ್ಣರಾಯ ಕೊಡ್ಗಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಕಾನೂನು ಪದವಿ ಪಡೆದಿದ್ದ ಕೊಡ್ಗಿ ಕೆಲಕಾಲ ಹೈಕೋರ್ಟಿನ ನಿವೃತ್ತ ನ್ಯಾಯಾಧೀಶರಾಗಿದ್ದ ನಿಟ್ಟೂರು ಶ್ರೀನಿವಾಸ ರಾವ್ ಇವರ ಕೈಕೆಳಗೆ ವಕೀಲರಾಗಿ ಕೆಲಕಾಲ ಕೆಲಸ ನಿರ್ವಹಿಸಿದ್ದರು. ಆ ಬಳಿಕ ಊರಿಗೆ ಮರಳಿ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ತಂದೆಯವರ ನಿಧನದ ಬಳಿಕ 1967ರಲ್ಲಿ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಿದ ಕೊಡ್ಗಿ, 1972ರಿಂದ 83ರನರೆಗೆ ಕಾಂಗ್ರೆಸ್‌ನಿಂದ ಎರಡು ಬಾರಿ ಬೈಂದೂರು ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು. 1993ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡ ಅವರು 1994ರಲ್ಲಿ ಕುಂದಾಪುರದಿಂದ ಸ್ಪರ್ಧಿಸಿ ಪ್ರತಾಪ್‌ಚಂದ್ರ ಶೆಟ್ಟಿ ಅವರಿಂದ ಪರಾಭವಗೊಂಡಿದ್ದರು. ಆ ಬಳಿಕ ಜಿಲ್ಲೆಯಲ್ಲಿ  ಬಿಜೆಪಿ ಪಕ್ಷವನ್ನು ಸಶಕ್ತಗೊಳಿಸಲು ಹೆಚ್ಚಿನ ಸಮಯವನ್ನು ಮೀಸಲಿಟ್ಟಿದ್ದ ಅವರು ಸ್ಪರ್ಧಾ ರಾಜಕೀಯದಿಂದ ಹಿಂದೆ ಸರಿದು ತಾನು ರಾಜಕೀಯಕ್ಕೆ ಕರೆತಂದ ಹಾಲಾಡಿ ಶ್ರೀನಿವಾಸ ಶೆಟ್ಟಿ, 1999ರಿಂದ ಕುಂದಾಪುರದಿಂದ ಬಿಜೆಪಿ ಪಕ್ಷದಿಂದ ಸತತವಾಗಿ ಗೆಲ್ಲಲು ಕಾರಣಕರ್ತರಾಗಿದ್ದರು.

ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಕರಾವಳಿ ಜಿಲ್ಲೆಯನ್ನು ಬಿಜೆಪಿಯ ತೆಕ್ಕೆಗೆ ತರುವಲ್ಲಿ ಕೊಡ್ಗಿಯವರ ಪಾತ್ರವೂ ದೊಡ್ಡದಿದೆ. ಆಸ್ಕರ್ ಫೆರ್ನಾಂಡೀಸ್ ವಿರುದ್ಧ ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಎಂ. ಜಯರಾಮ ಶೆಟ್ಟಿ ಅವರನ್ನು ನಿಲ್ಲಿಸಿ, ಗೆಲ್ಲಿಸಿದ್ದ ಕೊಡ್ಗಿ, ಮುಂದೆ ಮನೋರಮಾ ಮಧ್ವರಾಜರನ್ನು ಕಾಂಗ್ರೆಸ್‌ನಿಂದ ಕರೆತಂದು ಉಡುಪಿಯಿಂದ  ವಿನಯಕುಮಾರ್ ಸೊರಕೆ ವಿರುದ್ಧ ಲೋಕಸಭಾ ಚುನಾವಣೆಯಲ್ಲಿ ನಿಲ್ಲಿಸಿ ಗೆಲ್ಲಿಸಿದ್ದರು.

ಬಿಜೆಪಿಯ ಕುಂದಾಪುರ ತಾಲೂಕು ಅಧ್ಯಕ್ಷ, ಜಿಲ್ಲಾಧ್ಯಕ್ಷ, ರಾಜ್ಯ ಬಿಜೆಪಿ ಉಪಾಧ್ಯಕ್ಷ, ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಇವರು, ಮಂಗಲೂರು ಜಿಲ್ಲಾ ಪರಿಷತ್ ಸದಸ್ಯ, ಆರ್ಥಿಕ ಸಮಿತಿಯ ಸದಸ್ಯರೂ ಆಗಿಯೂ ಕಾರ್ಯ ನಿರ್ವಹಿಸಿದ್ದರು.

2006ರಿಂದ 2008ರವರೆಗೆ ರಾಜ್ಯ ಮೂರನೇ ಹಣಕಾಸು ಆಯೋಗದ ಅಧ್ಯಕ್ಷರಾಗಿದ್ದ ಇವರು ಆ ಬಳಿಕ ಹಣಕಾಸು ಆಯೋಗದ ಅನುಷ್ಠಾನ ಸಮಿತಿಯ ಅಧ್ಯಕ್ಷರೂ ಆಗಿದ್ದರು.ಎಪಿಎಂಸಿ ಅಧ್ಯಕ್ಷ, ಡಿಸಿಸಿ ಬ್ಯಾಂಕಿನ ನಿರ್ದೇಶಕ, ಶಂಕರನಾರಾಯಣ ಸಿಎ ಬ್ಯಾಂಕ್ ಅಧ್ಯಕ್ಷ ಹಾಗೂ 1982ರಿಂದ 90ರವರೆಗೆ ಕರ್ಣಾಟಕ ಬ್ಯಾಂಕಿನ ನಿರ್ದೇಶಕರೂ ಆಗಿದ್ದರು.

2013ರಲ್ಲಿ ರಾಜಕೀಯ ನಿವೃತ್ತಿ ಘೋಷಿಸಿದ್ದು, ತಮ್ಮ ಹುಟ್ಟೂರು ಅಮಾಸೆಬೈಲಿನ ಸಮಗ್ರ ಅಭಿವೃದ್ಧಿಗೆ ಕಂಕಣತೊಟ್ಟು ಅದನ್ನು ಸಂಪೂರ್ಣ ಸೋಲಾರ್ ಗ್ರಾಮವಾಗಿ ಪರಿವರ್ತಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಪ್ರಗತಿಪರ ಕೃಷಿಕರಾಗಿದ್ದ ಇವರು ದೇವರಾಜ ಅರಸು ಕಾಲದಲ್ಲಿ ಭೂಮಸೂದೆ ಕಾನೂನನ್ನು  ಕುಂದಾಪುರ ತಾಲೂಕಿನಲ್ಲಿ ತಾನೇ ಮುಂದೆ ನಿಂತು ಅನುಷ್ಠಾನಗೊಳಿಸಿದ್ದರು. ಗ್ರಾಮೀಣಾಭಿವೃದ್ಧಿ ಹಾಗೂ ನದಿ ಜೋಡಣೆಯ ‘ಸೌಭಾಗ್ಯ ಸಂಜೀವಿನಿ’ ಯೋಜನೆ ಇವರ ಉಳಿದ ಆಸಕ್ತಿಯ ಕ್ಷೇತ್ರವಾಗಿದ್ದವು.

ಎ.ಜಿ.ಕೊಡ್ಗಿ ಅವರ ನಿಧನಕ್ಕೆ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಹಿರಿಯ ಕೃಷಿ ಸಾಧಕರೂ, ಮಾಜಿ ಶಾಸಕರೂ ಆದ ಎ.ಜಿ.ಕೊಡ್ಗಿ ಅವರ ನಿಧನದ ವಾರ್ತೆ ತಿಳಿದು ತೀವ್ರ ವಿಷಾಧವಾಗಿದೆ.

ಕೃಷಿಯಿಂದ ಅಗಾಧ ಸಾಧನೆ ಮಾಡಲು ಸಾಧ್ಯವಿದೆ ಎಂಬುದಕ್ಕೆ ಎ.ಜಿ.ಕೊಡ್ಗಿ ನಿದರ್ಶನವಾಗಿದ್ದು ಕೃಷಿ ಋಷಿಯೇ ಆಗಿದ್ದರು ಗ್ರಾಮ ಸ್ವರಾಜ್ಯದ ಬಗ್ಗೆ ಅವರಿಗಿದ್ದ ಅಪರಿಮಿತ ಜ್ಞಾನ ಮತ್ತು ಅಮಾಸೆಬೈಲು ಗ್ರಾಮದ ಏಳಿಗೆಗಾಗಿ ಅವರು ಕೈಗೊಂಡ ಕಾರ್ಯಕ್ರಮಗಳು ಮಾದರಿ ಎನಿಸಿದ್ದವು ಎಂದವರು ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

Koo App
ಕರ್ನಾಟಕ ಕರಾವಳಿ ಭಾಗದ ನಮ್ಮ ಪಕ್ಷದ ಹಿರಿಯ ನಾಯಕರು, ಮಾಜಿ ಶಾಸಕರು, ರಾಜ್ಯ ಮೂರನೇಯ ಹಣಕಾಸು ಆಯೋಗದ ಮಾಜಿ ಅಧ್ಯಕ್ಷರಾದ ಶ್ರೀ ಎ.ಜಿ. ಕೊಡ್ಗಿ ಅವರು ನಿಧನರಾದ ಸುದ್ದಿ ತಿಳಿದು ತುಂಬಾ ದುಃಖಿತನಾಗಿದ್ದೇನೆ‌. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಿ, ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ‌. ಓಂ ಶಾಂತಿಃ - Basavaraj Bommai (@bsbommai) 13 June 2022
Koo App
ಕರಾವಳಿಯ ರಾಜಕೀಯ ರಂಗದ ಭೀಷ್ಮ, ಭಾಜಪಾ ಹಿರಿಯ ಮುಖಂಡ, ಆತ್ಮೀಯರು ಹಾಗೂ ಗುರು ಸ್ಥಾನಿಯರಾಗಿದ್ದ ಶ್ರೀ ಎ.ಜಿ.ಕೊಡ್ಗಿ ಅವರ ಅಗಲುವಿಕೆಯ ಸುದ್ದಿ ಅತೀವ ದುಃಖವನ್ನು ತಂದಿದೆ. ಅವರು ಕೃಷಿ, ಸಹಕಾರ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಅಪಾರ ಸಾಧನೆಗಳನ್ನು ಮಾಡಿದ್ದರು. ಭಗವಂತನು ಅವರ ಆತ್ಮಕ್ಕೆ ಸದ್ಗತಿಯನ್ನು ಕರುಣಿಸಲಿ ಎಂದು ಪ್ರಾರ್ಥನೆ. ಓಂ ಶಾಂತಿ! - Shobha Karandlaje (@shobhabjp) 13 June 2022

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News