ಸಿದ್ಧಗೊಳ್ಳುತ್ತಿದೆ ಸಮಗ್ರ ಕನ್ನಡ ಭಾಷಾ ನೀತಿ ವಿಧೇಯಕ: ಡಾ.ಟಿ.ಎಸ್ ನಾಗಾಭರಣ

Update: 2022-06-14 15:01 GMT
ಡಾ.ಟಿ.ಎಸ್ ನಾಗಾಭರಣ

ಉಡುಪಿ: ರಾಜ್ಯದಲ್ಲಿ ಕನ್ನಡದ ಸಮಗ್ರ ಅಭಿವೃದ್ಧಿ ಸಾಧ್ಯವಾಗುವಂತೆ, ಪೂರಕವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ‘ಸಮಗ್ರ ಕನ್ನಡ ಭಾಷಾ ನೀತಿ ವಿಧೇಯಕ’ವೊಂದನ್ನು ಸಿದ್ಧಪಡಿಸುತಿದ್ದು, ಇದನ್ನು ತನ್ನ ಅಧಿಕಾರಾವಧಿ ಮುಗಿಯುವುದಕ್ಕೆ ಮೊದಲೇ ಸರಕಾರಕ್ಕೆ ನೀಡಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಟಿ.ಎಸ್ ನಾಗಾಭರಣ ಹೇಳಿದ್ದಾರೆ.

ಮಣಿಪಾಲದ ಉಡುಪಿ ಜಿಲ್ಲಾ ಪಂಚಾಯತ್‌ನ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲೆಯಲ್ಲಿ ಕನ್ನಡ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು.

ಈ ವಿಧೇಯಕವನ್ನು ಸರಕಾರ ಒಪ್ಪಿಕೊಂಡರೆ, ರಾಜ್ಯದಲ್ಲಿ ಮಾತೃಭಾಷಾ ಶಿಕ್ಷಣಕ್ಕೆ ಒತ್ತು ಸಿಗಲಿದೆ. ಸಮಗ್ರ ಕನ್ನಡ ಭಾಷಾ ನೀತಿ, ಉದ್ಯೋಗ, ಶಿಕ್ಷಣ ಹಾಗೂ ಆಡಳಿತದಲ್ಲಿ ಅವುಗಳ ಪರಿಣಾಮಕಾರಿ ಅನುಷ್ಠಾನ ಸಾಧ್ಯವಾಗಲಿದೆ ಎಂದು ತಿಳಿಸಿದ ನಾಗಾಭರಣ, ವಿಧೇಯಕದ ಕುರಿತು ಹೆಚ್ಚಿನ ಮಾಹಿತಿ ಹಂಚಿಕೊಳ್ಳಲು ನಿರಾಕರಿಸಿದರು. ಅದೀಗ ಸಿದ್ಧತಾ ಹಂತದಲ್ಲಿದ್ದು ಈಗಲೇ ಎಲ್ಲಾ ವಿಷಯ ಬಹಿರಂಗ ಪಡಿಸಲಾಗದು ಎಂದರು.

ನೀವು ನೀಡುವ ವರದಿಯನ್ನು ಸರಕಾರ ಒಪ್ಪಿಕೊಂಡು ಅನುಷ್ಠಾನಗೊಳಿಸ ಬಹುದೇ ಅಥವಾ ಸರೋಜಿನಿ ಮಹಿಷಿ ವರದಿಯಂತಾದೀತೆ ಎಂದು ಅವರನ್ನು ಪ್ರಶ್ನಿಸಿದಾಗ, ನಕ್ಕು ಅದನ್ನು ನನಗೆ ಹೇಳಲು ಸಾಧ್ಯವಿಲ್ಲ ಎಂದರು. 

105 ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸ್ಸು: ರಾಜ್ಯದಲ್ಲಿ ಕನ್ನಡ ಬಳಕೆ ಹಾಗೂ ಅನುಷ್ಠಾನದಲ್ಲಿ ಕರ್ತವ್ಯ ಲೋಪ ಎಸಗಿದ, ನಿರ್ಲಕ್ಷ್ಯ ತೋರಿದ ರಾಜ್ಯದ ಒಟ್ಟು 105 ಮಂದಿ ಐಎಎಸ್ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಪ್ರಾದಿಕಾರ ಸರಕಾರಕ್ಕೆ ಶಿಫಾರಸ್ಸು ಮಾಡಿದೆ ಎಂದು ಖ್ಯಾತ ಕನ್ನಡ ಚಲನಚಿತ್ರ ನಿರ್ದೇಶಕರೂ ಆಗಿರುವ ಟಿ.ಎಸ್.ನಾಗಾಭರಣ ನುಡಿದರು.

ಆದರೆ ಇದುವರೆಗೆ ವರದಿಯ ಕುರಿತಂತೆ ಯಾವುದೇ ಕ್ರಮವನ್ನು ಸರಕಾರ ಕೈಗೊಂಡಿಲ್ಲ ಎಂದವರು ಬೇಸರ ವ್ಯಕ್ತಪಡಿಸಿದರು. ಈ ಅಧಿಕಾರಿಗಳು ಕನ್ನಡದ ಬಗ್ಗೆ ಪ್ರೀತಿಯನ್ನು ತೋರಿಸಬೇಕು ಎಂದ ಅವರು, ರಾಜ್ಯದಲ್ಲಿರುವ ಐಎಎಸ್, ಐಪಿಎಸ್ ಹಾಗೂ ಎಎಫ್‌ಎಸ್ ಅಧಿಕಾರಿಗಳಿಗೆ ಒಂದು ದಿನದ ಕನ್ನಡ ಕಾರ್ಯಾಗಾರವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಏರ್ಪಡಿಸಲು ಸಿದ್ಧವಿದೆ ಎಂದು ಸರಕಾರಕ್ಕೆ ಪತ್ರವನ್ನು ಬರೆಯಲಾಗಿದೆ ಎಂದೂ ಅವರು ತಿಳಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ತಮ್ಮ ಇದುವರೆಗೆ ಸಾಧನೆ ಏನು ಎಂದು ಪ್ರಶ್ನಿಸಿದಾಗ, ಸಾಧನೆ ಏನೂ ಇಲ್ಲ ಎಂದು ನಗುತ್ತಾ ಉತ್ತರಿಸಿದರು. ನಾನು ಏನಾದರೂ ಸಾಧನೆ ಮಾಡಿದ್ದರೆ ಅದನ್ನು ನೀವು ಮಾಧ್ಯಮದ ಮಂದಿ ಹಾಗೂ ಸಾರ್ವಜನಿಕರು ಹೇಳಬೇಕು. ನಾನಲ್ಲ ಎಂದರು.

ಪ್ರತಿ ಸಮುದಾಯ ಹಾಗೂ ಪ್ರತಿಯೊಬ್ಬರ ಸಹಕಾರದಿಂದ ರಾಜ್ಯದಲ್ಲಿ ಕನ್ನಡದ ಅಭಿವೃದ್ಧಿ ಸಾಧ್ಯವಾಗಲಿದೆ. ಅದೇ ರೀತಿ ಸರಕಾರಿ ಕಚೇರಿಗಳಲ್ಲೂ ಕನ್ನಡದ ಅನುಷ್ಠಾನ ಪ್ರತಿಯೊಂದು ಇಲಾಖೆಗಳ ಪರಸ್ಪರ ಸಮನ್ವಯ ದಿಂದ ಮಾತ್ರ ಸಾಧ್ಯವಾಗಲಿದೆ. ಪ್ರತಿ ಇಲಾಖೆಗಳ ಇಚ್ಛಾಶಕ್ತಿಯಿಂದ ಮಾತ್ರ ಇದು ಪರಿಪೂರ್ಣವಾಗಿ ಅನುಷ್ಠಾನ ಗೊಳ್ಳಲಿದೆ. ಇದನ್ನೇ ನಾನು ಜಿಲ್ಲಾಧಿಕಾರಿಗಳಿಗೆ  ಮನದಟ್ಟು ಮಾಡಿದ್ದೇನೆ ಎಂದರು.

ಇತ್ತೀಚಿನ ದಿನಗಳಲ್ಲಿ ಪ್ರಾಧಿಕಾರ ಕನ್ನಡದ ವಿಷಯದಲ್ಲಿ ಹೆಚ್ಚಿನ ಮುತುವರ್ಜಿ ತೋರದೇ, ಹಿಂದಿ ಭಾಷಾ ವಿವಾದ, ಕನ್ನಡ ಪಠ್ಯಪುಸ್ತಕಗಳ ವಿವಾದದಲ್ಲಿ ಮೌನಕ್ಕೆ ಶರಣಾಗಿರುವ ಬಗ್ಗೆ ನಾಗಾಭರಣರನ್ನು ಪ್ರಶ್ನಿಸಿದಾಗ, ನಿಮಗೆ ಮಾಹಿತಿಯ ಕೊರತೆ ಇದ್ದು, ಕನ್ನಡದ ಎಲ್ಲಾ ವಿಷಯಗಳಲ್ಲೂ ಪ್ರಾಧಿಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ ಎಂದರು.

ಪ್ರಸ್ತುತ ನಡೆದಿರುವ ಕನ್ನಡ ಪಠ್ಯಪುಸ್ತಕ ಪರಿಷ್ಕರಣೆಯ ವಿವಾದದಲ್ಲೂ ನಾವು ನಮ್ಮ ನಿಲುವನ್ನು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಸ್ಪಷ್ಟಪಡಿಸಿದ್ದೇವೆ. ಅಪ್ಪ- ಅಮ್ಮನ ಜಗಳದಲ್ಲಿ ಮಕ್ಕಳು ಬಡವಾಗಬಾರದು ಎಂಬುದು ನಮ್ಮ ನಿಲುವಾಗಿದೆ ಎಂದು ನಾಗಾಭರಣ ಹೇಳಿದರು.

ರಾಜ್ಯದಲ್ಲಿ ಹಾಗೂ ಜಿಲ್ಲೆಯಲ್ಲಿ ಮಕ್ಕಳ ಕೊರತೆಯ ಕಾರಣ ನೀಡಿ ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವ ಬಗ್ಗೆ, ಕನ್ನಡ ಶಾಲೆಗಳಲ್ಲಿ ಶಿಕ್ಷಕರ ಕೊರತೆಯ ಕುರಿತು ಅವರ ಗಮನ ಸೆಳೆದಾಗ, ಜಿಲ್ಲೆಯಲ್ಲಿ ಹೀಗೆ ಮುಚ್ಚಿರುವ ಹಾಗೂ ಮುಚ್ಚಲಾಗುವ ಶಾಲೆಗಳ ಸಂಖ್ಯೆ, ಕೊರತೆ ಇರುವ ಶಿಕ್ಷಕರ ಸಂಖ್ಯೆಯ ಬಗ್ಗೆ ವರದಿಯೊಂದನ್ನು ನೀಡುವಂತೆ ಡಿಡಿಪಿಐಗೆ ಸೂಚಿಸಲಾಗಿದೆ. ವರದಿ ಸಿಕ್ಕಿದ ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಜಿಲ್ಲೆಗೆ ರಂಗ ಮಂದಿರ: ಉಡುಪಿಯ ಆದಿಉಡುಪಿಯಲ್ಲಿ ೧.೩೭ ಎಕರೆ ಪ್ರದೇಶದಲ್ಲಿ ಸುಮಾರು ೫ ಕೋಟಿ ರೂ. ವೆಚ್ಚದಲ್ಲಿ ರಂಗ ಮಂದಿರದ ನಿರ್ಮಾಣಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಅದೇ ರೀತಿ ಅಜ್ಜರಕಾಡಿನಲ್ಲಿ ಕನ್ನಡ ಭವನದ ನಿರ್ಮಾಣಕ್ಕೂ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News