''ಬಸ್ ವ್ಯವಸ್ಥೆ ಕಲ್ಪಿಸಿ ಇಲ್ಲ ಅಂದರೆ ಶಾಲೆಗೆ ಹೋಗಲ್ಲ'': ರಸ್ತೆ ಮಧ್ಯೆ ವಿದ್ಯಾರ್ಥಿಗಳ ಪ್ರತಿಭಟನೆ

Update: 2022-06-14 16:54 GMT

ನಂಜನಗೂಡು,ಜೂ.14: ಬಸ್ ವ್ಯವಸ್ಥೆ ಕಲ್ಪಿಸಿ ಇಲ್ಲ ಅಂದರೆ ನಾವು ಶಾಲೆಗೆ ಹೋಗಲ್ಲ ಎಂದು ವಿಧ್ಯಾರ್ಥಿಗಳು ಪ್ರತಿಭಟಿಸಿ ಶಾಲೆಯನ್ನು ತೊರೆದಿರುವ ವಿಧ್ಯಾರ್ಥಿಗಳು ರಸ್ತೆ ಮಧ್ಯದಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.

ನಂಜನಗೂಡು ತಾಲೂಕಿನ ವೆಂಕಟಾಚಲಪುರ ಹಾದನೂರ ಒಡೆಯನಪುರ ಗ್ರಾಮದ ಮಕ್ಕಳು ಮಂಗಳವಾರ  ಇಂತಹ ಗಟ್ಟಿ ನಿರ್ಧಾರ ಕೈಗೊಂಡಿದ್ದು ಮಕ್ಕಳ ನಿರ್ಧಾರಕ್ಕೆ ಪೋಷಕರೂ ಸಹ ಬೆಂಬಲ ಸೂಚಿಸಿದ್ದಾರೆ.ಗ್ರಾಮಪಂಚಾಯತ್ ಸದಸ್ಯರಾದ ಬಂಗಾರ, ಶಿವರಾಜು ರವರು ಸಹ ಪ್ರತಿಭಟನೆಯಲ್ಲಿ ಭಾಗಿಯಾಗಿ ಬೆಂಬಲ ವ್ಯಕ್ತಪಡಿಸಿ ವೆಂಕಟಾಚಲಪುರ  ಗ್ರಾಮದ ಮುಖ್ಯ ರಸ್ತೆಯಲ್ಲಿ  ಕುಳಿತು ಪ್ರತಿಭಟನೆ ನಡೆಸಿ ಘೋಷಣೆ ಕೂಗಿದ್ದಾರೆ.

ವೆಂಕಟಾಚಲಪುರ ಮತ್ತು ಹಾದನೂರ ಒಡೆಯನಪುರ ಗ್ರಾಮದಿಂದ ದಿನನಿತ್ಯ 40 ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಹೆಡಿಯಾಲ ಗ್ರಾಮದ ಸರ್ಕಾರಿ ಶಾಲೆಗೆ ನಡೆದು ಹೋಗಬೇಕಿದೆ. ಪ್ರತಿನಿತ್ಯ 4 ಕಿಲೋ ಮೀಟರ್ ನಡೆದು ತೆರಳಬೇಕಾಗಿದೆ. ದಿನನಿತ್ಯ 8 ಕಿಲೋ ಮೀಟರ್ ನಡೆದು ವಿದ್ಯಾಭ್ಯಾಸ ಪಡೆಯುವ ದುಃಸ್ಥಿತಿ ಎದುರಾಗಿದ್ದು ಇದರ ಜೊತೆ 6 ಕೆಜಿ ತೂಕದ ಬ್ಯಾಗ್ ಹೊತ್ತು ನಡೆಯುವುದು ಸಾಧ್ಯವಾಗುತ್ತಿಲ್ಲ.ಈ ಹಿಂದೆ ಇದ್ದ ಚಿಕ್ಕಬರಗಿ ಮತ್ತು ಬಂಕಹಳ್ಳಿಗೆ ನಮ್ಮ ಗ್ರಾಮದ ಮಾರ್ಗವಾಗಿ ತೆರಳುತ್ತಿದ್ಧ ಬಸ್ ವ್ಯವಸ್ಥೆಯನ್ನು ಇದ್ದಕ್ಕಿದ್ದಂತೆ ಧಿಢೀರ್ ಸ್ಥಗಿತಗೊಳಿಸಿದ್ದಾರೆ. ಸರ್ಕಾರಿ ಬಸ್ ಸೌಲಭ್ಯಕ್ಕಾಗಿ ಹಲವಾರು ಬಾರಿ ಸ್ಥಳೀಯ ಜನಪ್ರತಿನಿಧಿಗಳ ಬಳಿ ಮನವಿ ಮಾಡಿಕೊಂಡಿದ್ದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರಣವಿಲ್ಲದೆ ಬಸ್ ರದ್ದುಗೊಳಿಸಿರುವುದು ಖಂಡನೀಯ. ಮಾರ್ಗಮಧ್ಯೆ ಕಾಡುಪ್ರಾಣಿಗಳ ಕಾಟವಿದೆ.ಅಪಾಯವಾದರೆ ಯಾರು ಹೊಣೆ ಎಂದು ಪ್ರಶ್ನಿಸಿರುವ ವಿಧ್ಯಾರ್ಥಿಗಳು ಬಸ್ ವ್ಯವಸ್ಥೆ ಇಲ್ಲದಿದ್ದಲ್ಲಿ ಶಾಲೆಗೆ ಹೋಗುವುದಿಲ್ಲ ಎಂದು ತೀರ್ಮಾನಿಸಿದ್ದಾರೆ. ಪೋಷಕರೂ ಸಹ ಮಕ್ಕಳನ್ನ ಶಾಲೆಗೆ ಕಳುಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನೆಯಲ್ಲಿ ಗ್ರಾಪಂ ಸದಸ್ಯರು ಗ್ರಾಮದ ಯಜಮಾನರಾದ ವೆಂಕಟೇಶ್ ವಿದ್ಯಾರ್ಥಿಗಳಾದ ಸಂಗೀತ,ಐಶ್ವರ್ಯ, ಅನು, ಗೀತಾ, ಕೀರ್ತಿ ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News