ಉಡುಪಿ: 50 ದೇಶಗಳ ಜಾನಪದ ಮುಖವಾಡಗಳ ಪ್ರದರ್ಶನಕ್ಕೆ ಚಾಲನೆ

Update: 2022-06-16 15:01 GMT

ಉಡುಪಿ : ವಿಶ್ವದ ಸುಮಾರು ಐವತ್ತು ದೇಶಗಳ ನೂರೈವತ್ತಕ್ಕೂ ಅಧಿಕ ಜಾನಪದ ಮುಖವಾಡಗಳ ಪ್ರದರ್ಶನ ವನ್ನು ಉಡುಪಿ ಜಿಲ್ಲಾಧಿಕಾರಿ  ಕೂರ್ಮಾರಾವ್ ಎಂ. ಅವರು ಗುರುವಾರ ಸಂಜೆ ಉಡುಪಿ ಕುಂಜಿಬೆಟ್ಟಿನಲ್ಲಿರುವ ಅದಿತಿ ಆರ್ಟ್ ಗ್ಯಾಲರಿಯಲ್ಲಿ ಉದ್ಘಾಟಿಸಿದರು.

50 ದೇಶಗಳ 150ಕ್ಕೂ ಅಧಿಕ ಜಾನಪದ ಮುಖವಾಡಗಳನ್ನು ಕಲಾಸಕ್ತ  ಡಾ.ಕಿರಣ್ ಆಚಾರ್ಯ ತಮ್ಮ ವಿದೇಶ ಪ್ರವಾಸಗಳ ಸಂದರ್ಭದಲ್ಲಿ ಸಂಗ್ರಹಿಸಿದ್ದನ್ನು ಇಲ್ಲಿ ನಾಲ್ಕು ದಿನಗಳ ಕಲಾ ಪ್ರದರ್ಶನದಲ್ಲಿ ಸಾರ್ವಜನಿಕರ ವೀಕ್ಷಣೆಗಾಗಿ ಪ್ರದರ್ಶಿನಕ್ಕಿಟ್ಟಿದ್ದಾರೆ.

ಅಚ್ಚುಕಟ್ಟು ಪ್ರದರ್ಶನ: ದಕ್ಷಿಣ ಆಫ್ರಿಕ, ಇಟಲಿ, ಶ್ರೀಲಂಕಾ, ಬರ್ಮಾ, ನೇಪಾಳ, ಪೊಲಂಡ್, ಟರ್ಕಿ ಮುಂತಾದ ದೇಶಗಳ ನೂರೈವತ್ತಕ್ಕೂ ಅಧಿಕ ವೈವಿಧ್ಯಮಯ, ವಿವಿಧ ಬಣ್ಣ, ವಿನ್ಯಾಸ, ಆಕಾರದ ಮುಖವಾಡಗಳನ್ನು ಆಕರ್ಷಕವಾಗಿ, ಅಷ್ಟೇ ಅಚ್ಚುಕಟ್ಟಾಗಿ ಇಲ್ಲಿ ಪ್ರದರ್ಶಕ್ಕಿಡಲಾಗಿದೆ. ಕುತೂಹಲಿಗರು, ಆಸಕ್ತರಿಗಾಗಿ ಅವುಗಳ ಸಂಕ್ಷಿಪ್ತ  ಮಾಹಿತಿಯನ್ನೂ ನೀಡಲಾಗಿದೆ.

ಮನುಷ್ಯ ಸಹ ಮುಖವಾಡದೊಂದಿಗೆ ಬದುಕುತ್ತಾನೆ ಎಂಬ ಮಾತು ಸಾಮಾನ್ಯವಾದರೂ, ಇಲ್ಲಿ ಪ್ರಪಂಚದ ಅಗಾಧ ಮುಖವಾಡಗಳ ದರ್ಶನ ನೋಡುಗರಿಗಾಗುತ್ತದೆ. ಭಾರತದಂತೆ ವಿದೇಶಗಳಲ್ಲೂ ಈ ಮುಖವಾಡಗಳನ್ನು ವಿವಿಧ ಕಾರಣಗಳಿಗಾಗಿ ಬಳಕೆಯಾಗುತ್ತದೆ. ಕಾರ್ನಿವಾಲ್, ಧಾರ್ಮಿಕ ಆಚರಣೆಯ ಸಂದರ್ಭಗಳಲ್ಲೂ ಮುಖವಾಡಗಳನ್ನು ಹಲವು ಕಡೆಗಳಲ್ಲಿ ಬಳಸಲಾಗುತ್ತಿದೆ.

ಕಾರ್ಯಕ್ರಮದಲ್ಲಿ ಮುಂಬೈನ ಕಲೋಪಾಸಕ ಅರವಿಂದ ವ್ಯಾಸರಾಯ ಬಲ್ಲಾಳ್ ಮುಖ್ಯ ಅತಿಥಿ ಗಳಾಗಿ ಭಾಗವಹಿಸಿದ್ದರು. ಗ್ಯಾಲರಿಯ ಆಡಳಿತ ವಿಶ್ವಸ್ಥ ಹಾಗೂ ಮುಖವಾಡ ಗಳ ಸಂಗ್ರಹಕಾರ ಡಾ.ಕಿರಣ್ ಆಚಾರ್ಯ ಸ್ವಾಗತಿಸಿದರೆ, ಆಸ್ಟ್ರೋ ಮೋಹನ್ ಕಾರ್ಯಕ್ರಮ ನಿರೂಪಿಸಿದರು. ಪ್ರತಿಮಾ ಆಚಾರ್ಯ ವಂದಿಸಿದರು.

ಮುಖವಾಡಗಳ ಪ್ರದರ್ಶನ ಜೂ.17ರಿಂದ 19ರವರೆಗೆ ಬೆಳಗ್ಗೆ 10ರಿಂದ ಸಂಜೆ 8ರವರೆಗೆ ಸಾರ್ವಜನಿಕರ ವೀಕ್ಷಣೆಗೆ ತೆರೆದಿರುತ್ತದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News