ರಸ್ತೆ ನಿರ್ಮಾಣಕ್ಕೆ ಸಮಸ್ಯೆ, ಪರಿಶಿಷ್ಟರಿಗೆ ಮನೆ ದೊರೆಯುತ್ತಿಲ್ಲ: ಸಮಸ್ಯೆ ತೆರೆದಿಟ್ಟ ಗ್ರಾಮಸ್ಥರು

Update: 2022-06-18 15:59 GMT

ಚೇರ್ಕಾಡಿ (ಬ್ರಹ್ಮಾವರ), ಜೂ.೧೮: ಚೇರ್ಕಾಡಿ ಗ್ರಾಮ ವ್ಯಾಪ್ತಿಯ ಪೇತ್ರಿ ಯುವಕ ಮಂಡಲ ವಠಾರದಲ್ಲಿ, ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಗ್ರಾಮದ ಹಲವು ಸಮಸ್ಯೆ ಗಳನ್ನು ಎತ್ತಿತೋರಿಸಿದ ಸಾರ್ವಜನಿಕರು ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರವನ್ನೂ ಕಂಡುಕೊಂಡರು.

ಗ್ರಾಮದ ಸಮಸ್ಯೆಗಳ ಬಗ್ಗೆ ಮಾತನಾಡಿದ ಗ್ರಾಪಂ ಸದಸ್ಯ ಹರೀಶ್ ಶೆಟ್ಟಿ, ರಸ್ತೆ ನಿರ್ಮಾಣದ ನಿಯಮಗಳ ಸರಳೀಕರಣದ ಅಗತ್ಯತೆ ಬಗ್ಗೆ ಹೇಳಿದರು. ಮತ್ತೊಬ್ಬ ಗ್ರಾಪಂ ಸದಸ್ಯ ಕಮಲಾಕ್ಷ ಹೆಬ್ಬಾರ್ ಮಾತನಾಡಿ, ಪರಿಶಿಷ್ಟ ಪಂಗಡದವರು ಹೆಚ್ಚಿನ ಸಂಖ್ಯೆಯಲ್ಲಿರುವ ಇಲ್ಲಿ, ಅವರಿಗೆ ಮನೆ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಿದ್ದರೂ ಹೆಚ್ಚಿನ ಗುರಿ ದೊರೆಯುತ್ತಿಲ್ಲ. ಇದರಿಂದ ಹಲವು ಮಂದಿ ಮನೆ ಇಲ್ಲದೆ ವಂಚಿತರಾಗಿದ್ದಾರೆ ಎಂದರು.

ಗ್ರಾಮದಲ್ಲಿ ೬೦೦ಕ್ಕೂ ಹೆಚ್ಚು ಹೈನುಗಾರರಿದ್ದು, ಇಲ್ಲಿನ ಪಶು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಪೂರ್ಣಕಾಲಿಕ ಪಶು ವೈದ್ಯರನ್ನು ನೇಮಿಸಬೇಕು ಮತ್ತು ಕಂದಾಯ ಸೇವೆಗಳನ್ನು ಸಮರ್ಪಕವಾಗಿ ನೀಡಲು ಪೂರ್ಣಕಾಲಿಕ ಗ್ರಾಮ ಲೆಕ್ಕಿಗರನ್ನು ನೇಮಿಸಬೇಕು ಎಂದು ಬೇಡಿಕೆ ಮುಂದಿರಿಸಿದರು. 

ಈ ಬಗ್ಗೆ ಉತ್ತರಿಸಿದ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್., ಜಿಲ್ಲೆಯ ಇತರೆ ಪಂಚಾಯತ್‌ ನಲ್ಲಿರುವ ಹೆಚ್ಚುವರಿ ಮನೆ ನಿರ್ಮಾಣದ ಗುರಿಯನ್ನು ಒಂದು ವಾರದ ಒಳಗೆ ಈ ಪಂಚಾಯತ್‌ಗೆ ವರ್ಗಾಯಿಸುವ ಕುರಿತು ಆದೇಶ ಮಾಡಿ, ಮನೆ ನಿರ್ಮಾಣಕ್ಕೆ ವ್ಯವಸ್ಥೆ ಮಾಡಲಾಗುವುದು ಎನ್ನುವ ಮೂಲಕ ಹಲವು ವರ್ಷಗಳ ಪರಿಶಿಷ್ಟ ವರ್ಗದ ಜನರ ವಸತಿ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ಒದಗಿಸಿದರು.

ಹಾಲು ಕರೆಯುವ ಯಂತ್ರ, ಹಸು ಘಟಕ ನಿರ್ಮಾಣಕ್ಕೆ ಸಹಾಯಧನ, ೨೬ ಮಂದಿಗೆ ಸಂಧ್ಯಾ ಸುರಕ್ಷಾ, ೯  ಮಂದಿಗೆ ವೃದ್ಧಾಪ್ಯ ವೇತನ, ವಿಧವಾ ವೇತನ, ವಿಕಲಚೇತನ ವೇತನ, ಪಡಿತರ ಚೀಟಿ,  ಮನೆ ಮಂಜೂರಾತಿ ಸೌಲಭ್ಯ ಗಳನ್ನು ಒದಗಿಸಲಾಯಿತು.

ಕಂದಾಯ ಇಲಾಖೆಗೆ ಸಂಬಂಧಿಸಿದ ೨೭, ಪಂಚಾಯತ್‌ಗೆ ಸಂಬಂಧಿಸಿದ ೧೫ ಅರ್ಜಿಗಳು ಸೇರಿದಂತೆ  ೫೫ ಕ್ಕೂ ಅಧಿಕ ಅರ್ಜಿಗಳ ವಿಚಾರಣೆ/ ವಿಲೇವಾರಿ ನಡೆಸಲಾಯಿತು. ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.೯೦ ಕ್ಕಿಂತ ಅಧಿಕ ಅಂಕ ಗಳಿಸಿದ ಚೇರ್ಕಾಡಿ ಗ್ರಾಪಂ ವ್ಯಾಪ್ತಿಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಆರೋಗ್ಯ ಇಲಾಖೆಯಿಂದ ಶಾಲಾ ಮಕ್ಕಳಿಗೆ ನಡೆಸಿದ ಮಾಹಿತಿ ಶಿಕ್ಷಣ ಸಂವಹನ ಸ್ಪರ್ಧೆಯ ಲಕ್ಕಿ ಡ್ರಾ ವಿಜೇತ ವಿದ್ಯಾರ್ಥಿಗಳಿಗೆ ಕಿಟ್ ವಿತರಿಸಲಾ ಯಿತು. ಅಲ್ಲದೇ ಡೆಂಗಿ, ಮಲೇರಿಯಾ ಕೋವಿಡ್ ಬಗ್ಗೆ ಅರಿವು ಮೂಡಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News