ಕೈಗಾರಿಕಾ ಕ್ಷೇತ್ರದಲ್ಲಿ ಸ್ವಾವಲಂಬನೆಯಿಂದ ದೇಶದ ಪ್ರಗತಿ: ಲಾಲಾಜಿ

Update: 2022-06-20 14:46 GMT

ಉಡುಪಿ : ನಮ್ಮ ದೇಶ ಈ ಹಿಂದೆ ಶೇ.೭೦ರಷ್ಟು ಯುದ್ಧ ಸಾಮಾಗ್ರಿ ಗಳ ಬಿಡಿ ಭಾಗವನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದೆವು. ಆದರೆ, ಇತ್ತೀಚಿನ ದಿನಗಳಲ್ಲಿ ಭಾರತೀಯ ಕೈಗಾರಿಕಾ ಸಂಸ್ಥೆಗಳಿಂದಲೇ ಸೇನಾ ಸಾಮಗ್ರಿಗಳು ಹಾಗೂ ಇತರ ಕೈಗಾರಿಕಾ ಬಿಡಿ ಭಾಗಗಳನ್ನು ತಯಾರಿಸು ತ್ತಿರುವುದರಿಂದ ಕೈಗಾರಿಕಾ ಕ್ಷೇತ್ರದಲ್ಲಿ ದೇಶವು ಪ್ರಗತಿಯತ್ತ ಸಾಗುತ್ತಿದೆ ಎಂದು ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ತಿಳಿಸಿದ್ದಾರೆ. 

ಸೋಮವಾರ ತಂತ್ರಜ್ಞಾನ ಕೇಂದ್ರಗಳಾಗಿ ಉನ್ನತೀಕರಿಸಿರುವ ೧೫೦ ಐಟಿಐ ಗಳ ಲೋಕಾರ್ಪಣೆ ಯೋಜನೆ ಯನ್ನು ಉದ್ಘಾಟಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವರ್ಚುವಲ್ ಕಾರ್ಯಕ್ರಮದ ಭಾಗವಾಗಿ ಮಣಿಪಾಲದ ಪ್ರಗತಿನಗರದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಕೈಗಾರಿಕಾ ಕ್ಷೇತ್ರಕ್ಕೆ ಬೇಕಾದ ಎಲ್ಲಾ ಬೆಂಬಲವನ್ನು ಸರಕಾರ ಈಗಾಗಲೇ ನೀಡುತ್ತಿದೆ. ಜಿಲ್ಲೆಯ ಸರಕಾರಿ ಕೈಗಾರಿಕಾ ಸಂಸ್ಥೆಗೆ ಇನ್ನೂ ಹೆಚ್ಚಿನ ಆಧುನಿಕ ಸೌಕರ್ಯಗಳು ಬೇಕಾಗಿದ್ದು, ಸರಕಾರದಿಂದ ನೀಡುವ ಭರವಸೆ ನೀಡಿದರು.

ಕೈಗಾರಿಕ ತರಬೇತಿ ಕ್ಷೇತ್ರದ ಬಗ್ಗೆ ವಿದ್ಯಾರ್ಥಿಗಳಲ್ಲಿ ಹಾಗೂ ಪೋಷಕರಲ್ಲಿ ಮಾಹಿತಿಯ ಕೊರತೆ ಇದ್ದು, ಈ ಕ್ಷೇತ್ರಕ್ಕೆ ಅಧ್ಯಯನ ಮಾಡಲು ಬರುವ ವಿದ್ಯಾರ್ಥಿಗಳ ಸಂಖ್ಯೆ ತೀರಾ ಕಡಿಮೆ ಇದೆ. ಇದರ ಬಗ್ಗೆ ಸಾರ್ವಜನಿಕರಲ್ಲಿ ಸಾಕಷ್ಟು ಅರಿವು ಮೂಡಿಸುವುದು ಅನಿವಾರ್ಯವಾಗಿದೆ. ವಿದ್ಯಾರ್ಥಿಗಳು ವಿದ್ಯಾಬ್ಯಾಸ ಮುಗಿಸಿದ ಕೂಡಲೇ ಉದ್ಯೋಗ ದೊರೆಯುವ ಕ್ಷೇತ್ರಗಳಲ್ಲಿ ಐಟಿಐ ಸಹ ಒಂದಾಗಿದೆ ಎಂದರು.

ಮಣಿಪಾಲ ಸರಕಾರಿ ಕೈಗಾರಿಕಾ ಸಂಸ್ಥೆಯ ಸದಸ್ಯ ಗುಜ್ಜಾಡಿ ಪ್ರಭಾಕರ ನಾಯಕ್ ಮಾತನಾಡಿ, ಯುವಕರಿಗೆ ಉದ್ಯೋಗ ಕಲ್ಪಿಸುವ ಯೋಜನೆಯಲ್ಲಿ ಸರಕಾರ ಐಟಿಐ ಸಂಸ್ಥೆಗಳನ್ನು ಅಭಿವೃದ್ಧಿ ಪಡಿಸುತ್ತಿದೆ. ವಿದ್ಯಾರ್ಥಿಗಳು ಕೂಡ ಸಾಕಷ್ಟು ಸಂಖ್ಯೆಯಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ವಿದ್ಯಾಭ್ಯಾಸ ಪಡೆದರೆ  ದೇಶದ ಅಭಿವೃದ್ಧಿ ಸಾಧ್ಯ ಎಂದರು.

ಹೊಸ ಹೊಸ ಆವಿಷ್ಕಾರ, ತಾಂತ್ರಿಕತೆ ಹಾಗೂ ಹೊಸತನದ ಬಗ್ಗೆ ವಿದ್ಯಾರ್ಥಿ ಗಳಿಗೆ ತರಬೇತಿ ನೀಡಬೇಕು. ಇದರಿಂದ ಅನ್ವೇಷಣೆಗಳು ಹೆಚ್ಚಾದಂತೆ ಯುವಕರು ಉದ್ಯೋಗಸ್ಥರಾಗುತ್ತಾರೆ. ಶಿಕ್ಷಣದ ಉದ್ದೇಶ ಕೇವಲ ಕಲಿಕೆಯಲ್ಲದೇ ಮುಖ್ಯವಾಗಿ ಯುವ ಜನಾಂಗಕ್ಕೆ ಉದ್ಯೋಗ ನೀಡುವುದು ಎಂದು ತಿಳಿಸಿದರು.

ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಸದಸ್ಯ ವಿಶ್ವನಾಥ ಭಟ್, ಐಟಿಐ ಸಂಸ್ಥೆಗೆ ಸುಸಜ್ಜಿತ ಹಾಸ್ಟೆಲ್, ಉತ್ತಮ ರಸ್ತೆ ಸಂಪರ್ಕ ಹಾಗೂ ಬಸ್ ವ್ಯವಸ್ಥೆಗಳ ಮಾಡುವ ಕುರಿತು ಶಾಸಕರಿಗೆ ಮನವಿ ನೀಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಸದಸ್ಯ ರಾಮಕೃಷ್ಣ ಪೈ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್‌ ಕುಮಾರ್, ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲ ಜಗದೀಶ್ ಸ್ವಾಗತಿಸಿ, ಸತೀಶ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಅನಿತಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News