ಉಡುಪಿ ಜಿಲ್ಲೆಯಾದ್ಯಂತ ಯೋಗ ದಿನಾಚರಣೆ

Update: 2022-06-21 13:57 GMT

ಉಡುಪಿ : ಕುಂದಾಪುರ ಕೋಡಿ ಬ್ಯಾರೀಸ್ ಶಿಕ್ಷಣ ಮಹಾ ವಿದ್ಯಾಲಯ ಮತ್ತು ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್ ಇದರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಮುಖ್ಯ ಅತಿಥಿಯಾಗಿ ಕುಂದಾಪುರದ ಪತಂಜಲಿ ಆರೋಗ್ಯಧಾಮದ ವೈದ್ಯ ಡಾ.ಸಾತಪ್ಪ ಮಾತನಾಡಿ, ಯೋಗವೆನ್ನುವುದು ಕೇವಲ ಆಸನಕ್ಕೆ ಮಾತ್ರ ಸೀಮಿತ ವಾಗಿಲ್ಲ. ಇದರ ಹೊರತಾಗಿ ಪ್ರಾಣಾಯಾಮ-ಧ್ಯಾನ-ಪ್ರತ್ಯಾಹಾರ-ಧಾರಣ ಇತ್ಯಾದಿ ಅಷ್ಟಾಂಗಯೋಗವಿದೆ. ಬುದ್ಧಿಯು ಹೇಳಿರುವುದನ್ನು ಮನಸ್ಸು ಕೇಳಬೇಕಿದ್ದರೆ ಅದು ಯೋಗದಿಂದ ಮಾತ್ರ ಸಾಧ್ಯ. ದೈನಂದಿನ ಯೋಗಾಭ್ಯಾಸ ದಿಂದ ನರವ್ಯೆಹ ನಿಯಂತ್ರಣ ಹಾಗೂ ನರ ದೌರ್ಬಲ್ಯದ  ನಿವಾರಣೆಯೊಂದಿಗೆ ನಿರಂತರ ಜೀವನೋತ್ಸಾಹ ಪಡೆಯಬಹುದಾಗಿದೆ ಎಂದು  ಹೇಳಿದರು.  

ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ರೆಹಮಾನ್  ಅಧ್ಯಕ್ಷತೆ ವಹಿಸಿದ್ದರು. ಆಡಳಿತ ನಿರ್ದೇಶಕ ದೋಮ ಚಂದ್ರಶೇಖರ್, ಬಿ.ಎಡ್ ಕಾಲೇಜಿನ ಪ್ರಾಂಶುಪಾಲ ಸಿದ್ದಪ್ಪಕೆ.ಎಸ್., ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ.ಫಿರ್ದೋಸ್, ಡಾ.ಶಮೀರ್, ಅಶ್ವಿನಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಯೋಗ ಸಂದೇಶ ಸಾರುವ ವಿವಿಧ ವಿನ್ಯಾಸದಲ್ಲಿ ರಚಿಸಿದ ಹಣ್ಣು -ತರಕಾರಿ ಮತ್ತು ಯೋಗ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಪ್ರಶಿಕ್ಷಣಾರ್ಥಿ ಸಂಧ್ಯಾ ನಿರೂಪಿಸಿದರು. ರೀಮಾ ಸ್ವಾಗತಿಸಿದರು. ಸುಧಾ ವಂದಿಸಿದರು.

ಹೊಸ ಬೆಳಕು ಆಶ್ರಮ: ಮಣಿಪಾಲದ ಸರಳೇಬೆಟ್ಟುನಲ್ಲಿರುವ ಹೊಸ ಬೆಳಕು ಆಶ್ರಮದಲ್ಲಿ ಆಶ್ರಮವಾಸಿಗಳಿಗಾಗಿ ನಡೆದ ಯೋಗ ಶಿಬಿರವನ್ನು ಕುಂದಾಪುರ ರೂರಲ್ ಆಯುರ್ವೇದ ಮೆಡಿಕಲ್ ಕಾಲೇಜಿನ ಉಪ ವೈದ್ಯಕೀಯ ಅಧೀಕ್ಷಕಿ ಡಾ.ವಾಣಿಶ್ರೀ ಐತಾಳ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಆಶ್ರಮದ ಮುಖ್ಯಸ್ಥೆ ತನುಲಾ ತರುಣ್, ಕಾರ್ಯದರ್ಶಿ ವಿನಯ್ ಚಂದ್ರ ಸಾಸ್ತಾನ, ನಿರ್ವಾಹಕ ಗೌರೀಶ್ ಉಪಸ್ಥಿತರಿದ್ದರು.

ಪತಂಜಲಿ ಯೋಗ ಸಮಿತಿ: ವಿಶ್ವಯೋಗ ದಿನಾಚರಣೆಯ ಪ್ರಯುಕ್ತ  ಶಿರ್ವ ಪತಂಜಲಿ ಯೋಗ ಸಮಿತಿಯಿಂದ ಶಿರ್ವ ಪರಿಸರದ ೧೮ ವಿವಿಧ ಕೇಂದ್ರಗಳಲ್ಲಿ ವಿಶ್ವ ಯೋಗ ದಿನಾಚರಣೆ ಸಾಮೂಹಿಕ ಯೋಗಾಭ್ಯಾಸ ನಡೆಯಿತು.

ಸಮಿತಿಯ ಸಂಚಾಲಕ ಅನಂತ್ರಾಯ ಶೆಣೈ ನೇತೃತ್ವದಲ್ಲಿ ಶಿರ್ವ ಗಣೇಶೋತ್ಸವ ವೇದಿಕೆ ಮಹಿಳಾ ಸೌಧದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ  ವಿಠಲ ಅಂಚನ್ ಚಾಲನೆ ನೀಡಿದರು. ಈ ಸಂದಭರ್ದಲ್ಲಿ ನಿವೃತ್ತ ಶಿಕ್ಷಕ ದೇವೇಂದ್ರ ನಾಯಕ್, ಫಿಲಿಪ್ ಕಸ್ತಲಿನೊ, ಜಕ್ರಿಯಾ ಹುಸೇನ್, ಗಂಗಾ ಶಿವಾನಂದ ಕಾಮತ್, ಯೋಗಶಿಕ್ಷಕರಾದ ಶ್ರೀಪತಿ ಕಾಮತ್, ಮಂಜುನಾಥ್ ಕಾಮತ್ ಉಪಸ್ಥಿತರಿದ್ದರು.

ಬಂಟಕಲ್ ಕಾಲೇಜು: ಸ್ವಾತಂತ್ರ್ಯ ದಿನದ ಅಮೃತಮಹೋತ್ಸವ ಮತ್ತು ಅಂತಾ ರಾಷ್ಟ್ರೀಯಯೋಗ ದಿನದ ಅಂಗವಾಗಿ ಬಂಟಕಲ್ ಶ್ರೀಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ, ಯುವರೆಡ್ ಕ್ರಾಸ್ ಘಟಕ, ರೋಟರ್ಯಾಕ್ಟ್ ಘಟಕ ಮತ್ತು ದೈಹಿಕ ಶಿಕ್ಷಣ ವಿಭಾಗ, ಯೋಗ ಮತ್ತು ಫಿಟ್‌ನೆಸ್ ಸಮಿತಿಯ ವತಿಯಿಂದ ಮಾನವೀಯತೆಗಾಗಿ ಯೋಗ ಎಂಬ ವಿಷಯದ ಕುರಿತು ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿತ್ತು.

ಯೋಗತರಬೇತುದಾರ ರಾಧಾಕೃಷ್ಣ ಪ್ರಭು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಸಂಸ್ಥೆಯ ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್,  ಕ್ರೀಡಾ ಸಂಯೋಜಕ ಸಚಿನ್ ಪ್ರಭು, ನಾಗರಾಜ್ ರಾವ್, ರಾಮಕೃಷ್ಣ ಮೊದಲಾದ ವರು ಉಪಸ್ಥಿತರಿದ್ದರು.

ಚೈಲ್ಡ್‌ಲೈನ್ ಉಡುಪಿ: ಚೈಲ್ಡ್‌ಲೈನ್-೧೦೯೮ ಉಡುಪಿ, ಶ್ರೀಕೃಷ್ಣ ಬಾಲ ನಿಕೇತನ ಹಾಗೂ ಕುಕ್ಕಿಕಟ್ಟೆ ಖಾಸಗಿ ಅನುದಾನಿತ ಶಾಲೆ ಜಂಟಿಯಾಗಿ ಶ್ರೀಕೃಷ್ಣ ಬಾಲನಿಕೇತನ ಕುಕ್ಕಿಕಟ್ಟೆಯಲ್ಲಿ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು.

ಚಿತ್ಪಾಡಿ ಪತಂಜಲಿ ಸಂಸ್ಥೆಯ ಸದಾನಂದ ರಾವ್, ಶಿವಪ್ರಸಾದ ರಾವ್ ಹಾಗೂ ರವೀಂದ್ರನಾಥ್ ನಾಯಕ್ ಮಕ್ಕಳಿಗೆ ಯೋಗದ ಮಹತ್ವವನ್ನು ಪ್ರಾತ್ಯಕ್ಷಿತೆ ಮೂಲಕ ತಿಳಿಸಿದರು. ಚೈಲ್ಡ್‌ಲೈನ್ ನಿರ್ದೇಶಕ ರಾಮಚಂದ್ರ ಉಪಾಧ್ಯಾಯ,  ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ವಿದ್ಯಾರತ್ನ ಮತ್ತು ಸಹ ಶಿಕ್ಷಕರು ಹಾಗೂ ಶಾಲೆಯ ಮಕ್ಕಳು ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಬಿಜೆಪಿ: ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಅಂತಾ ರಾಷ್ಟ್ರೀಯ ಯೋಗ ದಿನಾಚರಣೆಯು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅಧ್ಯಕ್ಷತೆಯಲ್ಲಿ ಅಂಬಲಪಾಡಿ ಶ್ಯಾಮಿಲಿ ಸಭಾಂಗಣದಲ್ಲಿ ನಡೆಯಿತು.

ಡಾ.ಪ್ರಭಾಕರ ಯು.ರೆಂಜಾಳ ಯೋಗದ ಮಹತ್ವ ಬಗ್ಗೆ ಮಾಹಿತಿ ನೀಡಿದರು. ಯೋಗ ಶಿಕ್ಷಕಿ ಶೋಭಾ ಶೆಟ್ಟಿ ಇಂದ್ರಾಳಿ ಯೋಗ ತರಗತಿಯನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಬಿಜೆಪಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಎ.ಸುವರ್ಣ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಯೋಗ ದಿನಾಚರಣೆಯ ಜಿಲ್ಲಾ ಸಂಚಾಲಕ ಮಹೇಶ್ ಠಾಕೂರ್ ಉಪಸ್ಥಿತರಿ ದ್ದರು. ಜಿಲ್ಲಾ ಸಹ ವಕ್ತಾರ ಗಿರೀಶ್ ಅಂಚನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News