ಪಠ್ಯಪುಸ್ತಕ ಪರಿಷ್ಕರಣೆ ವಿವಾದ; ದೇವೇಗೌಡರ ಸಲಹೆ ಬಗ್ಗೆ ಸರಕಾರದಿಂದ ಚರ್ಚೆ: ಸಚಿವ ಕೋಟ

Update: 2022-06-22 14:55 GMT
ಕೋಟ ಶ್ರೀನಿವಾಸ ಪೂಜಾರಿ

ಉಡುಪಿ: ಪಠ್ಯಪುಸ್ತಕಗಳ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ಹಿರಿಯರಾದ ಎಚ್.ಡಿ.ದೇವೇಗೌಡ ಅವರು ಸರಕಾರಕ್ಕೆ ಬರೆದಿರುವ ಪತ್ರ ಹಾಗೂ ನೀಡಿರುವ ಸಲಹೆಯನ್ನು ಗೌರವಿಸಿ, ಈ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಹಾಗೂ ಅವರಿಗೆ ಮನದಟ್ಟು ಮಾಡುವ ಕೆಲಸವನ್ನು ಮಾಡಲಾಗುವುದು ಎಂದು ರಾಜ್ಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವೇಗೌಡರು ನೀಡಿದ ಸಲಹೆಯನ್ನು ಗಮನದಲ್ಲಿಟ್ಟು ಕೊಂಡು ಇತರೆಲ್ಲಾ ವಿಷಯಗಳ ಕುರಿತೂ ಇಂದು ಮುಖ್ಯಮಂತ್ರಿಗಳ ಸಭೆಯಲ್ಲಿ  ಚರ್ಚೆ ನಡೆಯಲಿದೆ ಎಂದವರು ಹೇಳಿದರು.

ಈಗಾಗಲೇ ಈ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ ಹಾಗೂ ತಮ್ಮ ಪಠ್ಯಗಳನ್ನು ಹಿಂದಕ್ಕೆ ಪಡೆಯುವುದಾಗಿ ಹೇಳಿಕೆ ನೀಡಿದ ಕರ್ನಾಟಕದ ಸಾಹಿತಿ, ಲೇಖಕರನ್ನು ರಾಜ್ಯ ಶಿಕ್ಷಣ ಸಚಿವರು ಭೇಟಿ ಮಾಡಿ ಅವರಿಗೆ ಮನವರಿಕೆ ಮಾಡುವ ಪ್ರಯತ್ನ ನಡೆಸುತಿದ್ದಾರೆ. ಈಗಾಗಲೇ ಹಿರಿಯ ಸಾಹಿತಿಯಾದ ದೇವನೂರು ಮಹಾದೇವ ಅವರನ್ನು ಭೇಟಿ ಮಾಡಿ ಅವರನ್ನು ಮನ ಒಲಿಸುವ ಪ್ರಯತ್ನ ಮಾಡಿದ್ದಾರೆ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಸ್ವತಹ ರಾಜ್ಯದ ಶಿಕ್ಷಣ ಸಚಿವರು ಸರಕಾರದ ನಡೆಯ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಸಾಹಿತಿಗಳ ಬಳಿ ಹೋಗಿ ಅವರ ಆತಂಕವನ್ನು ನಿವಾರಿಸುವ ಪ್ರಯತ್ನ ನಡೆಸಿರುವುದು, ಅವರಿಗೆ ಮನವರಿಕೆ ಮಾಡುವ ಪ್ರಯತ್ನ ನಡೆಸಿರುವುದು ಇತಿಹಾಸದಲ್ಲಿ ಇದೇ ಮೊದಲು ಎನ್ನಬಹುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಜಿಪಂನ ಮಾಜಿ ಅಧ್ಯಕ್ಷ ದಿನಕರಬಾಬು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News