ವಿಶ್ವ ರಕ್ತದಾನಿಗಳ ದಿನದಂದು ರಕ್ತದಾನ ಮಾಡಿದ ಉಡುಪಿ ಜಿಪಂ ಸಿಇಓ ಪ್ರಸನ್ನ ಎಚ್

Update: 2022-06-22 16:07 GMT

ಉಡುಪಿ : ಜೀವನದಲ್ಲಿ ಶ್ರೇಷ್ಠದಾನವಾದ ರಕ್ತದಾನದಿಂದ ಆಪತ್ತಿ ನಲ್ಲಿರುವವರ ಜೀವರಕ್ಷಣೆ ಮಾಡಲು ಸಾಧ್ಯವಾ ಗುತ್ತದೆ ಎಂದು ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್ ಹೇಳಿದ್ದಾರೆ.

ಬುಧವಾರ ಚಿಟ್ಪಾಡಿಯ ಸೈಂಟ್ ಮೇರಿಸ್ ಖಾಸಗಿ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಯ ಸಭಾಂಗಣ ದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ಅಪ್ಪು ಅಭಿಮಾನಿಗಳ ಬಳಗ, ರಕ್ತನಿಧಿ ಕೇಂದ್ರ ಜಿಲ್ಲಾ ಆಸ್ಪತ್ರೆ, ಲಯನ್ಸ್ ಕ್ಲಬ್ ಉಡುಪಿ ಲಕ್ಷ್ಶ ಹಾಗೂ ಸೈಂಟ್ ಮೇರಿಸ್ ಖಾಸಗಿ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ ಚಿಟ್ಪಾಡಿ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಆಯೋಜಿಸಿದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮತ್ತು ಅತೀ ಹೆಚ್ಚು ಬಾರಿ ರಕ್ತದಾನ ಮಾಡಿರುವ ದಾನಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ, ಸ್ವಯಂ ರಕ್ತದಾನ ಮಾಡಿ ಅವರು ಮಾತನಾಡುತಿದ್ದರು. 

ಆರೋಗ್ಯವಂತ ಮನುಷ್ಯ ರಕ್ತದಾನ ಮಾಡಲು ಅರ್ಹನಾಗಿದ್ದು, ಎರಡು ಮೂರು ತಿಂಗಳಿಗೊಮ್ಮೆ ಒಂದು ಯೂನಿಟ್ ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪಾದನೆಯಾಗಿ ಚೈತನ್ಯಶೀಲರಾಗಿರಲು ಸಾಧ್ಯವಾಗುತ್ತದೆ ಎಂದರು.

ಹಿಂದಿನ ದಿನಗಳಲ್ಲಿ ಜನರು ರಕ್ತದಾನ ಮಾಡಲು ಆಲೋಚಿಸುತ್ತಿದ್ದರು. ರಕ್ತದಾನದ ಮಹತ್ವ ಹಾಗೂ ರಕ್ತದಾನ ಮಾಡುವುದರಿಂದ ಆರೋಗ್ಯಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಎಂಬ ಅರಿವನ್ನು ಇತ್ತೀಚಿನ ದಿನಗಳಲ್ಲಿ ಹೊಂದುವುದರೊಂದಿಗೆ ಹೆಚ್ಚು ಹೆಚ್ಚು ಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗುತ್ತಿದ್ದಾರೆ ಎಂದರು.

ರಕ್ತದಾನ ಶಿಬಿರಗಳನ್ನು ಹೆಚ್ಚಾಗಿ ನಡೆಸುವುದರಿಂದ ಯುವಜನರಲ್ಲಿ ರಕ್ತದಾನದ ಅರಿವು ಮೂಡಿಸಿ, ಅವರಿಂದ ಪಡೆದ ರಕ್ತವನ್ನು ಅಗತ್ಯವುಳ್ಳವರ ಬೇಡಿಕೆಗೆ ಅನುಗುಣವಾಗಿ ಪೂರೈಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಪ್ರಸನ್ನ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಸುಬ್ರಹ್ಮಣ್ಯ ಶೇರೆಗಾರ್ ಮಾತನಾಡಿ, ಸರಕಾರಿ ನೌಕರರ ಸಂಘವು ಕಳೆದ ೧೫ ವರ್ಷಗಳಿಂದ ಸತತವಾಗಿ ರಕ್ತದಾನ ಶಿಬಿರವನ್ನು ಆಯೋಜಿಸುವ ಮೂಲಕ ರಕ್ತದಾನಕ್ಕೆ ವಿಶೇಷ ಪ್ರಾಮುಖ್ಯತೆ ನೀಡಿದೆ ಎಂದರು.

ಲಯನ್ಸ್ ಕ್ಲಬ್‌ನ ಅಧ್ಯಕ್ಷ ರವಿರಾಜ್, ಸೈಂಟ್ ಮೇರಿಸ್ ವಿದ್ಯಾಸಂಸ್ಥೆಯ ಸಂಚಾಲಕ ವಂ. ಚಾರ್ಲ್ಸ್ ಮಿನೇಜಸ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಹೆಚ್ಚು ಬಾರಿ ರಕ್ತದಾನ ಮಾಡಿದ ಗುರುಚರಣ ಖಾರ್ವಿ, ಪುರುಷೋತ್ತಮ, ಹರಿಶ್ಚಂದ್ರ ಪೂಜಾರಿ ಹಾಗೂ ಸ್ಮಿತಾ ಶರತ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮರಾವ್, ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ವೀಣಾ ಕುಮಾರಿ, ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಡಾ. ಪ್ರೇಮಾನಂದ ಮತ್ತಿತರರು ಉಪಸ್ಥಿತರಿದ್ದರು.

ಪ್ರಭಾರ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಪ್ರಶಾಂತ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಆಲಂದೂರ್ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರೆ, ಸೈಂಟ್ ಮೇರಿಸ್ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಜೆ. ವಿಜಯ ಡಿಸೋಜಾ ವಂದಿಸಿದರು.

ರಕ್ತದಾನ ಶಿಬಿರದಲ್ಲಿ ಒಟ್ಟು ೭೨ ಯೂನಿಟ್ ರಕ್ತವನ್ನು ರಕ್ತದಾನಿಗಳಿಂದ ಸಂಗ್ರಹಿಸಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News