ನಂಜನಗೂಡು; ನಾಪತ್ತೆಯಾಗಿದ್ದ ತಾಯಿ- ಮಗಳ ಮೃತದೇಹ ಹಳ್ಳದಲ್ಲಿ ಪತ್ತೆ: ಇಬ್ಬರ ವಿರುದ್ಧ ಕೊಲೆ ಪ್ರಕರಣ ದಾಖಲು
ನಂಜನಗೂಡು,ಜೂ.29: ಗದ್ದೆಗೆ ಹೋಗಿ ಬರುವುದಾಗಿ ಹೇಳಿ ಹೋಗಿ ನಾಪತೆಯಾಗಿದ್ದ ತಾಯಿ ಮಗಳ ದೇಹಗಳು ನೀರಿನ ಹಳ್ಳದಲ್ಲಿ ಶವವಾಗಿ ಪತ್ತೆಯಾದ ಪ್ರಕರಣ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನಡೆದಿದ್ದು ಈ ದೂರಿಗೆ ಸಂಬಂಧಿಸಿದಂತೆ ಗ್ರಾಮದ ಇಬ್ಬರು ವ್ಯಕ್ತಿಗಳ ಮೇಲೆ ನಂಜನಗೂಡು ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ.
ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಮೃತಳ ಪತಿ ನೀಡಿದ ದೂರಿನ ಮೇರೆಗೆ ಎಫ್.ಐ.ಆರ್.ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಂಜನಗೂಡು ತಾಲೂಕು ಬಿಳುಗಲಿ ಗ್ರಾಮದ ಪುಟ್ಟರಂಗಮ್ಮ(52) ಹಾಗೂ ಮಗಳು ಮಣಿ(32) ತಾಯಿ ಮಗಳೇ ಮೃತ ದುರ್ದೈವಿ ಗಳಾಗಿದ್ದಾರೆ. ಈ ಪ್ರಕರಣ ಸಂಬಂಧ ಬಿಳುಗಲಿ ಗ್ರಾಮದ ಯೋಗೇಶ್ ಹಾಗೂ ರಂಗಸ್ವಾಮಿ ಎಂಬುವರು ಆರೋಪಿ ಗಳೆಂದು ಶಂಕಿಸಿದ್ದಾರೆ.
ಜೂನ್ 15 ರಂದು ಗದ್ದೆಗೆ ಹೋಗಿಬರುವುದಾಗಿ ಮನೆಯಲ್ಲಿ ತಿಳಿಸಿ ಹೊರಟ ಪುಟ್ಟರಂಗಮ್ಮ ಹಾಗೂ ಮಣಿ ವಾಪಸ್ ಬಂದಿಲ್ಲ ಎಂದು ಮರುದಿನ ಪುಟ್ಟರಂಗಮ್ಮನ ಪುತ್ರ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ತಾಯಿ ಹಾಗೂ ಸಹೋದರಿ ನಾಪತ್ತೆಯಾದ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ.ಜೂನ್ 29 ರಂದು ತಮ್ಮ ಜಮೀನು ಬಳಿ ಇರುವ ಹಳ್ಳದ ನೀರಿನಲ್ಲಿ ಪುಟ್ಟರಂಗಮ್ಮ ಹಾಗೂ ಮಣಿ ಇಬ್ಬರ ಮೃತದೇಹಗಳು ಕಂಡುಬಂದಿದೆ.
ಪತ್ನಿ ಹಾಗೂ ಮಗಳ ಅನಾರೋಗ್ಯದಿಂದ ಬಳಲುತ್ತಿದ್ದುದರಿಂದ ಆತ್ಮಹತ್ಯೆಗೆ ಶರಣಾಗಿರ ಬಹುದೆಂದು ತಿಳಿದಿದ್ದ ರಂಗಶೆಟ್ಟಿ ಇದೀಗ ಯೋಗೇಶ್ ಹಾಗೂ ರಂಗಸ್ವಾಮಿ ಎಂಬುವರ ವಿರುದ್ದ ಕೊಲೆ ಆರೋಪ ಹೊರಿಸಿದ್ದಾರೆ. ರಂಗಶೆಟ್ಟಿ ನೀಡಿದ ದೂರಿನ ಅನ್ವಯ ಬಿಳಿಗೆರೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಯೋಗೇಶ್ ಹಾಗೂ ರಂಗಸ್ವಾಮಿ ಬಂಧನಕ್ಕೆ ಬಲೆ ಬೀಸಿದ್ದಾರೆ.