ಉಡುಪಿ ಜಿಲ್ಲೆಯಲ್ಲಿ ಧಾರಾಕಾರ ಮಳೆ: ತಗ್ಗು ಪ್ರದೇಶಗಳು ಜಲಾವೃತ್ತ

Update: 2022-06-30 14:40 GMT

ಉಡುಪಿ : ಕಳೆದೊಂದು ದಿನದಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜಿಲ್ಲೆಯಲ್ಲಿ ಮೊದಲ ಬಾರಿ ನೆರೆಯ ಭೀತಿ ತಲೆದೋರಿದೆ. ಆದರೆ ಅಪರಾಹ್ನದ ಬಳಿಕ ಮಳೆ ನಡುನಡುವೆ ವಿರಾಮ ಪಡೆಯು ತ್ತಿರುವುದರಿಂದ ಜಿಲ್ಲೆ ಸದ್ಯಕ್ಕೆ ನೆರೆ ಭೀತಿಯಿಂದ ದೂರವಾಗಿದೆ. ಆದರೆ ಉಡುಪಿ ಸೇರಿದಂತೆ ಹಲವು ಕಡೆಗಳಲ್ಲಿ ಕೃತಕ ನೆರೆ ಕಾಣಿಸಿಕೊಂಡಿದೆ.

ಕಳೆದ ಸುಮಾರು ೧೮ ಗಂಟೆಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ ಜಿಲ್ಲೆಯ ತಗ್ಗು ಪ್ರದೇಶಗಳೆಲ್ಲವೂ ನೀರಿನಿಂದ ಆವೃತ್ತವಾಗಿವೆ. ನಗರ ಪ್ರದೇಶಗಳಲ್ಲಿ, ರಾಷ್ಟ್ರೀಯ ಹೆದ್ದಾರಿ ಹಾಗೂ ಸರ್ವಿಸ್ ರಸ್ತೆಗಳ ಮೇಲೆ ನೀರು ಹರಿಯುತ್ತಿದ್ದು ಕೃತಕ ನೆರೆ ಕಾಣಿಸಿಕೊಂಡಿದೆ. ಇದರಿಂದಾಗಿ ಹೆಚ್ಚಿನ ಕಡೆ ಸಂಚಾರಕ್ಕೆ ತೊಂದರೆ ಉಂಟಾಗಿದೆ.

ಸತತ ಮಳೆಯಿಂದ ಜಿಲ್ಲೆಯ ನದಿಗಳಲ್ಲಿ ನೀರಿನ ಮಟ್ಟ  ನಿಧಾನವಾಗಿ ಏರುತ್ತಿದೆ. ಮಳೆಯೊಂದಿಗೆ ಗಾಳಿ ಇಲ್ಲದ ಕಾರಣ ಸಧ್ಯಕ್ಕೆ ಜಿಲ್ಲೆಯಲ್ಲಿ ನೆರೆ ಭೀತಿ ಎದುರಾಗಿಲ್ಲ. ಉಡುಪಿ ಸೇರಿದಂತೆ ಹಲವು ಕಡೆ ಪ್ರಾಕೃತಿಕ ನೆರೆ ಕಂಡುಬಂದಿಲ್ಲ ವಾದರೂ ಕೃತಕ ನೆರೆಯಷ್ಟೇ ಕಾಣಿಸಿಕೊಂಡಿದೆ.

ಜಿಲ್ಲೆಯ ಕುಂದಾಪುರ ತಾಲೂಕು ಹಾಗೂ ಕಾಪು ತಾಲೂಕುಗಳ ತಗ್ಗು ಪ್ರದೇಶಗಳು ಮಳೆಯಿಂದ ಹೆಚ್ಚು ಬಾಧಿತವಾದವು. ನೀರು ಹರಿದುಹೋಗಲು ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಹಲವು ಮನೆಗಳವರು ಜಲ ದಿಗ್ಭಂದನ ಕೊಳ್ಳಬೇಕಾಯಿತು. ಎರಡು ದಿನಗಳಿಂದ ಗಾಳಿ ಇಲ್ಲದ ಕಾರಣ ಹಾನಿಯ ಪ್ರಮಾಣವೂ ಕಡಿಮೆಯಾಗಿದೆ.

ಬಾದಾಮಿ ಮರ ಬಿದ್ದು ಹಾನಿ: ಪರ್ಕಳದ ಮೀನು ಮಾರುಕಟ್ಟೆಯ ಎದುರಿಗಿರುವ ಆಶಾ ಜನರಲ್ ಸ್ಟೋರ್ ಮುಂಭಾಗದಲ್ಲಿ ರಸ್ತೆಯ ಅಂಚಿನಲ್ಲಿ ಬೆಳೆದ ಬಾದಾಮಿ ಮರವೊಂದು ಬುಡ ಸಮೇತವಾಗಿ ಅಂಗಡಿಯ ತಗಡಿನ ಸೀಟಿನ ಮೇಲೆ ಬಿದ್ದು ತುಂಬಾ ಹಾನಿಯಾಗಿದೆ. ಅದೇ ರೀತಿ ಪರ್ಕಳ ಪೇಟೆಯಲ್ಲಿ ಉದ್ಯಮಿ ಗೋಪಾಲ್ ಆಚಾರ್ಯರ ಮನೆಯ ತೆಂಗಿನ ಮರ ಗಾಳಿ-ಮಳೆಗೆ ಬುಡ ಸಹಿತ ಪಕ್ಕದ ಪರ್ಕಳ ಅಂಚೆ ಕಚೇರಿ ಕಟ್ಟಡದ ಮೇಲೆ ಬಿದ್ದು ಹಾನಿಯಾಗಿದೆ.

ಉಡುಪಿ ತಾಲೂಕಿನ ಉದ್ಯಾವರದಲ್ಲಿ ಸಹ ಮನೆಯೊಂದರ ಮೇಲೆ ಮರ ಬಿದ್ದು, ಭಾಗಶ: ಹಾನಿಯಾಗಿರು ವುದನ್ನು ಬಿಟ್ಟರೆ ಬೇರೆ ಎಲ್ಲಿಂದಲೂ ಯಾವುದೇ ಹಾನಿಯ ವರದಿ ಬಂದಿಲ್ಲ ಎಂದು ಉಡುಪಿಯ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ತಿಳಿಸಿದ್ದಾರೆ.

ನಿನ್ನೆ ಸಂಜೆ ಪ್ರಾರಂಭಗೊಂಡ ಮಳೆ ಇಂದು ಅಪರಾಹ್ನದವರೆಗೂ ಬಿರುಸಾಗಿ ಸುರಿಯಿತಾದರೂ, ಆ ಬಳಿಕ ಗಂಟೆ, ಎರಡುಗಂಟೆ ವಿರಾಮ ಪಡೆಯುತಿ ದ್ದುದರಿಂದ ಏರಿದ ನೀರಿನ ಮಟ್ಟ ಇಳಿಯುತ್ತಿತ್ತು. ಗಾಳಿ ಇಲ್ಲದ ಕಾರಣ ನದಿಯಲ್ಲೂ ಪ್ರವಾಹದ ಪರಿಸ್ಥಿತಿ ಉಂಟಾಗಲಿಲ್ಲ. ಉಪ್ಪೂರು, ಹಂದಾಡಿ, ಮಡಪಾಡಿಯಂಥ ತಗ್ಗುಪ್ರದೇಶಗಳಲ್ಲಿ ನೀರು ನಿಂತರೂ ಬೇಗನೇ ಇಳಿದು ಹೋದವು. ಬ್ರಹ್ಮಾವರ, ಹೆಬ್ರಿ ತಾಲೂಕುಗಳಲ್ಲೂ ಮಳೆ ಇತ್ತಾದರೂ ಆತಂಕ ಹಾಗೂ ಅಪಾಯದ ಸ್ಥಿತಿ ಎದುರಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News