ಜೆಡಿಎಸ್ ರಾಷ್ಟ್ರೀಯ ಪಕ್ಷಗಳಿಗಿಂತ ಹೆಚ್ಚು ಸ್ಥಾನ ಗೆಲ್ಲುವುದು ನಿಶ್ಚಿತ: ಕುಮಾರಸ್ವಾಮಿ
ಬೆಂಗಳೂರು, ಜು. 2: ‘ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಕ್ಕಿಂತ ಹೆಚ್ಚು ಸ್ಥಾನಗಳನ್ನು ಜೆಡಿಎಸ್ ನಿಶ್ಚಿತವಾಗಿಯೂ ಗೆಲ್ಲಲಿದೆಯೇ ಹೊರತು, ಅವರಿಗಿಂತ ಕೆಳಗಿಳಿಯುವುದಿಲ್ಲ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಸವಾಲು ಹಾಕಿದ್ದಾರೆ.
ಶನಿವಾರ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂಬ ಸಮೀಕ್ಷೆ ಪೂರ್ವ ನಿರ್ಧಾರಿತ. ಅವರ ಶಕ್ತಿ ಇರುವುದು 60 ರಿಂದ 65 ಸೀಟು ಅಷ್ಟೇ. 2013ರಲ್ಲಿ ಬಿಎಸ್‍ವೈ ಇನ್ನೊಂದು ಪಕ್ಷ ಮಾಡದಿದ್ದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯೇ ಆಗುತ್ತಿರಲಿಲ್ಲ. ಅವರು ಯಡಿಯೂರಪ್ಪರನ್ನು ನೆನಪಿಸಿಕೊಳ್ಳಬೇಕು' ಎಂದು ಲೇವಡಿ ಮಾಡಿದರು.
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ 70 ಸ್ಥಾನಗಳನ್ನು ದಾಟುವುದಿಲ್ಲ. ಜೆಡಿಎಸ್‍ಗೆ ಜನತೆಯ ಮತ್ತು ದೇವರ ಆಶೀರ್ವಾದ ಇದೆ. ನಾನು ಸವಾಲು ಹಾಕುತ್ತೇನೆ. ನಮ್ಮ ಪಕ್ಷ ಈ ಎರಡು ರಾಷ್ಟ್ರಿಯ ಪಕ್ಷಗಳಿಗಿಂತ ಮೇಲಿರುತ್ತದೆಯೇ ಹೊರತು ಕೆಳಗಿರುವುದಿಲ್ಲ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಅಭಿವೃದ್ಧಿ ಹೆಸರಿನಲ್ಲಿ ಲೂಟಿ: ಬಿಬಿಎಂಪಿ ಕಚೇರಿಯಲ್ಲಿ ದಾಖಲೆಗೆ ಬೆಂಕಿ ಇಟ್ಟವರು ಯಾರು? ಅದಕ್ಕೆ ಸಿಎಂ ಉತ್ತರ ಕೊಡ್ತಾರಾ? ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ‘ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸೆಂಟರ್‍ನ್ನು ನಾನು ಸಿಎಂ ಆದಾಗಲೇ ಮಾಡಿದ್ದೆ. ಈಗ ಅದಕ್ಕೆ ಸುಣ್ಣ ಬಣ್ಣ ಹೊಡೆದು ಚಾಲನೆ ನೀಡಿದ್ದಾರೆ. ಬೆಂಗಳೂರಿನ ಈಗಿನ ಸ್ಥಿತಿಗೆ ಎರಡು ಪಕ್ಷಗಳು ಕಾರಣ. ಅಭಿವೃದ್ಧಿ ಹೆಸರಿನಲ್ಲಿ ಲೂಟಿ ನಡೆಯುತ್ತಿದೆ ಎಂದು ಟೀಕಿಸಿದರು.