ತೆಂಕನಿಡಿಯೂರು: ಬ್ಯಾಂಕಿಂಗ್ ಉದ್ಯೋಗ ತರಬೇತಿ ಕಾರ್ಯಾಗಾರ

Update: 2022-07-05 13:45 GMT

ಉಡುಪಿ : ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಉದ್ಯೋಗ ಮಾಹಿತಿ ಘಟಕ, ಐಕ್ಯೂಎಸಿ ಹಾಗೂ ಕರ್ನಾಟಕ ಬ್ಯಾಂಕ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಬ್ಯಾಂಕಿಂಗ್ ಉದ್ಯೋಗ ತರಬೇತಿ ಹಾಗೂ ಬ್ಯಾಂಕಿನಲ್ಲಿ ಸಿಗುವ ಸವಲತ್ತುಗಳ ಕುರಿತ ವಿಶೇಷ ಉಪನ್ಯಾಸ ಇತ್ತೀಚೆಗೆ ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ಬ್ಯಾಂಕ್‌ನ ಜನರಲ್ ಮ್ಯಾನೇಜರ್ ರಾಜ್‌ಕುಮಾರ್, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಯುವ ಜನಾಂಗ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

ಮತ್ತೊಬ್ಬ ಮುಖ್ಯ ಅತಿಥಿ ಕರ್ನಾಟಕ ಬ್ಯಾಂಕ್‌ನ ಎಜಿಎಂ ರಾಜಗೋಪಾಲ್,  ಬ್ಯಾಂಕಿನಲ್ಲಿ ಲಭಿಸುವ ವಿವಿಧ ಆರ್ಥಿಕ ಸವಲತ್ತುಗಳ ಬಗ್ಗೆ ಹಾಗೂ ಸ್ವಉದ್ಯೋಗಕ್ಕೆ ಸಿಗುವ ಸಾಲ ಮತ್ತು ಸಬ್ಸಿಡಿ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಕೆನರಾ ಬ್ಯಾಂಕಿನ ನಿವೃತ್ತ ಮಹಾ ಪ್ರಬಂಧಕ ರವಿ ಉಪಾಧ್ಯಾಯ, ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್ ಪರೀಕ್ಷೆಯನ್ನು ಎದುರಿಸುವ ಬಗ್ಗೆ ಉಚಿತವಾಗಿ ತರಬೇತಿ ನೀಡುವ ಬಗ್ಗೆ ತಿಳಿಸಿದರು. ಕಾರ್ಯಕ್ರಮ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಸುರೇಶ್ ರೈ ಕೆ. ವಹಿಸಿದ್ದರು. 

ಐಕ್ಯೂಎಸಿ ಸಂಚಾಲಕರಾದ ಡಾ. ಮೇವಿ ಮಿರಾಂದ, ಉದ್ಯೋಗ ಮಾಹಿತಿ ಘಟಕದ ಸಂಚಾಲಕ ಉಮೇಶ್ ಪೈ ಮತ್ತು ಡಾ. ಹೆಚ್.ಕೆ. ವೆಂಕಟೇಶ  ಉಪಸ್ಥಿತರಿದ್ದರು. ವಿದ್ಯಾರ್ಥಿನಿ ರಕ್ಷಾ ಸ್ವಾಗತಿಸಿದರೆ, ವೈಶಾಲಿ ವಂದಿಸಿದರು. ಸುಷ್ಮಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News