10ನೇ ತರಗತಿಯ ಸಮಾಜ ವಿಜ್ಞಾನ ವಿಷಯಕ್ಕೆ ಮತ್ತೆ ಅಳವಡಿಕೆಯಾದ ನಾರಾಯಣ ಗುರು ಪಠ್ಯ

Update: 2022-07-12 12:39 GMT

ಉಡುಪಿ : ಇಂಧನ ಸಚಿವ ವಿ.ಸುನಿಲ್‌ ಕುಮಾರ್ ಅವರ ಒತ್ತಡಕ್ಕೆ ಮಣಿದಿರುವ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ನೀಡಿದ ನಿರ್ದೇಶನದಂತೆ ಈ ವರ್ಷ 10ನೇ ತರಗತಿಯ ಕನ್ನಡ ಭಾಷಾ ವಿಷಯಕ್ಕೆ ಸೇರ್ಪಡೆಗೊಂಡಿದ್ದ ಬ್ರಹ್ಮಶ್ರೀ ನಾರಾಯಣಗುರುಗಳ ಪಠ್ಯವನ್ನು ಮತ್ತೆ ಸಮಾಜ ವಿಜ್ಞಾನ ವಿಷಯಕ್ಕೆ ಸೇರ್ಪಡೆಗೊಳಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧೀನ ಕಾರ್ಯದರ್ಶಿಗಳು ಇಂದು ಆದೇಶ ಹೊರಡಿಸಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಸಚಿವರೂ ಆಗಿರುವ ವಿ.ಸುನಿಲ್‌ ಕುಮಾರ್ ಅವರು ಬ್ರಹ್ಮಶ್ರೀ ನಾರಾಯಣಗುರುಗಳ ಪಠ್ಯವನ್ನು ಕನ್ನಡ ಭಾಷೆಯಲ್ಲಿ ಅಳವಡಿಸಿರುವುದನ್ನು ತೆಗೆದು ಮತ್ತೆ ಸಮಾಜ ವಿಜ್ಞಾನ ಪಠ್ಯದಲ್ಲಿ ಅಳವಡಿಸುವಂತೆ ನಿನ್ನೆ ಬೆಂಗಳೂರಿನಲ್ಲಿ ಶಿಕ್ಷಣ ಸಚಿವರಿಗೆ ಮನವಿ ಮಾಡಿದ್ದರು. ಅದರಂತೆ ಕನ್ನಡ ವಿಷಯದಲ್ಲಿರುವ ಬ್ರಹ್ಮಶ್ರೀ ನಾರಾಯಣಗುರುಗಳ ಪಠ್ಯವನ್ನು ಕೈಬಿಟ್ಟು ಈ ಹಿಂದೆ ಇದ್ದಂತೆ ನಾರಾಯಣಗುರುಗಳ ಪಾಠವನ್ನು ಸಮಾಜ ವಿಜ್ಞಾನ ವಿಷಯದ ಪಠ್ಯಪುಸ್ತಕದಲ್ಲಿ ತಕ್ಷಣ ಅಳವಡಿಸಿ ಸರಕಾರಿ ಆದೇಶ ಹೊರಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಸಚಿವರು ಟಿಪ್ಪಣಿಯಲ್ಲಿ ಸೂಚಿಸಿದ್ದರು.

ಅದರಂತೆ ಪ್ರಸ್ತುತ 10ನೇ ತರಗತಿಯ ಕನ್ನಡ ಪ್ರಥಮ ಭಾಷಾ ಪಠ್ಯಪುಸ್ತಕದಲ್ಲಿ ಇರುವ ಶ್ರೀನಾರಾಯಣಗುರು ಗಳ ವಿಷಯಾಂಶಗಳನ್ನು ೨೦೨೨-೨೩ನೇ ಸಾಲಿಗೆ ಬೋಧನೆ-ಕಲಿಕೆ ಮೌಲ್ಯಮಾಪನದಿಂದ ಕೈಬಿಟ್ಟು ಯಥಾವತ್ತಾಗಿ ೧೦ನೇ ತರಗತಿ ಸಮಾಜ ವಿಜ್ಞಾನ ಭಾಗ-೧ರಲ್ಲಿ ಅಳವಡಿಸಿಕೊಂಡು ೨೦೨೨-೨೩ನೇ ಸಾಲಿನ ಬೋಧನೆ, ಕಲಿಕೆ, ಮೌಲ್ಯಮಾಪನಕ್ಕೆ ಪರಿಗಣಿಸಬೇಕು.

ಹಾಗೂ ೨೦೨೩-೨೪ನೇ ಸಾಲಿಗೆ ಪ್ರಸ್ತುತ ೧೦ನೇ ತರಗತಿಯ ಕನ್ನಡ ಪ್ರಥಮ ಭಾಷಾ ಪಠ್ಯಪುಸ್ತಕದಲ್ಲಿ ಇರುವ ಶ್ರೀನಾರಾಯಣಗುರುಗಳ ವಿಷಯಾಂಶಗಳನ್ನು ಕೈಬಿಟ್ಟು ೨೦೦೨೩-೨೪ನೇ ಸಾಲಿಗೆ ೧೦ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಇಲಾಖೆಯ ಅಧೀನ ಕಾರ್ಯದರ್ಶಿಗಳು ಆದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News