ಶ್ರೀಲಂಕಾ: ಜನದಂಗೆಯು ದೇಶದಲ್ಲಿ ಕ್ರಾಂತಿಕಾರಿ ಪರಿವರ್ತನೆ ತರುವುದೇ?

Update: 2022-07-16 04:02 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಶ್ರೀಲಂಕಾದ ಇತಿಹಾಸದಲ್ಲಿ 2022ರ ಜುಲೈ 9 ಅತ್ಯಂತ ಮಹತ್ವದ ದಿನವಾಗಿ ಉಳಿಯಲಿದೆ. ಜನಸಾಮಾನ್ಯರ ಸಹನೆಯ ಕಟ್ಟೆಯೊಡೆದಾಗ ಎಂತಹ ನಿರಂಕುಶಾಧಿಕಾರಿಗಳೂ ಅಧಿಕಾರದಲ್ಲಿ ಉಳಿಯಲು ಸಾಧ್ಯವಿಲ್ಲ ಎಂಬುದನ್ನು ಶ್ರೀಲಂಕಾ ಮತ್ತೊಮ್ಮೆ ಸಾಬೀತುಮಾಡಿದೆ. ಶ್ರೀಲಂಕಾ ಸಂವಿಧಾನ ಒದಗಿಸಿಕೊಟ್ಟಿದ್ದ ಪ್ರಾತಿನಿಧಿಕ ಸಂಸದೀಯ ಪ್ರಜಾತಂತ್ರದ ಲೋಪದೋಷಗಳನ್ನು ಬಳಸಿಕೊಂಡು ಕಳೆದ 15 ವರ್ಷಗಳಿಂದ ರಾಜಪಕ್ಸ ಕುಟುಂಬವು ಭ್ರಷ್ಟ ಹಾಗೂ ಸರ್ವಾಧಿಕಾರಿ ಆಡಳಿತವನ್ನು ನಡೆಸುತ್ತಾ ಶ್ರೀಲಂಕಾದ ಆರ್ಥಿಕತೆಯನ್ನು ಮತ್ತು ಜನಸಾಮಾನ್ಯರ ಬದುಕನ್ನು ದಿವಾಳಿಯ ಅಂಚಿಗೆ ತಂದುನಿಲ್ಲಿಸಿದೆ. ಇದೀಗ ಜನಸಾಮಾನ್ಯರು ತಮ್ಮ ನೇರ ಪ್ರಜಾತಾಂತ್ರಿಕ ಕಾರ್ಯಾಚರಣೆ-‘ಅರಗಾಲಯ’ (ಸಿಂಹಳಿ ಭಾಷೆಯಲ್ಲಿ-ದಂಗೆ)ದ ಮೂಲಕ ಸರ್ವಾಧಿಕಾರಿ ಅಧ್ಯಕ್ಷ ಗೊತಬಯ ದೇಶ ಬಿಟ್ಟು ಓಡಿಹೋಗುವಂತೆ ಮಾಡಿದ್ದಾರೆ.

ಭಾರತದೊಂದಿಗೆ ಸ್ವಾತಂತ್ರ್ಯ ಪಡೆದ ಶ್ರೀಲಂಕಾ ಹಲವಾರು ಮಾನವ ಅಭಿವೃದ್ಧಿ ಸೂಚ್ಯಂಕಗಳಲ್ಲಿ ಭಾರತಕ್ಕಿಂತಲೂ ಉತ್ತಮ ಸ್ಥಾನದಲ್ಲಿತ್ತು. ಪ್ರಧಾನವಾಗಿ ಕಾಫಿ, ರಬ್ಬರ್ ಇತ್ಯಾದಿ ವಾಣಿಜ್ಯ ಬೆಳೆಗಳ ರಫ್ತು, ಪ್ರವಾಸೋದ್ಯಮ ಮತ್ತು ಗಾರ್ಮೆಂಟ್‌ನಂತಹ ಪ್ರಾಥಮಿಕ ಔದ್ಯಮಿಕತೆಯನ್ನು ಆಧರಿಸಿಯೇ ಶ್ರೀಲಂಕಾ ಉತ್ತಮ ಸಾಧನೆ ಮಾಡಿತ್ತು. ಆದರೆ 1980ರ ನಂತರ ಶ್ರೀಲಂಕಾದ ಪ್ರಭುತ್ವ ಸಿಂಹಳೀ ಬೌದ್ಧ ಜನಾಂಗೀಯ ದುರಭಿಮಾನವನ್ನು ಪೋಷಿಸುವ ನೀತಿಗಳನ್ನು ಆಕ್ರಮಣಕಾರಿಯಾಗಿ ಜಾರಿ ಮಾಡುತ್ತಾ ಅಲ್ಪಸಂಖ್ಯಾತ ಮುಸ್ಲಿಮರು ಮತ್ತು ಮೂಲನಿವಾಸಿ ಜಾಫ್ನಾ ತಮಿಳರ ಮೇಲೆ ಜನಾಂಗೀಯ ದಮನವನ್ನು ಪ್ರಾರಂಭಿಸಿದ್ದು ಹಾಗೂ ಐಎಂಎಫ್ ನೇತೃತ್ವದ ಅಂತರ್‌ರಾಷ್ಟ್ರೀಯ ಕಾರ್ಪೊರೇಟ್ ಹಣಕಾಸು ಬಂಡವಾಳಶಾಹಿಯ ಶರತ್ತುಗಳಿಗೆ ಶ್ರೀಲಂಕಾವನ್ನು ಅಡಿಯಾಳಾಗಿಸಿದ್ದು, ಶ್ರೀಲಂಕಾದ ಸಾರ್ವತ್ರಿಕ ಪತನಕ್ಕೆ ನಾಂದಿಹಾಡಿತು. 1983ರ ಜುಲೈನಲ್ಲೇ ಪ್ರಾರಂಭವಾದ ತಮಿಳರ ಮೇಲಿನ ಜನಾಂಗೀಯ ದಮನ 2008ರ ಜುಲೈವರೆಗೆ ದೇಶವನ್ನು ಅಂತರ್ಯುದ್ಧಕ್ಕೆ ದೂಡಿತು. ದೇಶದ ಅಭಿವೃದ್ಧಿ ಸ್ಥಗಿತಗೊಂಡಿತು. 2005-2008ರ ಅವಧಿಯಲ್ಲಿ ಇದೇ ರಾಜಪಕ್ಸ ನೇತೃತ್ವದಲ್ಲಿ ಶ್ರೀಲಂಕಾ ಸರಕಾರ ತಮಿಳರ ಮೇಲೆ ನಡೆಸಿದ ಜನಾಂಗೀಯ ನರಮೇಧ ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿತ್ತು. ಆದರೆ ಭಾರತವನ್ನೂ ಒಳಗೊಂಡಂತೆ ಶ್ರೀಲಂಕಾದಲ್ಲಿ ದೂರಗಾಮಿ ವ್ಯೆಹಾತ್ಮಕ ಆಸಕ್ತಿಗಳನ್ನು ಹೊಂದಿದ್ದ ಶಕ್ತ ರಾಷ್ಟ್ರಗಳಾದ ಚೀನಾ, ರಶ್ಯ, ಅಮೆರಿಕ, ಐರೋಪ್ಯ ಒಕ್ಕೂಟಗಳೆಲ್ಲವೂ ಈ ಬರ್ಬರ ದಮನಕಾಂಡವನ್ನು ಉಪೇಕ್ಷಿಸಿ ರಾಜಪಕ್ಸ ಪ್ರಭುತ್ವವನ್ನು ಬೆಂಬಲಿಸಿದವು.

ಇದಲ್ಲದೆ ಯುದ್ಧೋತ್ತರ ಶ್ರೀಲಂಕಾದ ಮರುನಿರ್ಮಾಣಕ್ಕೆ ಐಎಂಎಫ್ ನೀಡಿದ ದೊಡ್ಡ ಮೊತ್ತದ ಸಾಲಗಳು, ಚೀನಾದ ಜೊತೆಗೆ ಮಾಡಿಕೊಂಡ ಮೂಲಭೂತ ಸೌಕರ್ಯ ನಿರ್ಮಾಣ ಸಾಲಗಳ ದೊಡ್ಡ ಪಾಲು ಭ್ರಷ್ಟ ರಾಜಪಕ್ಸ ಕುಟುಂಬದ ಬೊಕ್ಕಸಕ್ಕೆ ಸೇರಿತು. ದೇಶ ದಿವಾಳಿಯಾಗುತ್ತಾ ಹೋಯಿತು. ದೇಶದ ತೆರಿಗೆ ಸಂಪನ್ಮೂಲಗಳ ಬಹುಪಾಲು ತೆಗೆದುಕೊಂಡ ಸಾಲಗಳ ಮರುಪಾವತಿಗೆ ಜಮೆಯಾಗುತ್ತಾ ಆರ್ಥಿಕತೆ ಸ್ಥಗಿತಗೊಂಡಿತು. ಇದರ ಜೊತೆಗೆ ಒಳಜಗಳಗಳಿಂದಾಗಿ ದುರ್ಬಲವಾಗಿದ್ದ ವಿರೋಧ ಪಕ್ಷಗಳ ಬಳಿ ರಾಜಪಕ್ಸ ನೀತಿಗಳಿಗಿಂತ ಭಿನ್ನವಾದುದೇನೂ ಇರಲಿಲ್ಲ. ಶ್ರೀಲಂಕಾ ರಾಜಕೀಯದ ಇಂತಹ ಸಂದಿಗ್ಧ ಸಂದರ್ಭದಲ್ಲಿ 2019ರಲ್ಲಿ ಚರ್ಚ್‌ಗಳಲ್ಲಿ ಹಾಗೂ ಪಂಚತಾರಾ ಹೊಟೇಲ್‌ಗಳಲ್ಲಿ ನಡೆದ ಬಾಂಬ್ ಸ್ಫೋಟಗಳು ಶ್ರೀಲಂಕಾವನ್ನು ಇನ್ನಷ್ಟು ಪತನದೆಡೆಗೆ ಕೊಂಡೊಯ್ದವು. ಇದು ಒಂದೆಡೆ ಭಯೋತ್ಪಾದನೆಯನ್ನು ಬಗ್ಗುಬಡಿಯುವ ನಾಯಕನ ಅಗತ್ಯ ಇದೆಯೆಂಬ ರಾಜಪಕ್ಸ ರಾಜಕಾರಣಕ್ಕೆ ಬೆಂಬಲಗಳಿಸಿಕೊಟ್ಟಿತು. ಮತ್ತೊಂದೆಡೆ ಶ್ರೀಲಂಕಾದ ಶೇ. 30ರಷ್ಟು ರಾಷ್ಟ್ರೀಯ ಆದಾಯದ ಮೂಲವಾಗಿದ್ದ ಪ್ರವಾಸೋದ್ಯಮಕ್ಕೆ ಪೆಟ್ಟುಕೊಟ್ಟಿತು.

ಇದಾದ ಆರು ತಿಂಗಳಲ್ಲೇ ಪ್ರಾರಂಭವಾದ ಕೋವಿಡ್ ಸಾಂಕ್ರಾಮಿಕ ಜಾಗತಿಕ ಮಾರುಕಟ್ಟೆಯಲ್ಲೇ ಬಿಕ್ಕಟ್ಟು ಉಂಟುಮಾಡಿದ್ದರಿಂದ ವಾಣಿಜ್ಯ ಬೆಳೆಗಳ ಮತ್ತು ಗಾರ್ಮೆಂಟ್‌ನಂತಹ ರಫ್ತುಗಳನ್ನೇ ಆಧರಿಸಿದ್ದ ಶ್ರೀಲಂಕಾ ಆರ್ಥಿಕತೆ ಮತ್ತಷ್ಟು ಕುಸಿಯಿತು. ಗೊತಬಯ ಸರಕಾರದ ಅರೆಬೆಂದ ಮತ್ತು ಅಯೋಜಿತ ಕಡ್ಡಾಯ ಸಾವಯವ ಕೃಷಿ ನೀತಿಯಿಂದಾಗಿ ಶ್ರೀಲಂಕಾದಲ್ಲಿ ಕಳೆದೆರಡು ವರ್ಷಗಳಿಂದ ಆಹಾರ ಬೆಳೆಗಳ ಇಳುವರಿಯೂ ಶೇ.30ರಷ್ಟು ಕುಸಿದು ಮೊತ್ತಮೊದಲ ಬಾರಿಗೆ ಅಕ್ಕಿಯನ್ನೂ ಕೂಡ ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಉಂಟಾಯಿತು. ಇದಲ್ಲದೆ ಉಕ್ರೇನ್ ಯುದ್ಧ ಪ್ರಾರಂಭವಾದ ಮೇಲೆ ಇಂಧನದ ಆಮದು ವೆಚ್ಚವೂ ಹೆಚ್ಚಾಗುತ್ತಾ ಹೋಯಿತು. ಪೆಟ್ರೋಲ್ ಹಾಗೂ ಆಹಾರ ಖರೀದಿಗೂ ಮೈಲುಗಟ್ಟಲೆ ಹಾಗೂ ದಿನಗಟ್ಟಲೇ ಸರದಿ ಸಾಲು ನಿಲ್ಲಬೇಕಾಯಿತು. ಬೆಲೆಗಳು ಅಕ್ಷರಶಃ ಗಗನಮುಟ್ಟಿದವು. ಆಳುವ ಸರಕಾರ ಜನರ ಸಂಕಷ್ಟಗಳ ಬಗ್ಗೆ ಉಡಾಫೆ ಮಾಡುತ್ತಾ ದಮನ ಮಾಡುತ್ತಿದ್ದರೆ ವಿರೋಧಪಕ್ಷಗಳು ಅವರಿಗಿಂತ ಬೇಜವಾಬ್ದಾರಿಯಾಗಿ ನಡೆದುಕೊಂಡವು. ಹೀಗೆ ಸಂಸದೀಯ ಪ್ರತಿರೋಧದ ಮಾರ್ಗಗಳು ಜನರಿಗೆ ಪರಿಹಾರ ತಂದುಕೊಡಲಾರದು ಎಂದು ಜನರಿಗೆ ಮನವರಿಕೆಯಾದಾಗ ಶ್ರೀಲಂಕಾದ ಜನತೆ ನೇರ ಪ್ರಜಾತಾಂತ್ರಿಕ ಕಾರ್ಯಾಚರಣೆ-ಅರಗಾಲಯ-ಕ್ಕಿಳಿದರು. ಅದೇ ಜುಲೈ 9 ಜನಸಾಗರವಾಗಿ ಮಾರ್ಪಟ್ಟು ಅಧ್ಯಕ್ಷರನ್ನು ದೇಶಬಿಟ್ಟು ಓಡಿಹೋಗುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಜನಶಕ್ತಿಗೆ ಗೆಲುವಾಗಿದೆ.

ಆದರೆ ಈ ಜನಕ್ರಾಂತಿ ಆರ್ಥಿಕತೆ ಮತ್ತು ರಾಜಕೀಯದಲ್ಲಿ ಮೂಲಭೂತ ಪರಿವರ್ತನೆಯನ್ನು ತರದೆ ಪರಿಹಾರ ನೀಡುವುದೇ? ಇದು ನಡೆದ ಕ್ರಾಂತಿಗಿಂತ ದೊಡ್ಡ ಪ್ರಶ್ನೆಯಾಗಿದೆ. ಈಗ ತಾತ್ಕಾಲಿಕ ಅಧ್ಯಕ್ಷನಾಗಿರುವ ರನಿಲ್ ವಿಕ್ರಮಸಿಂಘೆ ರಾಜಪಕ್ಸ ಹಿತಾಸಕ್ತಿಯನ್ನು ಕಾಪಾಡುತ್ತಿದ್ದಾರೆ ಎಂಬ ದಟ್ಟವಾದ ಅನುಮಾನವಿದೆ. ಈಗಾಗಲೇ ಅವರು ಅರಗಾಲಯವನ್ನು ಅಡಗಿಸಲು ಸೇನೆಗೆ ಆದೇಶ ನೀಡಿದ್ದಾರೆ. ಸಮಕಾಲೀನ ಜಗತ್ತಿನಲ್ಲಿ ಆಳುವ ಸರಕಾರಗಳ ಶೋಷಣೆ ತೀವ್ರವಾದಾಗ ಆ ನಿರ್ದಿಷ್ಟ ಸರಕಾರವನ್ನು ಕಿತ್ತೊಗೆಯುವಲ್ಲಿ ಜನದಂಗೆಗಳು ಸಫಲವಾಗಿರುವ ಹಲವಾರು ಉದಾಹರಣೆಗಳಿವೆ. ಅದರೆ ಅವು ಮೂಲಭೂತ ಆರ್ಥಿಕ-ಸಾಮಾಜಿಕ ಪರಿವರ್ತನೆಯ ಕ್ರಾಂತಿಯಾಗುವಲ್ಲಿ ಯಶಸ್ವಿಯಾಗಿಲ್ಲ. ಶ್ರೀಲಂಕಾದ ಈ ಸಂದರ್ಭವನ್ನು ಬಳಸಿಕೊಂಡು ಹೊಸ ಜನಪರ ಸಂವಿಧಾನವನ್ನು ರಚಿಸುವಂತಾದರೆ ಅದು ನಿಜವಾದ ಯಶಸ್ಸು. ಆದರೆ ಅಂತಹ ಮೂಲಭೂತ ಬದಲಾವಣೆಗೆ ಬೇಕಾದ ರಾಜಕೀಯ ಸ್ಪಷ್ಟತೆ, ಅದಕ್ಕಾಗಿ ರಾಜಿಯಿಲ್ಲದೆ ಸುದೀರ್ಘ ಹೋರಾಟ ಮಾಡಬಲ್ಲ ತಯಾರಿ ಮತ್ತು ಸಂಘಟನಾ ಸಿದ್ಧತೆಯನ್ನು ಈ ಜನದಂಗೆ ಹೊಂದಿದೆಯೇ ಎಂದು ಕಾದು ನೋಡಬೇಕಿದೆ. ಅದೇನೇ ಇರಲಿ, ಅಂತಃಕಲಹ, ಜನಾಂಗೀಯ ದಮನ ಹಾಗೂ ವಿದೇಶಿ ಬಂಡವಾಳಶಾಹಿ ಶಕ್ತಿಗಳ ಮೇಲಿನ ಅವಲಂಬನೆಗಳಿಂದಾಗಿ ಪಕ್ಕದ ಶ್ರೀಲಂಕಾದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದ ಭಾರತ ತುರ್ತಾಗಿ ಕಲಿಯುವುದು ಸಾಕಷ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News