ಕರ್ನಾಟಕದ ಮಾದರಿ ಕಾಂಗ್ರೆಸ್‌ಗೆ ಏಕೆ ಅನಿವಾರ್ಯ?

Update: 2024-11-28 06:03 GMT

ಇತ್ತೀಚೆಗೆ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಜಾರ್ಖಂಡ್ ಅನ್ನು ‘ಇಂಡಿಯಾ’ ಒಕ್ಕೂಟ ತನ್ನ ವಶದಲ್ಲೇ ಉಳಿಸಿಕೊಂಡರೂ ಮಹಾರಾಷ್ಟ್ರದಲ್ಲಿ ಎನ್‌ಡಿಎ ಭರ್ಜರಿ ಗೆಲುವು ಸಾಧಿಸಿದೆ. ಇವಲ್ಲದೆ ಇದೇ ವೇಳೆ, ದೇಶಾದ್ಯಂತ ನಡೆದ 46 ವಿಧಾನಸಭಾ ಉಪ ಚುನಾವಣೆಗಳ ಫಲಿತಾಂಶಗಳು ಕೂಡಾ ಇಂದಿನ ಭಾರತೀಯ ರಾಜಕೀಯದ ಸ್ಥಿತಿಯ ಬಗ್ಗೆ ಬಹಳ ಸ್ಪಷ್ಟವಾದ ಚಿತ್ರವನ್ನು ಕೊಡುತ್ತದೆ ಎಂಬುದನ್ನು ವಿಶೇಷವಾಗಿ ಗಮನಿಸಬೇಕಿದೆ.

ಮುಖ್ಯವಾಗಿ, ರಾಜಕೀಯವಾಗಿ ನಿರ್ಣಾಯಕ ರಾಜ್ಯವಾದ ಉತ್ತರ ಪ್ರದೇಶದ ಫಲಿತಾಂಶ.

ಯಾಕೆಂದರೆ, ಲೋಕಸಭೆ ಚುನಾವಣೆಯಲ್ಲಿ ಅಲ್ಲಿ ಸಮಾಜವಾದಿ ಪಕ್ಷದ ಅಬ್ಬರದ ಎದುರಲ್ಲಿ ಆಡಳಿತಾರೂಢ ಬಿಜೆಪಿ ಕಂಗೆಟ್ಟಿತ್ತು. 80 ಸ್ಥಾನಗಳಲ್ಲಿ 33 ಸೀಟುಗಳನ್ನು ಗೆಲ್ಲುವುದಕ್ಕಷ್ಟೇ ಅದಕ್ಕೆ ಸಾಧ್ಯವಾಗಿತ್ತು. ಈಗ ಅಲ್ಲಿನ 9 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗಳಲ್ಲಿ 7 ಸ್ಥಾನಗಳನ್ನು ಗೆಲ್ಲುವುದರೊಂದಿಗೆ ಅಲ್ಲಿ ಮತ್ತೆ ಬಿಜೆಪಿ ತನ್ನನ್ನು ತಾನು ಋಜುವಾತುಪಡಿಸಿಕೊಂಡಿದೆ.

ಉತ್ತರ ಪ್ರದೇಶ ಬಿಜೆಪಿಯೊಳಗೆ ಆಂತರಿಕ ಭಿನ್ನಾಭಿಪ್ರಾಯಗಳು ದೊಡ್ಡ ಮಟ್ಟದಲ್ಲಿ ತಲೆದೋರಿದ ಹೊತ್ತಲ್ಲಿ, ಒಳಗೊಳಗೇ ವಿರೋಧ ಎದುರಾಗಿದ್ದ ಹೊತ್ತಿನಲ್ಲಿ ಸಿಎಂ ಆದಿತ್ಯನಾಥ್ ಪಾಲಿಗೆ ಇದು ದೊಡ್ಡ ಗೆಲುವಾಗಿ ಒದಗಿದೆ.

ಲೋಕಸಭೆ ಚುನಾವಣೆಯಲ್ಲಿನ ಹೀನಾಯ ಸೋಲಿನ ನಂತರ, ಬಿಜೆಪಿಯ ಕೇಂದ್ರ ನಾಯಕತ್ವ, ಮುಖ್ಯವಾಗಿ ಮೋದಿ ಮತ್ತು ಶಾ ಜೋಡಿ ಉತ್ತರ ಪ್ರದೇಶ ನಾಯಕತ್ವದೊಂದಿಗೆ ಹೆಚ್ಚು ಸಹಯೋಗದೊಂದಿಗೆ ಕೆಲಸ ಮಾಡಬೇಕಾಗಿ ಬಂತು.

ಅದೇ ಹೊತ್ತಲ್ಲಿ ಆದಿತ್ಯನಾಥ್ ಹಾಗೂ ಆರೆಸ್ಸೆಸ್ ನಡುವೆ ಕೂಡ ಉತ್ತಮ ಬಾಂಧವ್ಯ ಮೂಡುವುದು ಉಪ ಚುನಾವಣೆ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಕಂಡಿತ್ತು.

ಲೋಕಸಭೆ ಚುನಾವಣೆಯಲ್ಲಿ ಪಕ್ಷ ಕುಸಿದ ಪರಿಣಾಮವಾಗಿ ದೇಶದ ಮೇಲೆ ಪಕ್ಷದ ಹಿಡಿತ ಸಡಿಲವಾದಂತಾಗಿತ್ತು. ಯುಪಿಯಲ್ಲಿನ ಹಿನ್ನಡೆಯ ಕಾರಣದಿಂದಾಗಿಯೇ ಲೋಕಸಭೆಯಲ್ಲಿ ತನ್ನದೇ ಬಲದ ಮೇಲೆ ನಿಲ್ಲುವುದು ಸಾಧ್ಯವಾಗದೇ ಹೋಯಿತೆಂಬುದು ಅದಕ್ಕೆ ಮನವರಿಕೆಯಾಗಿತ್ತು. ಹಾಗಾಗಿಯೇ ಉಪಚುನಾವಣೆಗಳಿಗೆ ಹೆಚ್ಚಿನ ಆದ್ಯತೆ ಕೊಡಲಾಗಿತ್ತು.

ಲೋಕಸಭೆ ಚುನಾವಣೆಯಲ್ಲಿನ ಅಸಾಧಾರಣ ಗೆಲುವಿನ ಗುಂಗಿನಲ್ಲಿದ್ದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಈ ಸಲ ಹೆಚ್ಚು ಶ್ರಮದ ಅಗತ್ಯವಿಲ್ಲವೆಂಬಂತೆ ಇದ್ದರೋ... ಗೊತ್ತಿಲ್ಲ. ಈಗ ಬಿಜೆಪಿ ಹೇಗೆ ಗೆದ್ದುಬಿಟ್ಟೀತೆಂಬ ಅಂದಾಜು ಕೂಡ ಅವರಿಗೆ ಸಿಗದೇ ಹೋಗಿರಬೇಕು.ಅವರಿಗೆ ತಮ್ಮ ತಂದೆ ಮುಲಾಯಂ ಸಿಂಗ್ ಯಾದವ್ ಅವರ ರಾಜಕೀಯ ಚಾಣಾಕ್ಷತೆಯನ್ನು ಸಾಧಿಸುವುದು ಇನ್ನೂ ಸಾಧ್ಯವಾಗಿಲ್ಲ ಎಂಬುದು ಸ್ಪಷ್ಟವಾಗಿದೆ.

ಬಿಜೆಪಿಯ ಸಾಮರ್ಥ್ಯವನ್ನು ಅಖಿಲೇಶ್ ಕಡೆಗಣಿಸಿದ ಪರಿಣಾಮವಾಗಿ ಮುಸ್ಲಿಮ್ ಬಾಹುಳ್ಯವಿರುವ ಕುಂದರ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಎಸ್‌ಪಿಗೆ ಸೋಲಾಯಿತು. ಅದು ಸಮಾಜವಾದಿ ಪಕ್ಷದ ತೆಕ್ಕೆಯಲ್ಲೇ ಇರಬೇಕಾಗಿದ್ದ ಸ್ಥಾನವಾಗಿತ್ತು.

ಹೇಗೂ ಬಿಜೆಪಿಯನ್ನು ಮುಸ್ಲಿಮರು ದೂರವಿಡುತ್ತಾರೆ ಮತ್ತು ತಮ್ಮ ಗೆಲುವು ಸುಲಭ ಎಂದುಕೊಂಡು ಕೂತುಬಿಟ್ಟರೆ ಏನಾಗಬಹುದು ಎಂಬುದಕ್ಕೆ ಇದು ಒಂದು ಉದಾಹರಣೆ.

ಉತ್ತರಪ್ರದೇಶದಲ್ಲಿ ಬಿಜೆಪಿ ತನ್ನ ಸ್ಥಾನವನ್ನು ಈಗ ಸಿಕ್ಕ ಗೆಲುವಿನ ಮೂಲಕ ಭದ್ರಪಡಿಸಿಕೊಂಡಿತಾದರೂ, ಅಂಥದೇ ಗೆಲುವನ್ನು ಪಶ್ಚಿಮ ಬಂಗಾಳದಲ್ಲಿ ಪಡೆಯುವುದು ಅದಕ್ಕೆ ಸಾಧ್ಯವಾಗಲಿಲ್ಲ. ಪಶ್ಚಿಮ ಬಂಗಾಳದಲ್ಲಿ 6 ಸ್ಥಾನಗಳಿಗೆ ನಡೆದ ಉಪ ಚುನಾವಣೆಗಳಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಎಲ್ಲ ಸ್ಥಾನಗಳನ್ನು ಗೆದ್ದು ಬೀಗಿದೆ ಮತ್ತು ಬಿಜೆಪಿಗೆ ಇದು ಅರಗಿಸಿಕೊಳ್ಳಲು ಆಗದ ಹಿನ್ನಡೆ.

ಕೋಲ್ಕತಾ ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಹತ್ಯೆ ನಂತರದ ಬಿಜೆಪಿ ನೇತೃತ್ವದ ಪ್ರತಿಭಟನೆ ಮತ್ತು ಪ್ರಚಾರ, ಮಾಧ್ಯಮಗಳು ಕೂಡ ಮಮತಾ ಸರಕಾರದ ವಿರುದ್ಧವಾಗಿಯೇ ಇದ್ದುದು... ಇವೆಲ್ಲದರ ಹೊರತಾಗಿಯೂ ಅಲ್ಲಿ ಮಮತಾ ಗೆದ್ದಿದ್ದಾರೆ.

ಮಮತಾ ಬ್ಯಾನರ್ಜಿಯವರ ಪಾಲಿಗೆ ಲೋಕಸಭೆ ಚುನಾವಣೆಯಲ್ಲಿ ವ್ಯಕ್ತವಾಗಿದ್ದ ಜನಬೆಂಬಲವನ್ನು ಕೊಂಚವೂ ತಗ್ಗಿಸುವುದು ಬಿಜೆಪಿಗೆ ಸಾಧ್ಯವಾಗದೇ ಹೋಗಿದೆ. ಅದರಲ್ಲೂ, ಟಿಎಂಸಿ ಅಭ್ಯರ್ಥಿಗಳ ಗೆಲುವಿನ ಅಂತರ ದೊಡ್ಡ ಪ್ರಮಾಣದ್ದಾಗಿರುವುದು ನೀಡಿರುವ ಸಂದೇಶ ಬಹಳ ಸ್ಪಷ್ಟ. ಗೆದ್ದವರಲ್ಲಿ ಇಬ್ಬರ ಗೆಲುವಿನ ಅಂತರ 1,30,000ಕ್ಕೂ ಹೆಚ್ಚು ಮತಗಳದ್ದಾಗಿದೆ.

ಟಿಎಂಸಿ ಕಡಿಮೆ ಅಂತರದಿಂದ ಗೆದ್ದಿರುವುದೆಂದರೆ, ಮದರಿಹತ್‌ನಲ್ಲಿ. ಕಳೆದ 8 ವರ್ಷಗಳಿಂದ ಬಿಜೆಪಿ ತೆಕ್ಕೆಯಲ್ಲಿದ್ದ ಈ ಕ್ಷೇತ್ರದಲ್ಲಿ ಟಿಎಂಸಿ 28,168 ಮತಗಳ ಅಂತರದಿಂದ ಗೆದ್ದಿದೆ ಎಂಬುದು ಗಮನಾರ್ಹ.

ಮಮತಾ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಕಳೆದ ಒಂದು ದಶಕದಲ್ಲಿ ಬಿಜೆಪಿ ಸಾಕಷ್ಟು ಸಮಯ ಮತ್ತು ಹಣವನ್ನು ಹಾಕಿದೆ. ಜೊತೆಗೆ ಬಂಗಾಳದಲ್ಲಿ ಕೋಮು ವಿಭಜನೆಗೂ ಬಿಜೆಪಿ ಸಾಕಷ್ಟು ಶ್ರಮಿಸಿದೆ.

ಮಮತಾ ಸರಕಾರದ ವಿರುದ್ಧ ಮಡಿಲ ಮಾಧ್ಯಮಗಳನ್ನು ಬಳಸಿಕೊಂಡು ವ್ಯಾಪಕ ಅಪಪ್ರಚಾರ ನಡೆಸಿದೆ. ಹಾಗಿದ್ದರೂ, ಪಶ್ಚಿಮ ಬಂಗಾಳವನ್ನು ವಶಪಡಿಸಿಕೊಳ್ಳುವ ಅದರ ಕನಸು ಕೈಗೂಡಿಲ್ಲ. ಅದು ಅಷ್ಟು ಸುಲಭದ್ದಂತೂ ಅಲ್ಲ ಎಂಬುದು ಬಿಜೆಪಿಗೆ ಈಗ ಅರ್ಥವಾಗಿರಬಹುದು. ಈಗ ಉಪಚುನಾವಣೆಯಲ್ಲಂತೂ ಬಂಗಾಳದಲ್ಲಿ ಬಿಜೆಪಿಗೆ ಭಾರೀ ಮುಖಭಂಗವಾಗಿದೆ.

ಇನ್ನು, ಕಾಂಗ್ರೆಸ್ ಪಾಲಿಗೆ ಗೆಲುವಿನ ಸಿಹಿ ಸಿಕ್ಕಿರುವುದಕ್ಕಿಂತ ಹೆಚ್ಚಾಗಿ ಸೋಲಿನ ಕಹಿಯೇ ಹೆಚ್ಚಿದೆ.

ಕೇರಳದ ವಯನಾಡ್‌ನಿಂದ ಪ್ರಿಯಾಂಕಾ ಗಾಂಧಿ ಅವರು 4,00,000 ಮತಗಳ ಭಾರೀ ಅಂತರದಿಂದ ಗೆದ್ದು ಸಂಸತ್ ಪ್ರವೇಶಿಸಿದ್ದಾರೆ

ದಕ್ಷಿಣದಲ್ಲಿ ಕಾಂಗ್ರೆಸ್ ಪಾಲಿನ ಮತ್ತೊಂದು ಖುಷಿಯೆಂದರೆ, ಕರ್ನಾಟಕದ ಮೂರೂ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿರುವುದು.

ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರಂತಹ ಪ್ರಬಲ ನಾಯಕರ ಮುಂದೆ ಹೇಗೆ ಬಿಜೆಪಿ ಆಟ ನಡೆದಿಲ್ಲವೊ ಹಾಗೆಯೇ ಕೇರಳದಲ್ಲೂ ಬಿಜೆಪಿ ಹೆಚ್ಚಿನ ಮುನ್ನಡೆ ಸಾಧಿಸಲು ಆಗಿಲ್ಲ.

ಕೇರಳದಲ್ಲಿ ಪ್ರಿಯಾಂಕಾ ಬೃಹತ್ ಗೆಲುವಿಗೆ ಕಾರಣ ವಯನಾಡ್‌ನ ಮುಸ್ಲಿಮ್ ಮತದಾರರು ಅವರ ಕೈ ಹಿಡಿದು ಬೆಂಬಲಿಸಿದ್ದು. ಆ ಗೆಲುವಿನಲ್ಲಿ ಕಾಂಗ್ರೆಸ್ ಪಕ್ಷದ ಅಥವಾ ನಾಯಕತ್ವದ ಮ್ಯಾಜಿಕ್ ಏನೂ ಇಲ್ಲ.

ಆದರೆ ಇದೇ ವೇಳೆ ರಾಜಸ್ಥಾನದಲ್ಲಿ ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿದೆ. ಅಲ್ಲಿನ 7 ಕ್ಷೇತ್ರಗಳ ಉಪ ಚುನಾವಣೆಗಳಲ್ಲಿ 5ರಲ್ಲಿ ಬಿಜೆಪಿ ಗೆದ್ದಿದೆ. 4 ಕ್ಷೇತ್ರಗಳಲ್ಲಂತೂ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಕುಸಿದಿದೆ.

ಛತ್ತೀಸ್‌ಗಡದ ಏಕೈಕ ವಿಧಾನಸಭಾ ಉಪ ಚುನಾವಣೆಯಲ್ಲಿಯೂ ಕಾಂಗ್ರೆಸ್ ಸೋತಿದೆ.

ಮಧ್ಯಪ್ರದೇಶದಲ್ಲಿ ಕೊಂಚ ಉತ್ತಮ ಪೈಪೋಟಿ ನೀಡಿ, ಬಿಜೆಪಿಯ ಸಚಿವರನ್ನು ಸೋಲಿಸಿದೆ. ಅಲ್ಲದೆ, ಶಿವರಾಜ್ ಸಿಂಗ್ ಚೌಹಾಣ್ ಅವರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಪ್ರಬಲ ಪೈಪೋಟಿಯೊಡ್ಡಿ, ಗೆಲುವಿನ ಅಂತರ ತಗ್ಗಲು ಕಾರಣವಾಗಿದೆ.

ಮೋದಿ ಮತ್ತು ಬಿಜೆಪಿ ಪಾಲಿಗೆ, ಪ್ರತಿಷ್ಠಿತ ಮಹಾರಾಷ್ಟ್ರ ಚುನಾವಣೆಯ ಗೆಲುವು ದೊಡ್ಡದಾಗಿದೆ.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿನ ಪ್ರಚಂಡ ಗೆಲುವಿನ ಜೊತೆಗೆ ದೇಶಾದ್ಯಂತ 46 ವಿಧಾನಸಭಾ ಉಪ ಚುನಾವಣೆಗಳಲ್ಲಿ 26 ಕಡೆ ಬಿಜೆಪಿ ಗೆದ್ದಿದೆ. ಜೊತೆಗೆ ಉತ್ತರ ಪ್ರದೇಶದಲ್ಲಿ ಮತ್ತೆ ನೆಲೆ ಕಂಡುಕೊಂಡಿದೆ. ಬಿಹಾರ ಮತ್ತು ಈಶಾನ್ಯದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ. ಲೋಕಸಭೆ ಚುನಾವಣೆಯಲ್ಲಿನ ಹಿನ್ನಡೆ ಬಳಿಕ ಅದಕ್ಕೆ ಸಿಕ್ಕ ಈ ಗೆಲುವು ಬಹಳ ಮಹತ್ವದ್ದಾಗಿದೆ.

ಮೋದಿಯನ್ನು ಹೆಚ್ಚಾಗಿ ಅವಲಂಬಿಸದೆ ಇರುವಲ್ಲಿ ದೊರೆತ ಈ ಗೆಲುವಿನ ಹಿಂದೆ ಆರೆಸ್ಸೆಸ್ ತಾಕತ್ತಿನ ಪ್ರದರ್ಶನವೂ ಆಗಿದೆ.

ಜಾರ್ಖಂಡ್‌ನಲ್ಲಿನ ಹೇಮಂತ್ ಸೊರೇನ್ ಗೆಲುವು, ಪಶ್ಚಿಮ ಬಂಗಾಳದಲ್ಲಿನ ಮಮತಾ ಬ್ಯಾನರ್ಜಿಯವರ ಗೆಲುವು ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕರು ತೋರಿಸಿದ ಬಲ- ಇವುಗಳ ಮೂಲಕ ಒಂದು ಸಂಗತಿಯಂತೂ ಖಚಿತವಾಗಿದೆ.

ಏನೆಂದರೆ, ಗೆಲುವು ಸಾಧ್ಯವಾಗುವುದು ವಿರೋಧಿಗಳ ವಿರುದ್ಧದ ಸದೃಢ ತಳಮಟ್ಟದ ಹೋರಾಟದಿಂದ ಮಾತ್ರವೇ ಹೊರತು ಸೈದ್ಧಾಂತಿಕ ನಿಲುವು ಅಥವಾ ಸಂಸದೀಯ ಭಾಷಣಗಳಿಂದಲ್ಲ. ದಿಲ್ಲಿಯಲ್ಲಿ ಕುಳಿತಿರುವ ನಾಯಕರುಗಳಿಗೆ ಇದು ಅರ್ಥವಾಗಬೇಕಿದೆ. ಇದನ್ನು ಈವರೆಗೆ ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನು ಕಾಂಗ್ರೆಸ್ ನಾಯಕರು ಮಾಡಿಕೊಳ್ಳದೇ ಇರುವುದೇ ಅದರ ಈಗಿನ ಬಹು ದೊಡ್ಡ ಸೋಲಿಗೆ ಕಾರಣ.

ಲೋಕಸಭೆಯಲ್ಲಿ ಅಬ್ಬರಿಸಿದ ಕಾಂಗ್ರೆಸ್ ಅದೇ ಗುಂಗಿನಲ್ಲೇ ಮೈಮರೆಯಿತು. ಪರಿಣಾಮವಾಗಿ ಈ ಬಾರಿ ಅದರ ಸಾಧನೆ ಏನೂ ಇರಲಿಲ್ಲ.

ಬರೀ ವಿರೋಧಿಸುವುದರಿಂದ ಗೆಲ್ಲುವುದಾದರೆ, ಪಶ್ಚಿಮ ಬಂಗಾಳದಲ್ಲಿ ಮಮತಾ ಎದುರು ಬಿಜೆಪಿ ಗೆಲ್ಲಬೇಕಿತ್ತು.ಆದರೆ ರಾಜಕೀಯ ಸಮೀಕರಣವೇ ಬೇರೆ, ಹೊರಗೆ ಕಾಣುವ ಅಬ್ಬರವೇ ಬೇರೆ,

ಕರ್ನಾಟಕದಲ್ಲಿಯೂ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ-ಜೆಡಿಎಸ್ ತೀವ್ರ ಆರೋಪಗಳನ್ನು ಮಾಡಿ, ಪಾದಯಾತ್ರೆ, ಪ್ರತಿಭಟನೆಗಳನ್ನೂ ನಡೆಸಿತ್ತು. ಆದರೆ ಅದರಿಂದ ಏನಾಯಿತು?

ತನ್ನ ವಿರುದ್ಧದ ಎಲ್ಲ ಆರೋಪಗಳಿಗೆ ಉತ್ತರಿಸುತ್ತ, ತನ್ನ ವಿರುದ್ಧ ನಡೆಯುತ್ತಿರುವುದು ಅಪಪ್ರಚಾರ ಎಂಬುದನ್ನು ಹೇಳುತ್ತ ಕಾಂಗ್ರೆಸ್ ಒಗ್ಗಟ್ಟಾಗಿ ನಿಂತಿತು. ಯಾವುದೇ ವೈಯಕ್ತಿಕ ರಾಜಕೀಯ ಲಾಭದ ಲೆಕ್ಕಾಚಾರಗಳಿಲ್ಲದೆ ನಾಯಕರೆಲ್ಲ ಪಕ್ಷದ ಗೆಲುವಷ್ಟೇ ಗುರಿ ಎಂಬಂತೆ ತಂತ್ರಗಾರಿಕೆ ರೂಪಿಸಿದ್ದರು.ತಳಮಟ್ಟದಲ್ಲಿ ವಾರಗಟ್ಟಲೆ ಕೆಲಸ ಮಾಡಿದರು. ಅಂತಿಮವಾಗಿ ಬಿಜೆಪಿಯನ್ನು ಮಣಿಸುವುದು ಸಾಧ್ಯವಾಯಿತು.

ಆದರೆ ಇಂಥದೇ ಮಾದರಿಯನ್ನು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮಾಡದೇ ಹೋಯಿತು.

ಲಾಡಕಿ ಬಹೀಣ ಅಂಥ ಯೋಜನೆಯನ್ನು ಬಿಜೆಪಿ ಘೋಷಿಸಿದ್ದಾಗ ಮೊದಲು ಅದನ್ನು ವಿರೋಧಿಸುವುದರಲ್ಲೇ ಕಳೆದ ಕಾಂಗ್ರೆಸ್, ಕಡೇ ಹೊತ್ತಿಗೆ ಅದರ ರಾಜಕೀಯ ಲಾಭವನ್ನು ಮನಗಂಡು ತಾನು ಡಬಲ್ ಕೊಡುವುದಾಗಿ ಹೇಳಿತ್ತು. ಆದರೆ ನಾಯಕರು ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದನ್ನು ಜನರ ಬಳಿಗೆ ಕೊಂಡೊಯ್ಯುವ ವ್ಯವಸ್ಥೆಯೂ ಬಹಳ ಮುಖ್ಯ. ಹೇಳಿಕೆಗಳಿಂದ, ಘೋಷಣೆಗಳಿಂದ, ಭಾಷಣಗಳಿಂದ ಏನೂ ಆಗುವುದಿಲ್ಲ. ತಾವೇನು ಮಾಡಿದ್ದೇವೆ, ಮಾಡಲಿದ್ದೇವೆ ಎಂಬುದನ್ನು ಜನರಿಗೆ ಮನವರಿಕೆ ಮಾಡದೇ ಇದ್ದರೆ ಎಲ್ಲವೂ ವ್ಯರ್ಥ. ಜನರನ್ನು ತಲುಪುವುದು ಅತ್ಯಂತ ಅಗತ್ಯ. ಕಾಂಗ್ರೆಸ್ ಅಲ್ಲಿಯೇ ವಿಫಲವಾಯಿತು ಎಂಬುದನ್ನು ಬೇರೆ ಹೇಳಬೇಕಿಲ್ಲ.

ಲೋಕಸಭೆ ಚುನಾವಣೆಯಲ್ಲಿ ಗೆದ್ದ ಗುಂಗಿನಿಂದ ಹೊರಬರದ ಅದು, ಲೋಕಸಭೆಗಿಂತ ಭಿನ್ನವಾದ ನಾಡಿಮಿಡಿತ ಅಸೆಂಬ್ಲಿ ಚುನಾವಣೆಯದ್ದು ಎಂಬುದನ್ನು ಕೂಡ ಸರಿಯಾಗಿ ಗ್ರಹಿಸದೆ ಹೋಯಿತು.

ರಾಜ್ಯ ಸರಕಾರದ ವಿರುದ್ಧದ ಆಡಳಿತ ವಿರೋಧಿ ಭಾವನೆಗಳನ್ನು ಬಳಸಿಕೊಳ್ಳುವುದು ಮುಖ್ಯ. ಹಾಗೆ ಬಳಸಿಕೊಳ್ಳಲು ಪಕ್ಷ ತಳಮಟ್ಟದ ಅಭಿಯಾನವನ್ನು ನಡೆಸಬೇಕಾಗುತ್ತದೆ. ಬರೀ ಅಬ್ಬರದಿಂದ ಏನೂ ಆಗುವುದಿಲ್ಲ.

2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಆಡಳಿತಾರೂಢ ಬಿಜೆಪಿ ವಿರುದ್ಧ ಹೇಗೆ ಅತ್ಯಂತ ಪರಿಣಾಮಕಾರಿ ಅಭಿಯಾನ ನಡೆಸಿತ್ತು?

ತಳಮಟ್ಟದಲ್ಲಿ ಜನರಿಗೆ ಅರ್ಥ ಆಗುವ ಹಾಗೆ ಕಾಂಗ್ರೆಸ್‌ನ ಪ್ರಚಾರವಿತ್ತು. ಜೊತೆಗೆ ಪಕ್ಷದ ರಾಜ್ಯ ನಾಯಕತ್ವ ಕೂಡ ಪರಸ್ಪರ ಭಿನ್ನಾಭಿಪ್ರಾಯ ಬದಿಗಿಟ್ಟು ಒಗ್ಗಟ್ಟಿನಿಂದ ಕೆಲಸ ಮಾಡಿತ್ತು. ಅದರ ಸಂಪೂರ್ಣ ಲಾಭವನ್ನು ಅದು ಪಡೆದುಕೊಂಡು ಗೆದ್ದು ಅಧಿಕಾರಕ್ಕೆ ಬಂತು.

ಸಾಧ್ಯವಾದಷ್ಟೂ ಮಟ್ಟಿಗೆ ಜನರನ್ನು ತಲುಪುವತ್ತ ಕಾಂಗ್ರೆಸ್ ಗಮನಹರಿಸಬೇಕಾಗುತ್ತದೆ. ಕರ್ನಾಟಕದಲ್ಲಿ ಸಾಧ್ಯವಾದಂತೆ, ಸ್ಥಳೀಯ ನಾಯಕತ್ವದತ್ತ ಗಮನ ಹರಿಸುವುದು ಅವಶ್ಯ. ಕರ್ನಾಟಕದಲ್ಲಿನ ಈ ಮಾದರಿಯನ್ನು ಇತರ ರಾಜ್ಯಗಳಲ್ಲಿಯೂ ಪುನರಾವರ್ತಿಸಬೇಕು.

ಹಿಮಾಚಲ ಪ್ರದೇಶದಲ್ಲಿ ಕೂಡ ಇದೇ ಅಂಶ ಕಾಂಗ್ರೆಸ್ ಗೆಲುವಿನ ಮರ್ಮವಾಗಿತ್ತು. ಅಲ್ಲಿ ಇದನ್ನು ಮಾಡಿದಾಗ ಕಾಂಗ್ರೆಸ್ ಗೆದ್ದಿತು. ಲೋಕಸಭೆಯಲ್ಲಿ ಕೂಡ ಇದೇ ತಂತ್ರಗಾರಿಕೆ ಫಲ ಕೊಟ್ಟಿತ್ತು. ಕಾಂಗ್ರೆಸ್ ಗೆಲ್ಲಬೇಕಾದರೆ, ಸ್ಥಳೀಯ ನಾಯಕತ್ವಕ್ಕೆ ಅಧಿಕಾರ ನೀಡಬೇಕು ಮತ್ತು ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡಲು ಕೇಂದ್ರದ ನಾಯಕರು ತಯಾರಿರಬೇಕು.

ಲೋಕಸಭಾ ಚುನಾವಣೆಯಲ್ಲಿ ಹೇಳಿದ್ದನ್ನೇ ವಿಧಾನಸಭಾ ಚುನಾವಣೆಗೂ ಹೇಳಿದರೆ ಆಗುವುದಿಲ್ಲ. ಅಸೆಂಬ್ಲಿ ಎಲೆಕ್ಷನ್ ನಡೆಯುವಾಗ ಆ ರಾಜ್ಯದ, ಆಯಾ ಜಿಲ್ಲೆಯ, ವಿಷಯಗಳ ಬಗ್ಗೆ ಹಿರಿಯ ನಾಯಕರು ಮಾತಾಡಬೇಕು. ಆಗ ಮಾತ್ರ ಅಲ್ಲಿನ ಜನ ಪಕ್ಷದ ಜೊತೆ ಗುರುತಿಸಿಕೊಳ್ಳುತ್ತಾರೆ.

ತಳಮಟ್ಟದಲ್ಲಿ ಸಕ್ರಿಯವಾಗಿಲ್ಲ ಎಂಬುದರ ಅರ್ಥ ಪಕ್ಷ ಬಲಯುತವಾಗಿಲ್ಲ ಎಂಬುದೇ ಆಗಿದೆ. ಹಾಗಾಗಿ ತಳಮಟ್ಟದಲ್ಲಿ ಸಂಘಟನೆಯನ್ನು ಬಲಗೊಳಿಸುವ ಕೆಲಸ ಆಗಬೆಕು.

ಈ ವಿಷಯದಲ್ಲಿ ಮಮತಾ ಬ್ಯಾನರ್ಜಿ ಹಾಗೂ ಅವರ ಪಕ್ಷದ ಪ್ರಚಾರ ಮತ್ತು ಚುನಾವಣಾ ತಂತ್ರವನ್ನು ಕಾಂಗ್ರೆಸ್ ಕಲಿಯಬೇಕು. ಹಾಗಾಗದೇ ಹೋದರೆ ಮತಗಳನ್ನು ಗೆಲ್ಲುವಲ್ಲಿ ತಾನು ವಿಫಲವಾಗಿರುವುದನ್ನು ಕೇಂದ್ರ ನಾಯಕತ್ವ ಒಪ್ಪಿಕೊಳ್ಳಬೇಕು.

ಸ್ಥಳೀಯವಾಗಿ ಬಲಗೊಂಡಷ್ಟೂ ಗೆಲುವಿನ ಸಾಧ್ಯತೆ ವಿಸ್ತರಿಸುತ್ತದೆ ಎಂಬುದನ್ನು ನಾಯಕರು ಅರ್ಥ ಮಾಡಿಕೊಳ್ಳಬೇಕಾಗಿದೆ. ಬಿಜೆಪಿಯೊಂದಿಗೆ ಸೆಣಸಾಡಲು ಬಯಸಿದರೆ, ಕಾಂಗ್ರೆಸ್ ಇದನ್ನು ರೂಢಿಸಿಕೊಳ್ಳಲೇಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ಪ್ರವೀಣ್ ಎನ್.

contributor

Similar News