ಇವಿಎಂಗಿಂತ ಮತಪತ್ರಗಳು ಯಾಕೆ ಪಾರದರ್ಶಕ?
ಮತದಾನ ಮತ್ತು ಎಣಿಕೆ ಪ್ರಕ್ರಿಯೆ ಸಾರ್ವಜನಿಕವಾಗಿ ಸ್ಪಷ್ಟವಾಗುವಂತಿರಬೇಕು. ಮತಗಳ ಎಣಿಕೆ ಮತ್ತು ಫಲಿತಾಂಶಗಳ ಖಚಿತತೆ ಇರಬೇಕು. ಚುನಾವಣಾ ಪ್ರಕ್ರಿಯೆ ಮುಕ್ತ ಮತ್ತು ನ್ಯಾಯಸಮ್ಮತವಾಗಿದೆ ಎಂಬುದು ಎಲ್ಲ ಮತದಾರರಿಗೂ ತಿಳಿಯುವಂತಿರಬೇಕು. ಇಡೀ ಮತದಾನ ಪ್ರಕ್ರಿಯೆ ಚುನಾವಣಾ ಆಯೋಗದ ಸಂಪೂರ್ಣ ನಿಯಂತ್ರಣದಲ್ಲಿರಬೇಕು.
ಇವಿಎಂ ವಿರುದ್ಧ ಮತ್ತೊಮ್ಮೆ ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸತೊಡಗಿದೆ.
ಹರ್ಯಾಣ ಚುನಾವಣೆ ಸೋತ ಬಳಿಕ ಅದು ಇವಿಎಂ ಅಸಮರ್ಪಕತೆ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿತ್ತು. ಈಗ ಮಹಾರಾಷ್ಟ್ರ ಚುನಾವಣೆ ಸೋಲಿನ ಬಳಿಕ ಮತ್ತೊಮ್ಮೆ ತೀವ್ರ ಕಳವಳ ವ್ಯಕ್ತಪಡಿಸಿದೆ. ದೇಶದಲ್ಲಿ ಮತಪತ್ರ ವ್ಯವಸ್ಥೆಯನ್ನು ಪುನಃ ಜಾರಿಗೆ ತರಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ.
ದಿಲ್ಲಿಯ ಟಾಲ್ಕಟೋರಾ ಕ್ರೀಡಾಂಗಣದಲ್ಲಿ ಸಂವಿಧಾನ ರಕ್ಷಕ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಖರ್ಗೆ, ‘‘ನಮಗೆ ಇವಿಎಂ ಮೂಲಕ ಚುನಾವಣೆ ಬೇಡ. ನಾವು ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆಯನ್ನು ಬಯಸುತ್ತೇವೆ’’ ಎಂದಿದ್ದಾರೆ.
‘‘ನಮಗೆ ಇವಿಎಂ ಬೇಡ. ಅವರು ಇವಿಎಂ ತಮ್ಮ ಬಳಿ ಇಟ್ಟುಕೊಳ್ಳಲಿ. ಬ್ಯಾಲೆಟ್ ಪೇಪರ್‌ನಲ್ಲಿ ಮತದಾನ ನಡೆಯಬೇಕು. ಆಗ ಅವರ ನಿಲುವೇನು ಮತ್ತು ಅವರ ಸ್ಥಾನವೇನು ಎಂಬುದು ಗೊತ್ತಾಗುತ್ತದೆ’’ ಎಂದು ಖರ್ಗೆ ಹೇಳಿದ್ದಾರೆ.
ಬಡ ಮತ್ತು ತುಳಿತಕ್ಕೊಳಗಾದ ಸಮುದಾಯಗಳ ಮತಗಳು ವ್ಯರ್ಥವಾಗುವುದನ್ನು ತಡೆಯಬೇಕಿದೆ, ಇದಕ್ಕಾಗಿ ಎಲ್ಲರೂ ಬ್ಯಾಲೆಟ್ ಪೇಪರ್ ಮೂಲಕ ಮತದಾನಕ್ಕಾಗಿ ಒತ್ತಾಯಿಸಬೇಕು ಎಂದಿದ್ದಾರೆ.
‘‘ಈ ಬಗ್ಗೆ ಎಲ್ಲರಲ್ಲೂ ಅರಿವು ಮೂಡಿಸಲು, ಮತಪತ್ರ ವ್ಯವಸ್ಥೆಯನ್ನು ಮರಳಿ ತರಲು ನಾವು ಭಾರತ ಜೋಡೊ ಯಾತ್ರೆಯಂಥ ಆಂದೋಲನ ಆರಂಭಿಸಬೇಕು’’ ಎಂದು ಇದೇ ಸಂದರ್ಭದಲ್ಲಿ ಅವರು ರಾಹುಲ್ ಗಾಂಧಿಯವರನ್ನು ಒತ್ತಾಯಿಸಿದ್ದಾರೆ.
ಕೆಲ ದಿನಗಳ ಹಿಂದೆ ಕೂಡ ಅವರು ಇವಿಎಂ ವಿರುದ್ಧ ಮಾತನಾಡಿದ್ದರು. ಅಮೆರಿಕ, ಕೆನಡಾ, ಬ್ರಿಟನ್, ಜರ್ಮನಿ, ಫ್ರಾನ್ಸ್, ಇಟಲಿಯಂತಹ ದೇಶಗಳಲ್ಲಿ ಇವಿಎಂ ಬಳಕೆಯಲ್ಲಿಲ್ಲ ಎಂಬುದನ್ನು ಅವರು ಹೇಳಿದ್ದರು.
ಇವಿಎಂ ಬದಲು, ಜಗತ್ತಿನ ಹಲವಾರು ಇತರ ದೊಡ್ಡ ಪ್ರಜಾಪ್ರಭುತ್ವಗಳಲ್ಲಿರುವಂತೆ ಕಾಗದದ ಮತಪತ್ರ ವ್ಯವಸ್ಥೆಗೆ ಮರಳಬೇಕು ಎಂಬ ವಾದ ಇತ್ತೀಚೆಗೆ ತೀವ್ರಗೊಳ್ಳುತ್ತಿದೆ.ಇವಿಎಂಗಳ ಮೇಲಿನ ಜನರ ನಂಬಿಕೆ ಹಿಂದೆಂದಿಗಿಂತೂ ಈಗ ಕುಸಿದಿದೆ.
ಯಾವುದೇ ಚುನಾವಣಾ ವ್ಯವಸ್ಥೆಯಲ್ಲಿ ಪ್ರಜಾಪ್ರಭುತ್ವದ ಮೂಲಭೂತ ತತ್ವಗಳ ಅನುಸರಣೆ ಮುಖ್ಯ. ಆದರೆ ಇವಿಎಂ ಮತದಾನದಲ್ಲಿ ಅದಕ್ಕೆ ಅವಕಾಶವೇ ಇಲ್ಲವಾಗಿದೆ ಎಂಬುದು ಇವಿಎಂ ವಿರೋಧಿಸುವವರ ವಾದವಾಗಿದೆ.
ಜಗತ್ತಿನಾದ್ಯಂತ ಐದು ಬಗೆಯ ಮತದಾನ ವ್ಯವಸ್ಥೆಗಳು ಬಳಕೆಯಲ್ಲಿವೆ. ಅವೆಂದರೆ, 1. ಕಾಗದದ ಮತಪತ್ರ, 2. ಇವಿಎಂ, 3. ವಿವಿಪ್ಯಾಟ್ ಹೊಂದಿರುವ ಇವಿಎಂ, 4. ಕಾಗದದ ಮತಪತ್ರದಲ್ಲಿ ಮಾಡಿದ ಗುರುತನ್ನು ಸ್ಕ್ಯಾನರ್‌ನಲ್ಲಿ ನೋಡಿ ಖಚಿತಪಡಿಸಿಕೊಳ್ಳುವ ಮಷಿನ್ ರೀಡೇಬಲ್ ಮತಪತ್ರ, 5. ಇಂಟರ್ನೆಟ್ ಆಧಾರಿತ ಮತದಾನ.
ಭಾರತದಲ್ಲಿ ಮತದಾನ ಶುರುವಾದದ್ದು ಕಾಗದದ ಮತಪತ್ರ ಬಳಕೆಯೊಂದಿಗೆ. ಬಳಿಕ ಇವಿಎಂ ಬಳಕೆ ಶುರುವಾಯಿತು. ಈಗ ವಿವಿಪ್ಯಾಟ್ ಸಹಿತ ಇವಿಎಂ ಬಳಕೆಯಾಗುತ್ತಿದೆ.
ಕಾಗದದ ಮತಪತ್ರಗಳ ಬಳಕೆಯಲ್ಲಿ ಪ್ರಜಾಪ್ರಭುತ್ವದ ತತ್ವಗಳ ಅನುಸರಣೆ ಇರುತ್ತದೆ. ಆದರೆ ಇವಿಎಂ ವ್ಯವಸ್ಥೆಯಲ್ಲಿ ಅದರ ಅನುಸರಣೆ ಆಗುತ್ತಿಲ್ಲ.
ಆ ಪ್ರಜಾಪ್ರಭುತ್ವದ ತತ್ವಗಳು ಏನು ಹಾಗಾದರೆ?
ಮತದಾನ ಪ್ರಕ್ರಿಯೆ ಪಾರದರ್ಶಕವಾಗಿರಬೇಕು ಮತ್ತು ಜನಸಾಮಾನ್ಯರು ತಾವು ಹಾಕಿದ ಮತ ತಾವು ಬಯಸಿರುವ ವ್ಯಕ್ತಿಗೇ ಹೋಗಿದೆ ಎಂಬ ಸಮಾಧಾನ ಹೊಂದಲು ಸಾಧ್ಯವಾಗಬೇಕು.
ಮತದಾನ ಮತ್ತು ಎಣಿಕೆ ಪ್ರಕ್ರಿಯೆ ಸಾರ್ವಜನಿಕವಾಗಿ ಸ್ಪಷ್ಟವಾಗುವಂತಿರಬೇಕು. ಮತಗಳ ಎಣಿಕೆ ಮತ್ತು ಫಲಿತಾಂಶಗಳ ಖಚಿತತೆ ಇರಬೇಕು. ಚುನಾವಣಾ ಪ್ರಕ್ರಿಯೆ ಮುಕ್ತ ಮತ್ತು ನ್ಯಾಯಸಮ್ಮತವಾಗಿದೆ ಎಂಬುದು ಎಲ್ಲ ಮತದಾರರಿಗೂ ತಿಳಿಯುವಂತಿರಬೇಕು. ಇಡೀ ಮತದಾನ ಪ್ರಕ್ರಿಯೆ ಚುನಾವಣಾ ಆಯೋಗದ ಸಂಪೂರ್ಣ ನಿಯಂತ್ರಣದಲ್ಲಿರಬೇಕು.
ಕಾಗದದ ಮತಪತ್ರ ವ್ಯವಸ್ಥೆಯಲ್ಲಿ ರಹಸ್ಯವಾಗಿ ಮತದಾನ ಮಾಡಲು ಅವಕಾಶವಾಗುವಂತೆ ಮತಗಟ್ಟೆಯೊಳಗೆ ಮತಪೆಟ್ಟಿಗೆಯನ್ನು ಇರಿಸಲಾಗಿರುತ್ತದೆ. ಮತದಾರ ಮತಗಟ್ಟೆಗೆ ಬಂದಾಗ ಆತನ ಗುರುತು ಪರಿಶೀಲನೆಯ ನಂತರ ಮತಪತ್ರವನ್ನು ನೀಡಲಾಗುತ್ತದೆ. ಮತದಾರ ತನ್ನ ಅಭ್ಯರ್ಥಿ ಮತ್ತು ಅನುಗುಣವಾದ ಚಿಹ್ನೆ ಮತಪತ್ರದಲ್ಲಿದೆಯೇ ಎಂದು ಪರಿಶೀಲಿಸುತ್ತಾನೆ.
ಮತದಾರ ಮತಪೆಟ್ಟಿಗೆಯನ್ನು ಇರಿಸಲಾಗಿರುವಲ್ಲಿ ಹೋಗಿ ಮತ ಪತ್ರದಲ್ಲಿ ತನ್ನ ಆಯ್ಕೆಯ ಅಭ್ಯರ್ಥಿಯ ಚಿಹ್ನೆಯ ಮೇಲೆ ಮುದ್ರೆಯನ್ನು ಒತ್ತಿ ಮತಪೆಟ್ಟಿಗೆಯೊಳಗೆ ಹಾಕುತ್ತಾನೆ.
ಆನಂತರ ಚುನಾವಣಾಧಿಕಾರಿ ಮತ್ತು ಅಭ್ಯರ್ಥಿಗಳ ಏಜೆಂಟರ ಸಮ್ಮುಖದಲ್ಲಿ ಮತಗಳನ್ನು ಭೌತಿಕವಾಗಿ ವಿಂಗಡಿಸುವ ಮೂಲಕ ಎಣಿಕೆ ಪ್ರಕ್ರಿಯೆ ಶುರುವಾಗುತ್ತದೆ.
ಎಣಿಕೆ ಟೇಬಲ್‌ನಲ್ಲಿ ಪ್ರತೀ ಅಭ್ಯರ್ಥಿಗೆ ಒಂದು ಟ್ರೇ ಇರುತ್ತದೆ. ಪರಿಶೀಲನೆ ಪ್ರಕ್ರಿಯೆಯ ಭಾಗವಾಗಿ, ಮತಗಳನ್ನು ತಲಾ 25ರಂತೆ ಬಂಡಲ್ ಮಾಡಲಾಗುತ್ತದೆ ಮತ್ತು ಚಲಾವಣೆಯಾದ ಮತಗಳು ಮತ್ತು ಎಣಿಕೆ ಮಾಡಬೇಕಾದ ಮತಗಳ ಹೋಲಿಕೆ ನಡೆಯುತ್ತದೆ. ನಂತರ ಆಯಾ ಟ್ರೇಗಳಲ್ಲಿ ಮತಗಳನ್ನು ಇರಿಸುವ ಮೂಲಕ ಅವುಗಳನ್ನು ಎಣಿಸಲಾಗುತ್ತದೆ. ಪ್ರತೀ ಮತವನ್ನು ಆಯಾ ಟ್ರೇಗಳಲ್ಲಿ ಇರಿಸಲಾಗಿರುವುದರಿಂದ ಏಜೆಂಟರು ಅದರ ಮೇಲೆ ನಿಗಾ ಇಡುತ್ತಾರೆ. ಅಂತಿಮ ಲೆಕ್ಕಾಚಾರದ ಮೊದಲು, ತಿರಸ್ಕೃತ ಮತಗಳನ್ನು ಮರು ದೃಢೀಕರಿಸಲಾಗುತ್ತದೆ ಮತ್ತು ಅನುಮಾನಾಸ್ಪದ ಮತಗಳನ್ನು ಏಜೆಂಟ್‌ಗಳ ಜೊತೆಗೆ ಪರಿಶೀಲಿಸಲಾಗುತ್ತದೆ. ಎಲ್ಲಾ ವಿವಾದಗಳನ್ನು ಸ್ಥಳದಲ್ಲೇ ಪರಿಹರಿಸಲಾಗುತ್ತದೆ. ಅಗತ್ಯವಿದ್ದರೆ ಚುನಾವಣಾಧಿಕಾರಿ ಮಧ್ಯಸ್ಥಿಕೆ ವಹಿಸುತ್ತಾರೆ. ಮತ ಎಣಿಕೆ ಮುಕ್ತ ಮತ್ತು ಪಾರದರ್ಶಕವಾಗಿರುತ್ತದೆ.
ಇವಿಎಂ ವ್ಯವಸ್ಥೆಯ ಪ್ರಕ್ರಿಯೆಯಲ್ಲಿ, ಇವಿಎಂ ಎರಡು ಯೂನಿಟ್‌ಗಳನ್ನು ಒಳಗೊಂಡಿರುತ್ತದೆ. ಅಭ್ಯರ್ಥಿಗಳ ಹೆಸರುಗಳು ಮತ್ತು ಪ್ರತೀ ಬಟನ್ ವಿರುದ್ಧ ಚಿಹ್ನೆಗಳನ್ನು ಹೊಂದಿರುವ ಬ್ಯಾಲೆಟ್ ಯೂನಿಟ್ (ಬಿಯು) ಮತ್ತು ಮೆಮೊರಿ ಮತ್ತು ಡಿಸ್ಪ್ಲೇ ಇರುವ ಕಂಟ್ರೋಲ್ ಯೂನಿಟ್. ಈ ಎರಡೂ ಯೂನಿಟ್‌ಳಿಗೆ ವಿವಿಪ್ಯಾಟ್ ಸಂಪರ್ಕ ಇರುತ್ತದೆ.
ಕಂಟ್ರೋಲ್ ಯೂನಿಟ್ ಮತಗಟ್ಟೆ ಅಧಿಕಾರಿ ಬಳಿಯಿದ್ದರೆ. ಬ್ಯಾಲೆಟ್ ಯೂನಿಟ್ ಮತ್ತು ವಿವಿಪ್ಯಾಟ್ ಅನ್ನು ಮತದಾನ ವಿಭಾಗದ ಒಳಗೆ ಇರಿಸಲಾಗಿರುತ್ತದೆ.
ಪ್ರತೀ ಬಾರಿ ಮತದಾರರು ಪ್ರವೇಶಿಸಿದಾಗ, ಮತಗಟ್ಟೆ ಅಧಿಕಾರಿ ಬಿಯು ಬಟನ್ ಒತ್ತುತ್ತಾರೆ.
ಹಸಿರು ದೀಪ ಬೆಳಗುತ್ತಿದ್ದಂತೆ, ಅಭ್ಯರ್ಥಿಯ ಹೆಸರು ಮತ್ತು ಚಿಹ್ನೆಯ ಎದುರಲ್ಲಿನ ಬಟನ್ ಒತ್ತುವ ಮೂಲಕ ಮತ ಚಲಾಯಿಸಬಹುದು.
ತಕ್ಷಣವೇ ವಿವಿಪ್ಯಾಟ್ ಸ್ಕ್ರೀನ್ ಮೇಲೆ ಅಭ್ಯರ್ಥಿಯ ಸರಣಿ ಸಂಖ್ಯೆ, ಹೆಸರು ಮತ್ತು ಚಿಹ್ನೆ ಕಾಣಿಸಿಕೊಳ್ಳುತ್ತದೆ, ಸುಮಾರು ಏಳು ಸೆಕೆಂಡುಗಳವರೆಗೆ ಅದನ್ನು ನೋಡಬಹುದು. ಏಳು ಸೆಕೆಂಡುಗಳ ನಂತರ, ಕಂಟ್ರೋಲ್ ಯೂನಿಟ್ ನಿಂದ ಜೋರಾಗಿ ಬೀಪ್ ಹೊರಹೊಮ್ಮುತ್ತದೆ, ಮತ ಚಲಾವಣೆಯಾಗಿದೆ ಎಂಬುದನ್ನು ಅದು ಸೂಚಿಸುತ್ತದೆ.
ಮತಗಳ ಎಣಿಕೆಯ ದಿನ, ಎಣಿಕೆ ಮಾಡುವ ಅಧಿಕಾರಿ ಕಂಟ್ರೋಲ್ ಯೂನಿಟ್‌ನಲ್ಲಿ ಎಣಿಕೆ ಬಟನ್ ಒತ್ತುತ್ತಾರೆ, ಅದು ಪ್ರತೀ ಅಭ್ಯರ್ಥಿ ಪಡೆದ ಮತಗಳ ಸಂಖ್ಯೆಯನ್ನು ತೋರಿಸುತ್ತದೆ.
ಹೀಗೆ ಕಾಗದದ ಮತಪತ್ರ ವ್ಯವಸ್ಥೆ ಸಂಪೂರ್ಣ ಪಾರದರ್ಶಕವಾಗಿದ್ದರೆ, ಇವಿಎಂ ಮತ್ತು ವಿವಿಪ್ಯಾಟ್ ವ್ಯವಸ್ಥೆ ಸಂಪೂರ್ಣ ಅಪಾರದರ್ಶಕ ಎಂಬುದು ವ್ಯಾಪಕವಾಗಿ ಕೇಳಿ ಬರುತ್ತಿರುವ ದೂರು.
ಮತದಾರನ ಆಯ್ಕೆಯ ಅಭ್ಯರ್ಥಿಗೇ ಅಂತಿಮವಾಗಿ ಮತ ಹೋಗಿದೆಯೇ ಎಂಬುದನ್ನು ಇವಿಎಂನಲ್ಲಿ ಖಚಿತಪಡಿಸಿಕೊಳ್ಳಲು ಆಗುವುದಿಲ್ಲ.
ಮತದಾರರು ಚೀಟಿಯನ್ನು ಏಳು ಸೆಕೆಂಡುಗಳ ಕಾಲ ನೋಡಬಹುದು ಅಷ್ಟೆ. ಅದು ನಿಜವಾಗಿಯೂ ಇವಿಎಂ ಒಳಗೆ ದಾಖಲಾಯಿತೇ ಎಂಬುದು ಖಚಿತವಾಗಲು ಯಾವುದೇ ಅವಕಾಶವಿಲ್ಲ.
ಇವಿಎಂಗಳು ವನ್ ಟೈಮ್ ಪ್ರೋಗ್ರಾಮೆಬಲ್ ಚಿಪ್‌ಗಳನ್ನು ಹೊಂದಿರುವ ಸಂಪೂರ್ಣ ಸ್ವತಂತ್ರ ಯಂತ್ರಗಳೆಂಬ ಮಾತು ನಿಜವಲ್ಲ ಎಂದು ತಜ್ಞರು ಮತ್ತು ವೃತ್ತಿಪರರು ಹೇಳುತ್ತಾರೆ.
ಚುನಾವಣೆ ಘೋಷಣೆ ಮತ್ತು ಅಭ್ಯರ್ಥಿಗಳ ಪಟ್ಟಿ ಅಂತಿಮವಾದ ನಂತರ ಬಾಹ್ಯ ಸಾಧನ ಬಳಸಿಕೊಂಡು ಅಭ್ಯರ್ಥಿಗಳ ಹೆಸರು ಮತ್ತು ಚಿಹ್ನೆಯನ್ನು ಇವಿಎಂಗಳಿಗೆ ಅಪ್ಲೋಡ್ ಮಾಡಬೇಕಾಗುತ್ತದೆ.
ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ಇಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಲಿಮಿಟೆಡ್ ಇಂಜಿನಿಯರ್‌ಗಳು ಈ ವಿವರಗಳನ್ನು ಅಪ್‌ಲೋಡ್ ಮಾಡಲು ಸಿಂಬಲ್ ಲೋಡಿಂಗ್ ಯೂನಿಟ್ ಎಂಬ ಸಾಧನವನ್ನು ಬಳಸಬೇಕೆಂದು ಚುನಾವಣಾ ಆಯೋಗದ ಕೈಪಿಡಿ ಹೇಳುತ್ತದೆ.
ಅದೇ ಕೈಪಿಡಿಯಲ್ಲಿಯೇ, ಸಿಂಬಲ್ ಲೋಡಿಂಗ್ ಯೂನಿಟ್ ಅನ್ನು ಇವಿಎಂ ಮತ್ತು ವಿವಿಪ್ಯಾಟ್‌ಗಳ ಜೊತೆಗೆ ಸ್ಟ್ರಾಂಗ್ ರೂಮ್‌ನಲ್ಲಿ ಸಂಗ್ರಹಿಸಬೇಕಾಗಿಲ್ಲ ಮತ್ತು ಮತದಾನದ ನಂತರ ತಕ್ಷಣವೇ ಇಂಜಿನಿಯರ್‌ಗಳಿಗೆ ಮರಳಿಸಬೇಕು ಎಂದೂ ಕೂಡ ಹೇಳುತ್ತದೆ. ಹೀಗಾಗಿ ಅವು ಚುನಾವಣಾಧಿಕಾರಿಯ ವ್ಯಾಪ್ತಿಯಿಂದ ಹೊರಗೇ ಉಳಿದುಬಿಡುತ್ತವೆ.
1961ರ ಚುನಾವಣಾ ನಿಯಮಗಳ ನಡವಳಿಕೆಯ ಪ್ರಕಾರ, ವಿವಿಪ್ಯಾಟ್‌ಗಳ ಎಣಿಕೆ ಇವಿಎಂಗಳಲ್ಲಿನ ಎಣಿಕೆಗಿಂತ ಹೆಚ್ಚು ವಿಶ್ವಸನೀಯವಾಗಿದೆ.
ಕಂಟ್ರೋಲ್ ಯೂನಿಟ್‌ನಲ್ಲಿ ತೋರಿಸುವ ಮತಗಳು ಮತ್ತು ಎಣಿಕೆಯ ನಡುವೆ ವ್ಯತ್ಯಾಸವಿದ್ದರೆ, ಫಾರ್ಮ್ 20ರಲ್ಲಿ ಪೇಪರ್ ಸ್ಲಿಪ್‌ಗಳ ಎಣಿಕೆಯ ಪ್ರಕಾರ ತಿದ್ದುಪಡಿಗೆ ಸೂಚನೆಯಿರುತ್ತದೆ. ಆದರೆ, ಫಲಿತಾಂಶಗಳನ್ನು ಘೋಷಿಸುವ ಮೊದಲು ವಿವಿಪ್ಯಾಟ್ ಸ್ಲಿಪ್‌ಗಳನ್ನು ಸಂಪೂರ್ಣವಾಗಿ ಎಣಿಕೆ ಮಾಡದಿರುವುದು ಸ್ಪಷ್ಟವಾಗಿ ಆರ್ಟಿಕಲ್ 14 ರ ಉಲ್ಲಂಘನೆಯಾಗಿದೆ ಎಂದು ಕಾನೂನು ತಜ್ಞರು ವಾದಿಸುತ್ತಾರೆ.
ಬ್ಯಾಲೆಟ್ ಪೇಪರ್ ವ್ಯವಸ್ಥೆಯಡಿಯಲ್ಲಿ, ಮತಪೆಟ್ಟಿಗೆಗಳ ತಯಾರಿಕೆ, ಮತಪತ್ರಗಳ ಮುದ್ರಣ, ಅದರ ರವಾನೆ ಮತ್ತು ಮತಗಳ ಎಣಿಕೆಯ ಮೇಲೆ ಚುನಾವಣಾ ಆಯೋಗದ ಸಂಪೂರ್ಣ ನಿಯಂತ್ರಣ ಇರುತ್ತದೆ. ಆದರೆ ಇವಿಎಂಗಳ ಮೇಲೆ ಇಂತಹ ನಿಯಂತ್ರಣ ಇರುವುದಿಲ್ಲ.
ಇವಿಎಂ ತಯಾರಿಸುವ ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ಇಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಲಿಮಿಟೆಡ್ ಕೂಡ ಆಯೋಗದ ನಿಯಂತ್ರಣದಲ್ಲಿ ಇಲ್ಲ. ಅವು ಆಯಾ ಸಚಿವಾಲಯಗಳ ನಿಯಂತ್ರಣದಲ್ಲಿರುತ್ತವೆ. ಆ ಸಂಸ್ಥೆಗಳ ಆಡಳಿತ ಮಂಡಳಿಯಲ್ಲಿ ಕೂಡ ಆಡಳಿತಾರೂಢ ಬಿಜೆಪಿಯ ಜನರೇ ಇದ್ದಾರೆ ಎಂಬ ಆರೋಪಗಳಿವೆ.
ಈ ಸಂಸ್ಥೆಗಳು ರಹಸ್ಯ ಸಾಫ್ಟ್‌ವೇರ್ ಪ್ರೋಗ್ರಾಂ ಅನ್ನು ವಿದೇಶಿ ಚಿಪ್ ತಯಾರಕರೊಂದಿಗೆ ಇವಿಎಂಗಳಲ್ಲಿ ಬಳಸುವ ಮೈಕ್ರೋ-ನಿಯಂತ್ರಕಗಳಿಗೆ ಕಾಪಿ ಮಾಡಲು ಶೇರ್ ಮಾಡಿಕೊಳ್ಳುತ್ತವೆ.
ಆ ವಿದೇಶಿ ಕಂಪೆನಿಗಳು ಸಾಫ್ಟ್‌ವೇರ್ ಕೋಡ್‌ನೊಂದಿಗೆ ಇರುವ ಮೈಕ್ರೋ ನಿಯಂತ್ರಕಗಳನ್ನು ಇವಿಎಂ ತಯಾರಕರಿಗೆ ತಲುಪಿಸುತ್ತವೆ. ಆದರೆ, ಇವಿಎಂ ತಯಾರಕರಾಗಲೀ ಅಥವಾ ಚುನಾವಣಾ ಆಯೋಗದ ಅಧಿಕಾರಿಗಳಾಗಲೀ ಅದನ್ನು ಓದಲು ಅವಕಾಶವಿಲ್ಲ.
ಆದ್ದರಿಂದ, ಇವಿಎಂ ಮತದಾನ ಪಾರದರ್ಶಕತೆ ಕುರಿತ ಪ್ರಜಾಪ್ರಭುತ್ವದ ಯಾವುದೇ ತತ್ವಗಳನ್ನು ಅನುಸರಿಸುವುದಿಲ್ಲ ಎಂಬುದು ಸ್ಪಷ್ಟ ಎಂದು ರಾಜಕೀಯ ಪಕ್ಷಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಆರೋಪಿಸುತ್ತಿದ್ದಾರೆ. ಹಾಗಾಗಿಯೇ ಕಾಗದದ ಮತಪತ್ರ ವ್ಯವಸ್ಥೆಗೆ ಈಗ ಒತ್ತಾಯಗಳು ತೀವ್ರವಾಗುತ್ತಿವೆ.
ಕಾಗದದ ಮತಪತ್ರ ವ್ಯವಸ್ಥೆಯ ವಿರುದ್ಧ ಇರುವ ಏಕೈಕ ಆತಂಕವೆಂದರೆ, ದುಷ್ಕರ್ಮಿಗಳು ಬೂತ್ ವಶಪಡಿಸಿಕೊಳ್ಳುವುದು ಮತ್ತು ಮತಯಂತ್ರ ತುಂಬುವ ಸಾಧ್ಯತೆ ಬಗ್ಗೆ.
ಆದರೆ ಈಗ ಕಾಲ, ವ್ಯವಸ್ಥೆ ಎರಡೂ ಬದಲಾಗಿದೆ. ಹಿರಿಯ ಚುನಾವಣಾ ಅಧಿಕಾರಿಗಳು, ಚುನಾವಣಾ ಆಯೋಗದ ವೀಕ್ಷಕರು, ಪೊಲೀಸರು ಮತ್ತು ಫ್ಲೈಯಿಂಗ್ ಸ್ಕ್ವಾಡ್‌ಗಳು ಸಿಸಿಟಿವಿ ಕ್ಯಾಮರಾಗಳ ಮೂಲಕ ಮತಗಟ್ಟೆಗಳಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಲೈವ್ ಆಗಿ ವೀಕ್ಷಿಸಬಹುದು. ಯಾವುದೇ ಕಿಡಿಗೇಡಿತನದ ಸಂದರ್ಭದಲ್ಲಿ ತಕ್ಷಣ ಮಧ್ಯಪ್ರವೇಶಿಸಬಹುದು. ಅಲ್ಲದೆ, ಸೂಕ್ಷ್ಮ ಬೂತ್‌ಗಳನ್ನು ಸಶಸ್ತ್ರ ಪೊಲೀಸರು ಕಾವಲು ಮಾಡುತ್ತಾರೆ. ಯಾವುದೇ ಮತಗಟ್ಟೆ ವಶಪಡಿಸಿಕೊಂಡರೆ ಮತ್ತು ಮತಪತ್ರಗಳನ್ನು ತುಂಬಿಸಿದರೆ ಗುಂಡಿಕ್ಕಲು ಆದೇಶ ನೀಡಬಹುದು. ಈ ಬೇಡಿಕೆಯನ್ನು ಚುನಾವಣಾ ಆಯೋಗ ಒಪ್ಪದೆ ಇರಲು ಯಾವುದೇ ಕಾರಣವಿಲ್ಲ.
ಚುನಾವಣಾ ಆಯೋಗ ಇವಿಎಂ ಸಂಪೂರ್ಣವಾಗಿ ಸುರಕ್ಷಿತ, ಅದರಲ್ಲಿ ಯಾವುದೇ ತಿರುಚುವಿಕೆ ಸಾಧ್ಯವೇ ಇಲ್ಲ ಎಂದು ಮತ್ತೆ ಮತ್ತೆ ಹೇಳುತ್ತದೆ. ಆದರೆ ಅದೇ ಇವಿಎಂ ಮೂಲಕ ಚುನಾವಣೆ ನಡೆದ ಬಳಿಕ ಏಳುವ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರವನ್ನು ಚುನಾವಣಾ ಆಯೋಗ ಕೊಡುವುದೇ ಇಲ್ಲ.
ಚಲಾವಣೆಯಾದ ಮತಗಳು ಹಾಗೂ ಎಣಿಕೆಯಾದ ಮತಗಳ ನಡುವೆ ಇಷ್ಟೊಂದು ವ್ಯತ್ಯಾಸ ಎಲ್ಲಿಂದ ಬಂತು ಎಂದು ಕೇಳಿದರೆ ಆಯೋಗದ ಬಳಿ ಉತ್ತರವಿಲ್ಲ. ಇವಿಎಂ ತಯಾರಿಸುವ ಕಂಪೆನಿಗಳು ಸಚಿವಾಲಯಗಳ ಅಧೀನದಲ್ಲಿರುತ್ತವೆ, ಅಲ್ಲಿ ಆಡಳಿತಾರೂಢ ಪಕ್ಷದವರೇ ನಿರ್ದೇಶಕರಾಗಿರುತ್ತಾರೆ ಎಂಬುದಕ್ಕೂ ಯಾವುದೇ ಸ್ಪಷ್ಟೀಕರಣವಿಲ್ಲ.
ಎಲ್ಲಕ್ಕಿಂತ ಮುಖ್ಯವಾಗಿ ದೇಶದ ಭವಿಷ್ಯ ನಿರ್ಧರಿಸುವ ಚುನಾವಣಾ ಫಲಿತಾಂಶದ ವಿಷಯವಿದು. ಇದರಲ್ಲಿ ಇಡೀ ವ್ಯವಸ್ಥೆ ಪ್ರಾರಂಭದಿಂದ ಕೊನೆವರೆಗೆ ಸಂಪೂರ್ಣ ಪಾರದರ್ಶಕವಾಗಿದೆ ಎಂದರೆ ಸಾಲದು, ಅದು ಪಾರದರ್ಶಕವಾಗಿದೆ, ಸರಿಯಾಗಿದೆ ಎಂಬುದು ಮತದಾರರಿಗೆ ಕಾಣುವಂತಿರಬೇಕು, ಅವರಿಗೆ ಆ ಇಡೀ ಪ್ರಕ್ರಿಯೆಯಲ್ಲಿ ವಿಶ್ವಾಸ ಇರಬೇಕು.
ಇವಿಎಂ ಸಂಪೂರ್ಣ ಸುರಕ್ಷಿತ ಎಂದು ಚುನಾವಣಾ ಆಯೋಗ ಹೇಳಿದರೆ ಸಾಲದು, ಅದು ಸಂಪೂರ್ಣ ಸುರಕ್ಷಿತ ಎಂದು ಮತದಾರರಿಗೆ ಸ್ಪಷ್ಟವಾಗಿ ಕಾಣುವಂತಿರಬೇಕು. ಆ ಪಾರದರ್ಶಕತೆ, ವಿಶ್ವಾಸವೇ ಚುನಾವಣೆಯ ಬುನಾದಿ.
ಚುನಾವಣಾ ಕಾನೂನಿಗೆ ಯಾವುದೇ ತಿದ್ದುಪಡಿಯನ್ನು ಸುಗ್ರೀವಾಜ್ಞೆಯ ಮೂಲಕ ಕೆಲವೇ ನಿಮಿಷಗಳಲ್ಲಿ ತರಬಹುದು. ಹಾಗಾಗಿ, ಇವಿಎಂಗಳಿಗೆ ‘ಮಾರ್ಕೆಟಿಂಗ್ ಏಜೆಂಟ್’ ಆಗುವ ಬದಲು ಚುನಾವಣಾ ಆಯೋಗ ಜನರ ಆಗ್ರಹಕ್ಕೆ ಕಿವಿಗೊಡಬೇಕಿದೆ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ಕಾಗದದ ಮತಪತ್ರ ವ್ಯವಸ್ಥೆಗೆ ಮರಳಬೇಕಿದೆ.