ಮನೆ ಗೋಡೆ ಕುಸಿತ: ಜೀವ ಭಯದಲ್ಲಿ ಕೊರಗ ಕುಟುಂಬ

Update: 2022-07-16 15:39 GMT

ಬೈಂದೂರು : ನಿರಂತರವಾಗಿ ಮಳೆಯಿಂದ ನಾಡ ಗ್ರಾಮದ ರಾಮ ನಗರ ಜನತಾ ಕಾಲೋನಿಯ ಕೊರಗ ಸಮುದಾಯದ ದುರ್ಗಿ ಅವರ ಮನೆಯ ಗೋಡೆಯು ಶುಕ್ರವಾರ ರಾತ್ರಿ ಕುಸಿದು ಬಿದ್ದಿರುವ ಬಗ್ಗೆ ವರದಿಯಾಗಿದೆ.

ಇದರಿಂದ ಮನೆಗೆ ಸಂಪೂರ್ಣ ಹಾನಿಯಾಗಿ ವಾಸ್ತವ್ಯಕ್ಕಾಗಿ ಪರದಾಡುವ ಪರಿಸ್ಥಿತಿ ಕೊರಗ ಕುಟುಂಬಕ್ಕೆ ಎದುರಾಗಿದೆ. ಇನ್ನೂ ಮಳೆ ಗಾಳಿ ಹೆಚ್ಚಾದಲ್ಲಿ ಪೂರ್ತಿ ಮನೆ ಬಿಳುವ ಸಾಧ್ಯತೆ ಇದ್ದು, ಮನೆಯವರು ಅದೇ ಮನೆಯ ಒಂದು ಭಾಗದಲ್ಲಿ ಜೀವ ಭಯದಲ್ಲಿ ವಾಸ ಮಾಡುವಂತಾಗಿದೆ.

ಜಿಲ್ಲೆಯಲ್ಲಿ ಕಳೆದ ೫ ವರ್ಷದಿಂದ ೪೦೦ಕ್ಕೂ ಅಧಿಕ ಕೊರಗ ಸಮುದಾಯದ ಕುಟುಂಬಗಳು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಇಲಾಖೆಗೆ ಅರ್ಜಿ ಸಲ್ಲಿಸಿ ಮನೆ ಮಂಜೂರಾತಿಗಾಗಿ ಕಾಯುತ್ತಿದ್ದಾರೆ. ಸರಕಾರ  ಕೊರಗ ಸಮುದಾಯದ ಕುಟುಂಬಗಳಿಗೆ ಮನೆ ನೀಡಲು ಮೀನಾಮೇಷ ಏಣಿಸುತ್ತಿದೆ. ೩೫೦ ಕುಟುಂಬ ಗಳಿಗೆ ಮನೆ ನೀಡಲು ಅನುದಾನ ಲಭ್ಯ ಇದ್ದರು ಸಹ ಹಲವಾರು ತಾಂತ್ರಿಕ ಕಾರಣ ನೀಡಿ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ದುರ್ಗಿಯವರ ಮನೆಗೆ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಮತ್ತು ದಲಿತ ಹಕ್ಕುಗಳ ಸಮಿತಿ ನಿಯೋಗ ಭೇಟಿ ನೀಡಿದ್ದು, ದುರ್ಗಿ ಅವರು ಸೇರಿದಂತೆ ಜಿಲ್ಲೆಯ ಹಲವಾರು ವಸತಿ ರಹಿತ ಕೊರಗ ಕುಟುಂಬಗಳಿಗೆ ಕೂಡಲೇ ವಸತಿ ಸೌಲಭ್ಯವನ್ನು ನೀಡಲು ಸರಕಾರ ಮತ್ತು ಜಿಲ್ಲಾಡಳಿತ ಕ್ರಮ ವಹಿಸಬೇಕು ಎಂದು ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಒತ್ತಾಯಿಸಿದೆ.

ದುರ್ಗಿ ಮತ್ತು ಅವರ  ಕುಟುಂಬಕ್ಕೆ ಸಧ್ಯ ಮಳೆಗಾಲದಲ್ಲಿ ವಾಸ್ತವ್ಯಕೆ ತುರ್ತು ವ್ಯವಸ್ಥೆ ಕಲ್ಪಿಸಬೇಕಾಗಿದೆ. ಹಾಗೆ ಅವರಿಗೆ ಆಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ಒದಗಿಸಿಲು ಜಿಲ್ಲಾ ಆಡಳಿತ ಕ್ರಮ ವಹಿಸಬೇಕು ಎಂದು ನಿಯೋಗ ಆಗ್ರಹಿಸಿದೆ. ಈ ಸಂದರ್ಭದಲ್ಲಿ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಜಿಲ್ಲಾ ಸಂಚಾಲಕ ಶ್ರೀಧರ ನಾಡ, ದಲಿತ ಹಕ್ಕುಗಳ ಸಮಿತಿ ಸದಸ್ಯೆ ನಾಗರತ್ನ ನಾಡ, ಲಕ್ಮೀ, ಸುರೇಶ್, ಸಂತೋಷ, ಹೆರಿಯ, ನಾಗರಾಜ್, ರೂಪ, ರಘು, ಬಾಬು ರಾಮನಗರ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News