ಬೈಂದೂರು: ರಸ್ತೆ ಅಪಘಾತಕ್ಕೆ ಮಣಿಪಾಲದ ವಿದ್ಯಾರ್ಥಿಗಳಿಬ್ಬರು ಬಲಿ

Update: 2022-07-17 16:22 GMT

ಬೈಂದೂರು: ಕಿರಿಮಂಜೇಶ್ವರ ಗ್ರಾಮದ ಕಂಬದಕೋಣೆ ಗೋಳಿಮರ ಕ್ರಾಸ್ ತಿರುವಿನ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಜು.17ರಂದು ಬೆಳಗ್ಗೆ 10ಗಂಟೆಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆಂಧ್ರಪ್ರದೇಶ ಮೂಲದ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟ ಬಗ್ಗೆ ವರದಿಯಾಗಿದೆ.

ಮೃತರನ್ನು ಆಂಧ್ರಪ್ರದೇಶದ ಭರತ್ ಕುಮಾರ್ ರೆಡ್ಡಿ ಎಂಬವರ ಮಗ ಕಲ್ಲೂರು ತರುಣ್ ಕುಮಾರ್ ರೆಡ್ಡಿ(೧೯) ಹಾಗೂ ಅಣ್ಣ ರೆಡ್ಡಿ ಎಂಬವರ ಮಗ ಆದಿತ್ಯ ರೆಡ್ಡಿ(೧೮) ಎಂದು ಗುರುತಿಸಲಾಗಿದೆ. ಮಣಿಪಾಲ ಎಂಐಟಿಯ ಪ್ರಥಮ ವರ್ಷದ ವಿದ್ಯಾರ್ಥಿಗಳಾಗಿರುವ ಇವರು, ಮಣಿಪಾಲದಿಂದ ಮುರ್ಡೇಶ್ವರಕ್ಕೆ ರೆಂಟ್ ಬೈಕಿನಲ್ಲಿ ತಿರುಗಾಡಲು ಹೊರಟಿದ್ದರೆನ್ನಲಾಗಿದೆ.

ಬೈಕ್‌ನ್ನು ದಾರಿ ಮಧ್ಯೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಬೈಕ್, ನಿಯಂತ್ರಣ ತಪ್ಪಿ ಹೆದ್ದಾರಿ ಮಧ್ಯೆ ಇರುವ ಡಿವೈಡರ್‌ಗೆ ಢಿಕ್ಕಿ ಹೊಡೆಯಿತು. ಮುಂದೆ ಡಿವೈಡರ್ ಮೇಲೆ ಹತ್ತಿದ ಬೈಕ್ ರಿಪ್ಲೆಕ್ಟರ್ ಕಂಬಕ್ಕೆ, ಅಲ್ಲಿಂದ ಮುಂದೆ ಸಾಗಿ ಸಂಚಾರ ಸೂಚನಾ ಫಲಕಕ್ಕೂ ಢಿಕ್ಕಿ ಹೊಡೆಯಿತು. ನಂತರ ಡಿವೈಡರ್‌ನ ಇಳಿಜಾರಿ ನಲ್ಲಿ ಸುಮಾರು ೫೦ ಅಡಿಯಷ್ಡು ಚಲಿಸಿ ರಸ್ತೆಯ ಮೇಲೆ ಬಿತ್ತೆನ್ನಲಾಗಿದೆ.

ಇದರಿಂದ ಬೈಕ್ ಸಮೇತ ರಸ್ತೆಗೆ ಬಿದ್ದು ಇಬ್ಬರು ಗಾಯಗೊಂಡಿದ್ದು, ಇವರನ್ನು ಆಪತ್ಭಾಂಧವ ಇಬ್ರಾಹಿಂ ಗಂಗೊಳ್ಳಿ ಹಾಗೂ ಪ್ರದೀಪ್ ಖಾರ್ವಿ ಉಪ್ಪುಂದ, ಕೃಷ್ಣ, ನದೀಮ್ ಎರಡು ಅಂಬ್ಯುಲೆನ್ಸ್‌ಗಳಲ್ಲಿ ಕುಂದಾಪುರ ಆಸ್ಪತ್ರೆಗೆ ಸಾಗಿಸಿದರು. ಇವರಲ್ಲಿ  ತರುಣ್ ಕುಮಾರ್ ರೆಡ್ಡಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತ ಪಟ್ಟರೆ, ಆದಿತ್ಯ ರೆಡ್ಡಿ ಚಿಕಿತ್ಸೆ ಫಲಕಾರಿಯಾಗದೆ ಬೆಳಗ್ಗೆ ೧೧ಗಂಟೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

ಮೃತದೇಹ ಮರಣೋತ್ತರ ಪರೀಕ್ಷೆಯನ್ನು ಮಣಿಪಾಲ ಆಸ್ಪತ್ರೆಯಲ್ಲಿ ನಡೆಸಿ ಆಂಧ್ರಪ್ರದೇಶದಿಂದ ಮಣಿಪಾಲಕ್ಕೆ ಆಗಮಿಸಿದ ಕುಟುಂಬದವರಿಗೆ ರಾತ್ರಿ ವೇಳೆ ಹಸ್ತಾಂತರಿಸಲಾಯಿತು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News