ಹಿರಿಯ ಚಿಂತಕ, ಹೋರಾಟಗಾರ ಜಿ.ರಾಜಶೇಖರ್ ನಿಧನ

Update: 2022-07-20 18:20 GMT

ಉಡುಪಿ: ನಾಡಿನ ಹಿರಿಯ ಚಿಂತಕ, ಲೇಖಕ, ವಿಮರ್ಶಕ ಹಾಗು ಜನಪರ ಹೋರಾಟಗಾರ ಉಡುಪಿ ಕೊಳಂಬೆಯ ನಿವಾಸಿ ಜಿ.ರಾಜಶೇಖರ್ (75) ಅನಾರೋಗ್ಯದಿಂದ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ನಿಧನರಾದರು. 

2019ರಿಂದ ಪ್ರೊಗ್ರೆಸಿವ್ ಸುಪ್ರ ನ್ಯೂಕ್ಲಿಯರ್ ಪಾಲ್ಸಿ (ಪಾರ್ಕಿಂಸನ್ ಪ್ಲಸ್) ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಇವರು, ಶ್ವಾಸಕೋಸದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ತೀರಾ ಗಂಭೀರ ಸ್ಥಿತಿಯಲ್ಲಿ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.

ಕೋಮುವಾದದ ವಿರುದ್ಧ ಧ್ವನಿ ಎತ್ತಿ ಅದರ ವಿರುದ್ಧದ ಎಲ್ಲ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದ ರಾಜಶೇಖರ್ ಅವರು , ಕೋಮುಗಲಭೆಗಳು ನಡೆದ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಜನರೊಂದಿಗೆ ಮಾತನಾಡಿ ಸತ್ಯಶೋಧನಾ ವರದಿಗಳನ್ನು ಬರೆದಿದ್ದರು. ಅಲ್ಪಸಂಖ್ಯಾತರು, ದಲಿತ ದಮನಿತರು ಹಾಗು ಎಲ್ಲ ಶೋಷಿತ ವರ್ಗಗಳ ಹಕ್ಕುಗಳಿಗಾಗಿ ಹೋರಾಟದಲ್ಲಿ ಸದಾ ಮೊದಲಿಗರಾಗಿ ಭಾಗವಹಿಸುತ್ತಿದ್ದರು. ಅತ್ಯಂತ ನೇರ, ನಿಷ್ಠುರ ಮಾತುಗಳು ಹಾಗು ವಿಶ್ಲೇಷಣೆಗಳಿಗೆ ಅವರು ಖ್ಯಾತಿ ಪಡೆದಿದ್ದರು. ವಿಶೇಷವಾಗಿ ಕರಾವಳಿ ಜಿಲ್ಲೆಗಳ ಜನಪರ ಹೋರಾಟಗಳು ಹಾಗು ಹೋರಾಟಗಾರರ ಪಾಲಿನ ಅತ್ಯಂತ ಆಪ್ತ ಸ್ನೇಹಿತ ಹಾಗು ಮಾರ್ಗದರ್ಶಕರಾಗಿದ್ದರು ಜಿ. ರಾಜಶೇಖರ್. 

ಮೃತರು ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಪಾರ್ಥಿವ ಶರೀರವನ್ನು ಉಡುಪಿ ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದ್ದು, ಬೆಳಗ್ಗೆ 8 ಗಂಟೆಗೆ ನಗರದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣ ಸಮೀಪದಲ್ಲಿರುವ ಸಂಬಂಧಿಕರ ಮನೆಯಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಬಳಿಕ ಹತ್ತು ಗಂಟೆಗೆ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News