ಲಾಲ್ ಸಲಾಂ, ಜೈ ಭೀಮ್ ಘೋಷಣೆಯೊಂದಿಗೆ ಜಿ.ರಾಜಶೇಖರ್ ಅಂತ್ಯಕ್ರಿಯೆ

Update: 2022-07-21 11:02 GMT

ಉಡುಪಿ, ಜು.21: ಕಳೆದ ರಾತ್ರಿ ಅನಾರೋಗ್ಯದಿಂದ ನಿಧನರಾದ ನಾಡಿನ ಹಿರಿಯ ಚಿಂತಕ, ಲೇಖಕ, ವಿಮರ್ಶಕ ಹಾಗೂ ಜನಪರ ಹೋರಾಟಗಾರ ಜಿ.ರಾಜಶೇಖರ್(75) ಅವರ ಅಂತ್ಯಕ್ರಿಯೆಯನ್ನು ಗುರುವಾರ ಮಧ್ಯಾಹ್ನ ಉಡುಪಿಯ ಬೀಡಿನಗುಡ್ಡೆ ರುಧ್ರಭೂಮಿಯಲ್ಲಿ ಲಾಲ್ ಸಲಾಂ, ಜೈ ಭೀಮ್, ಅಮರ್ ರಹೇ ಘೋಷಣೆಯೊಂದಿಗೆ ನೆರವೇರಿಸಲಾಯಿತು.

ನಗರದ ಮಿಷನ್ ಕಂಪೌಂಡ್ ಸಮೀಪದ ಕರ್ಕಡ ಕಂಪೌಂಡ್‌ನಲ್ಲಿರುವ ಜಿ.ರಾಜಶೇಖರ್ ಪತ್ನಿಯ ತಂಗಿ ಕೆ.ಸುಲೋಚನಾ ಭಟ್ ಅವರ ಮನೆಯಲ್ಲಿ ಬೆಳಗ್ಗೆ 8:30ರಿಂದ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ನೂರಾರು ಗಣ್ಯರು, ಅಭಿಮಾನಿಗಳು, ಬಂಧುಗಳು, ಸಾರ್ವಜನಿಕರು ಪಡೆದರು. ಬಳಿಕ ಮಧ್ಯಾಹ್ನ 12 ಗಂಟೆಗೆ ಬೀಡಿನಗುಡ್ಡೆ ರುದ್ರಭೂಮಿಯಲ್ಲಿ ಪ್ರಾರ್ಥಿವ ಶರೀರ ವನ್ನಿಟ್ಟು ನುಡಿನಮನ ಸಲ್ಲಿಸಲಾಯಿತು.

ಜನಪರ ಹೋರಾಟಗಾರ ಕೆ.ಎಲ್.ಅಶೋಕ್, ದಸಂಸ ಅಂಬೇಡ್ಕರ್ ವಾದ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್, ರಂಗಕರ್ಮಿ ಉದ್ಯಾವರ ನಾಗೇಶ್ ಕುಮಾರ್, ಶಿಕ್ಷಣ ತಜ್ಞ ಡಾ.ಮಹಾಬಲೇಶ್ವರ ರಾವ್, ನಗರಸಭೆ ಸದಸ್ಯ ರಮೇಶ್ ಕಾಂಚನ್, ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟೀಪಳ್ಳ, ಕೆಪಿಸಿಸಿ ಪ್ಯಾನೆಲಿಸ್ಟ್ ವರೋನಿಕಾ ಕರ್ನೆಲಿಯೋ, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಇದ್ರೀಸ್ ಹೂಡೆ, ಪ್ರೊ.ಹಯವದನ ಉಪಾಧ್ಯಾಯ, ಅದಮಾರು ಶ್ರೀಪತಿ ಆಚಾರ್ಯ, ಪತ್ರಕರ್ತ ಶಶಿಧರ್ ಹೆಮ್ಮಾಡಿ, ಸಾಹಿತಿ ವಸಂತ ಬನ್ನಾಡಿ ನುಡಿನಮನ ಸಲ್ಲಿಸಿದರು.

ತದನಂತರ ನೆರೆದ ಪ್ರಗತಿಪರರು, ಚಿಂತಕರು, ಹೋರಾಟಗಾರರು, ವಿವಿಧ ಸಂಘಟನೆಗಳ ಮುಖಂಡರು ಜೈ..ಜೈ..ಜೈ.. ಜೈ ಭೀಮ್...ಜೈ ಭೀಮ್...ಜೈ ಭೀಮ್, ಲಾಲ್ ಸಲಾಂ.. ಲಾಲ್ ಸಲಾಂ, ಜಿ.ರಾಜಶೇಖರ್ ಅಮರ್ ರಹೇ...ಅಮರ್ ರಹೇ..ಜಿ.ರಾಜಶೇಖರ್ ಅವರ ಆಶಯಗಳನ್ನು ಈಡೇರಿಸೋಣ... ಎಂಬ ಘೋಷಣೆ ಕೂಗುವುದರೊಂದಿಗೆ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು. ಜಿ.ರಾಜಶೇಖರ್ ಪುತ್ರರಾದ ಪತ್ರಕರ್ತ ಜಿ.ವಿಷ್ಣು ಹಾಗೂ ಇಂಜಿನಿಯರ್ ರಘುನಂದನ್ ಉಪಸ್ಥಿತರಿದ್ದರು.

ಅಂತಿಮ ದರ್ಶನ: ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಹಿರಿಯ ಸಾಹಿತಿ ವೈದೇಹಿ, ಹಿರಿಯ ಚಿಂತಕ ಪ್ರೊ.ಫಣಿರಾಜ್, ವಿಮರ್ಶಕ ಪ್ರೊ.ಮುರಳೀಧರ್ ಉಪಾಧ್ಯಾಯ, ಸಿಪಿಎಂ ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಸುನೀಲ್ ಕುಮಾರ್ ಬಜಾಲ್, ಸುರೇಶ್ ಕಲ್ಲಾಗರ್, ಕವಿರಾಜ್, ಡೆರಿಕ್ ರೆಬೆಲ್ಲೊ, ನಿವೃತ್ತ ಪ್ರೊ.ರಾಜಾರಾಮ್, ದಿನಕರ ಬೆಂಗ್ರೆ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಶೇಖರ್ ಲಾಯಿಲ, ಬರಹಗಾರ ದಾಮೋದರ್ ಭಟ್ ಬೆಳ್ತಂಗಡಿ, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ನಝೀರ್ ಅಹ್ಮದ್, ಪಿಎಫ್‌ಐ ಜಿಲ್ಲಾಧ್ಯಕ್ಷ ಫಯಾಝ್, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಇಬ್ರಾಹೀಂ ಸಾಹೇಬ್ ಕೋಟ, ಹುಸೇನ್ ಕೋಡಿಬೆಂಗ್ರೆ, ಪ್ರೊ.ಸಿರಿಲ್ ಮಥಾಯಸ್, ಫಾ.ವಿಲಿಯಂ ಮಾರ್ಟಿಸ್, ಕ್ರೈಸ್ತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಪ್ರಶಾಂತ್ ಜತ್ತನ್ನ, ವಿಮಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಕುಂದರ್, ಪ್ರೊ.ವರದೇಶ್ ಹಿರೇಗಂಗೆ, ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ., ವೆಲ್ಫೇರ್ ಪಾರ್ಟಿಯ ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್, ಅನ್ವರ್ ಅಲಿ ಕಾಪು, ಸಾಹಿತಿ ಆರ್.ಕೆ.ಮಣಿಪಾಲ್, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ನಿವಾಸಕ್ಕೆ ಆಗಮಿಸಿ ಅಂತಿಮ ದರ್ಶನ ಪಡೆದು ಸಂತಾಪ ವ್ಯಕ್ತಪಡಿಸಿದರು.

ಸಂತಾಪ: ಜಿ.ರಾಜಶೇಖರ್ ನಿಧನಕ್ಕೆ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಮಾಜಿ ಅಧ್ಯಕ್ಷ ಎಂ.ಪಿ.ಮೊಯ್ದಿನಬ್ಬ, ಉಡುಪಿ ಸಾಲಿಡಾರಿಟಿಯ ನಬೀಲ್ ಗುಜ್ಜರಬೆಟ್ಟು ಸಂತಾಪ ವ್ಯಕ್ತಪಡಿಸಿದ್ದಾರೆ.


 ಹೆಸರು ಕರೆದು ಕಣ್ಣೀರಿಟ್ಟ ವೈದೇಹಿ!

ಅಂತಿಮ ದರ್ಶನಕ್ಕೆ ಆಗಮಿಸಿದ ಹಿರಿಯ ಸಾಹಿತಿ ವೈದೇಹಿ, ಪಾರ್ಥಿವ ಶರೀರದ ತಲೆ ಮೇಲೆ ಕೈ ಇಟ್ಟು ಜಿ.ರಾಜಶೇಖರ್, ಜಿ.ರಾಜಶೇಖರ್ ಎಂದು ಹೆಸರು ಕರೆದು ತೀರಾ ಭಾವುಕರಾಗಿ ಕಣ್ಣೀರಿಟ್ಟರು.

ದಸಂಸ ಮುಖಂಡರು ನೀಲಿ ಬಾವುಟ ಇಟ್ಟು ಜೈ ಭೀಮ್ ವಂದನೆ ಸಲ್ಲಿಸಿದರು. ಸಿಪಿಎಂ ಮುಖಂಡರು ಕೆಂಪು ಬಾವುಟ ಇಟ್ಟು ಲಾಲ್ ಸಲಾಂ ಸಲ್ಲಿಸಿ ಸಂತಾಪ ವ್ಯಕ್ತಪಡಿಸಿದರು.


ಸಮಾಜದ ಬಗ್ಗೆ ಚಿಂತನೆ ಮಾಡುವ ವ್ಯಕ್ತಿತ್ವ ಇವರದ್ದು. ಅವರ ಸಿದ್ಧಾಂತದಲ್ಲಿ ಯಾವುದೇ ರಾಜೀ ಮಾಡಿಕೊಂಡಿರಲಿಲ್ಲ. ಸಮಾನತೆ, ಸಮಾಜವಾದ, ಜಾತ್ಯತೀತದ ಬಗ್ಗೆ ಗಟ್ಟಿ ಧ್ವನಿ ಎತ್ತುವಂತಹ ವ್ಯಕ್ತಿ ಇವರು. ಇವರ ಅಗಲಿಕೆಯಿಂದ ಸಮಾಜಕ್ಕೆ ಅಪಾರ ನಷ್ಟವಾಗಿದೆ. ಎಲ್ಲಿ ಅನ್ಯಾಯ, ಶೋಷಣೆ ಅಲ್ಲಿ ಹೋರಾಟಕ್ಕೆ ನೇತೃತ್ವವನ್ನು ನೀಡುತ್ತಿದ್ದರು.

-ವಿನಯ ಕುಮಾರ್ ಸೊರಕೆ, ಮಾಜಿ ಸಚಿವರು


ಅಪ್ರತಿಮ, ದಿಟ್ಟ ಹೋರಾಟಗಾರರಾಗಿ ಜಿ.ರಾಜಶೇಖರ್ ಸಾರ್ಥಕ ಜೀವನ ನಡೆಸಿ, ಇದೀಗ ನಮ್ಮಿಂದ ದೂರ ಆಗಿದ್ದಾರೆ. ಈ ಮೂಲಕ ಹೋರಾಟದ ಮಹಾ ಕೊಂಡಿಯೊಂದು ಕಳಚಿದೆ. ಸುಮಾರು ಐದು ದಶಕಗಳ ಕಾಲ ಕೋಮು ಸೌಹಾರ್ದಕ್ಕಾಗಿ ನಡೆಸಿದ ದಿಟ್ಟ ಖಚಿತ ನಿಖರ ನಿಲುವಿನ ಹೋರಾಟದಿಂದ ಅವರು ಇಡೀ ಕರ್ನಾಟಕದ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಅಪರೂಪದ ಚಿಂತಕನ ಅಗಲಿಕೆ, ನಮ್ಮ ನಾಡಿಗೆ ದೊಡ್ಡ ನಷ್ಟವಾಗಿದೆ.

-ಕೆ.ಎಲ್.ಅಶೋಕ್, ಜನಪರ ಹೋರಾಟಗಾರ


ಕೋಮುವಾದದ ಬಗ್ಗೆ ಜಿ.ರಾಜಶೇಖರ್‌ಗೆ ಇದ್ದ ನಿಖರತೆ, ಸಮಾಜವನ್ನ್ನು ಅರಿಯುವ ನಿಟ್ಟಿನಲ್ಲಿ ಅವರ ಭಾಷಣ, ಬರಹಗಳು ನಮಗೆ ಪ್ರೇರಣೆ ಹಾಗೂ ಸ್ಪಷ್ಟತೆಯನ್ನು ಕೊಟ್ಟಿದೆ. ಅಗಲಿಕೆ ಸಹಜ. ಆದರೆ ಇಂದಿನ ಸಂದರ್ಭಲ್ಲಿ ಅವರ ಅಗತ್ಯತೆ ಹೆಚ್ಚಿತ್ತು. ಅವರ ಬರಹ, ಭಾಷಣಗಳು ನಮ್ಮ ಚಳವಳಿಗೆ ಮುಂದಿನ ದಿನಗಳಲ್ಲಿ ಬೆಳಕು, ಮಾರ್ಗದರ್ಶನವಾಗಿ ಇರುತ್ತದೆ ಎಂಬ ನಂಬಿಕೆ ಇದೆ. ಸದಾ ಅವರ ವಿಚಾರ ನಮ್ಮ ಜೊತೆ ಇರುತ್ತದೆ.

-ಮುನೀರ್ ಕಾಟಿಪಳ್ಳ, ರಾಜ್ಯಾಧ್ಯಕ್ಷರು, ಡಿವೈಎಫ್‌ಐ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News