ಚದುರಿದ ಮಳೆ; ಬೈಂದೂರಿನಲ್ಲಿ ಐದು ಲಕ್ಷ ರೂ. ಸೊತ್ತು ನಷ್ಟ

Update: 2022-07-21 13:43 GMT

ಉಡುಪಿ : ಜಿಲ್ಲೆಯಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದೆ. ಎರಡು ದಿನಗಳ ಬಳಿಕ ನಿನ್ನೆ ರಾತ್ರಿ ಸಾಧಾರಣ ಮಳೆಯಾಗಿದ್ದು, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸಮಪ್ರಮಾಣದ ಮಳೆಯಾಗಿದೆ. ಇಂದು ಬೆಳಗ್ಗೆ ೮:೩೦ಕ್ಕೆ ಕೊನೆಗೊಂಡಂತೆ ಹಿಂದಿನ ೨೪ ಗಂಟೆಗಳಲ್ಲಿ ಸರಾಸರಿ ೩೨ಮಿ.ಮೀ. ಮಳೆಯಾಗಿದೆ. ಇಂದು ದಿನವಿಡೀ ಉತ್ತಮ ಪ್ರಖರ ಬಿಸಿಲಿತ್ತು.

ಇಂದು ಬೈಂದೂರು ತಾಲೂಕಿನಲ್ಲಿ ಮಾತ್ರ ಮಳೆಹಾನಿಯ ವರದಿಗಳು ಬಂದಿವೆ. ಇಲ್ಲಿ ೯ ಪ್ರಕರಣಗಳಲ್ಲಿ ಒಟ್ಟು ಐದು ಲಕ್ಷರೂ.ಗಳಿಗೂ ಅಧಿಕ ಸೊತ್ತುಗಳಿಗೆ ನಷ್ಟ ಸಂಭವಿಸಿದ ಬಗ್ಗೆ ಮಾಹಿತಿ ಇಲ್ಲಿಗೆ ಬಂದಿದೆ.

ಬೈಂದೂರಿನ ನಾವುಂದ ಗ್ರಾಮದಿಂದ ಏಳು ಪ್ರಕರಣಗಳು ವರದಿಯಾಗಿವೆ.  ನಾವುಂದ ಗ್ರಾಮದ ಕೃಷ್ಣ ಬಿಲ್ಲವರ ಮನೆಗೆ ೭೦ ಸಾವಿರ ರೂ., ಶೇಷಿ ಪೂಜಾರ್ತಿ ಮನೆಗೆ ೬೦ ಸಾವಿರ, ಸಿದ್ಧು, ಬಚ್ಚಿ, ಸೀತು ಪೂಜಾರ್ತಿ, ಮೂಕ ದೇವಾಡಿಗ, ಹಾಗೂ ದೇವಮ್ಮರ ಮನೆಗೆ ತಲಾ ೫೫ ಸಾವಿರ ರೂ.ನಷ್ಟದ ಅಂದಾಜು ಮಾಡಲಾಗಿದೆ.

ಉಳಿದಂತೆ ಪಡುವರಿ ಗ್ರಾಮದ ಬಾಲಯ್ಯ ಎಂಬವರ ವಾಸ್ತವ್ಯದ ಪಕ್ಕಾ ಮನೆಗೆ ೭೦ಸಾವಿರ ರೂ. ಹಾಗೂ ಹಳ್ಳಿಹೊಳೆಯ ಕರಿಯ ಪೂಜಾರಿ ಎಂಬವರ ಕಚ್ಛಾ ಮನೆಗೆ ಸಂಪೂರ್ಣ ಹಾನಿಯಾಗಿದ್ದು ೨೫ಸಾವಿರ ರೂ.ನಷ್ಟವಾಗಿರುವ ಬಗ್ಗೆ ವರದಿ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News