ಈಡಿಯಿಂದ ಸೋನಿಯಾ ವಿಚಾರಣೆ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ

Update: 2022-07-22 14:21 GMT

ಬ್ರಹ್ಮಾವರ : ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ (ಈಡಿ) ವಿಚಾರಣೆ ನಡೆಸುವುದನ್ನು ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಘಟಕ ಇಂದು ಕೇಂದ್ರ ಸರಕಾರ ಹಾಗೂ ಜಾರಿ ನಿರ್ದೇಶನಾಲಯಗಳ ವಿರುದ್ಧ ಬ್ರಹ್ಮಾವರದ ಬಸ್‌ನಿಲ್ದಾಣದ ಬಳಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು.

ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ನಾಯಕರೆಲ್ಲರೂ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರಕಾರ ಇಡಿ, ಐಟಿ ಹಾಗೂ ಸಿಬಿಐಗಳ ಮೂಲಕ ವಿರೋಧ ಪಕ್ಷಗಳ ನಾಯಕರಿಗೆ ಕಿರುಕುಳ ನೀಡುವ ಮೂಲಕ ಅಧಿಕಾರದ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ವಿಧಾನಸಭೆಯಲ್ಲಿ ವಿಪಕ್ಷದ ಉಪನಾಯಕನಾಗಿರುವ ಯು.ಟಿ.ಖಾದರ್ ಮಾತನಾಡಿ, ದೇಶದ ಯಾವುದೇ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗದ, ಎಫ್‌ಐಆರ್ ಆಗದ ಪ್ರಕರಣವನ್ನು ಹಿಡಿದುಕೊಂಡು ಇಡಿ ಕೇವಲ ಕಿರುಕುಳ, ಮಾನಸಿಕ ಹಿಂಸೆ ನೀಡುವ ಉದ್ದೇಶದಿಂದ ಸೋನಿಯಾ ಗಾಂಧಿ ಅವರನ್ನು ವಿಚಾರಣೆಗಾಗಿ ಕರೆಸುತ್ತಿದೆ ಎಂದು ದೂರಿದರು.

ದೇಶದ ಜನರ ಧ್ವನಿಯಾಗಿರುವ ಸೋನಿಯಾ ಹಾಗೂ ರಾಹುಲ್ ಗಾಂಧಿ ಅವರ ಧ್ವನಿಯನ್ನು ಉಡುಗಿಸುವ ಪ್ರಯತ್ನವಾಗಿ ಕೇಂದ್ರ ಸರಕಾರ ಈ ಕೆಟ್ಟ ರಾಜಕೀಯ ನಡೆಸಿದ್ದು, ಯಾವುದೇ ಆಧಾರವಿಲ್ಲದೇ ತನಿಖೆಯ ನೆಪ ದಲ್ಲಿ ವಿಚಾರಣೆ ನಡೆಸುತ್ತಿದೆ ಎಂದು ಆರೋಪಿಸಿದರು.

ಮಾಜಿ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಅಭಯಚಂದ್ರ ಜೈನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕಕುಮಾರ್ ಕೊಡವೂರು, ಮಾಜಿ ಸಚಿವ  ವಿನಯಕುಮಾರ್ ಸೊರಕೆ ಹಾಗೂ ವೆರೋನಿಕಾ ಕರ್ನೇಲಿಯೊ ಅವರು ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕರಾದ ಎಂ.ಎ.ಗಫೂರ್, ಸೌರಭ್ ಬಲ್ಲಾಳ್, ರಮೇಶ್ ಕಾಂಚನ್, ದಿನಕರ ಹೇರೂರು, ಬಿಪಿನ್‌ಚಂದ್ರ ಪಾಲ್, ಪ್ರಖ್ಯಾತ್ ಶೆಟ್ಟಿ, ಮಲ್ಯಾಡಿ ಶಿವರಾಮ ಶೆಟ್ಟಿ, ಇಸ್ಮಾಯಿಲ್ ಆತ್ರಾಡಿ, ದೀಪಕ್ ಕೋಟ್ಯಾನ್, ಡಾ.ಸುನೀತಾ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.

ಹೆದ್ದಾರಿ ತಡೆ: ಪ್ರತಿಭಟನಾ ಸಭೆಯ ಬಳಿಕ ಕಾಂಗ್ರೆಸ್ ಕಾರ್ಯಕರ್ತರು ಸ್ವಲ್ಪ ಹೊತ್ತು ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಕುಳಿತು ವಾಹನಗಳ ಸಂಚಾರವನ್ನು ತಡೆದು ಹೆದ್ದಾರಿ ತಡೆ ನಡೆಸಿದರು. ಬಳಿಕ ಪೊಲೀಸರು ಪ್ರತಿಭಟನಕಾರರನ್ನು ಚದುರಿಸಿ ವಾಹನ ಸಂಚಾರವನ್ನು ಸುಗಮ ಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News