ರಾಜಕೀಯಕ್ಕೆ ಬರುವುದು ಕೊಳ್ಳೆ ಹೊಡೆಯಲೋ, ಜನಸೇವೆಗೋ ಅವರಿಗೆ ಬಿಟ್ಟದ್ದು: ಮಧು ಬಂಗಾರಪ್ಪ

Update: 2022-07-23 14:17 GMT

ಉಡುಪಿ : ಸಾಮರ್ಥ್ಯ ಇದ್ದವರು ರಾಜಕೀಯ ಮಾಡಲಿ ಅಭ್ಯಂತರ ವಿಲ್ಲ. ನಾವು ಕೂಡ ನಮ್ಮ ತಂದೆಯ ಹೆಸರಿನಲ್ಲಿ ರಾಜಕೀಯಕ್ಕೆ ಬಂದಿದ್ದೇವೆ. ರಾಜಕೀಯಕ್ಕೆ ಬರುವುದು ಕೊಳ್ಳೆ ಹೊಡೆಯಲೋ? ಜೈಲಿಗೆ ಹೋಗಲೋ? ಜನಸೇವೆಗೋ ಎಂಬುದು ಅವರಿಗೆ ಬಿಟ್ಟದ್ದು. ವಿಜಯೇಂದ್ರಗೆ ದೇವರು ಒಳ್ಳೇದು ಮಾಡಲಿ. ನಾನಗೂ ಅವರು ಹೀಗೆ ಹಾರೈಸುತ್ತಿದ್ದರೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಧು ಬಂಗಾರಪ್ಪ ಹೇಳಿದ್ದಾರೆ.  

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು,   ಸಿದ್ದರಾಮಯ್ಯ ಅವರಿಗೆ ಹುಟ್ಟುಹಬ್ಬ ಆಚರಿಸುವ ವೈಯಕ್ತಿಕ ಆಸೆ ಇಲ್ಲ. ಅವರ ಅಭಿಮಾನಿಗಳು ಮತ್ತು ಪಕ್ಷದ ತೀರ್ಮಾನದಂತೆ ಕಾರ್ಯಕ್ರಮ ನಡೆಯುತ್ತದೆ. ಸಿದ್ದರಾಮಯ್ಯ ಈ ರಾಜ್ಯದ ಮಹಾನ್ ಹಾಗೂ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠ ವಾಗಿ ಬೆಳೆಸಿದ ವ್ಯಕ್ತಿ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಈ ಕಾರ್ಯಕ್ರಮ ಬಹಳ ಮುಖ್ಯ ಎಂದರು.

ಈ ಕಾರ್ಯಕ್ರಮದ ಮೂಲಕ ಮುಂಬರುವ ರಾಜ್ಯ ಚುನಾವಣೆಗೆ ತಯಾರಿ ರೂಪದಲ್ಲಿ ನಡೆಯುತ್ತಿದೆ. ಇದರೊಂದಿಗೆ ಕಾಂಗ್ರೆಸ್ ಶಕ್ತಿ ಮತ್ತು ಒಗ್ಗಟ್ಟಿನ ಪ್ರದರ್ಶನ ನಡೆಯಲಿದೆ. ಸಿದ್ದರಾಮೋತ್ಸವ ಒಂದು ವ್ಯಕ್ತಿಯ ವೈಭವೀಕರಣ ಅಲ್ಲ. ಕಾಂಗ್ರೆಸ್‌ನಲ್ಲಿ ತುಳಿಯುವ ವ್ಯವಸ್ಥೆ ಎಂದೆಂದಿಗೂ ಇಲ್ಲ ಎಂದು ಅವರು ತಿಳಿಸಿದರು.

ಇದರಲ್ಲಿ ನಾವು ಅವರಿಗೆ ಗಿಫ್ಟ್ ಕೊಡುವುದೇ, ಅವರು ನಮಗೆ ಗಿಫ್ಟ್ ಕೊಡುವುದೇ ಎಂಬುದು ಬೇರೆ ಪ್ರಶ್ನೆ. ಆದರೆ ರಾಜ್ಯದ ಜನತೆ ಮುಂದಿನ ಚುನಾವಣೆಯಲ್ಲಿ ನಮಗೆ ದೊಡ್ಡ ಗಿಫ್ಟ್ ಕೊಟ್ಟರೆ ಸಾಕು ಎಂದ ಅವರು, ಡಿಕೆಶಿ, ಸಿದ್ದರಾಮಯ್ಯ ನಡುವೆ ಗೊಂದಲ ಇಲ್ಲ. ಗುಂಡೂರಾವ್ ಮತ್ತು ಬಂಗಾರಪ್ಪ ನಡುವೆಯೂ ಅನ್ಯೋನ್ಯ ರಾಜಕಾರಣ ಇತ್ತು. ಇದು ಸಿದ್ಧರಾಮಯ್ಯ ಅವರ ಸಂಭ್ರಮಕ್ಕಿಂತ ಕಾಂಗ್ರೆಸ್ ಪಕ್ಷದ ಹಾಗೂ ಸಂಘಟನೆಯ ಸಂಭ್ರಮವಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News