ಮುಂದಿನ ವರ್ಷ ಆರನೆ ತರಗತಿಯಿಂದಲೇ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Update: 2022-07-24 15:30 GMT

ಬ್ರಹ್ಮಾವರ: ರಾಜ್ಯದಲ್ಲಿರುವ ವಸತಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಓಬವ್ವ ಆತ್ಮ ರಕ್ಷಣೆ ಕಲೆ ಕರಾಟೆಯ ತರಬೇತಿ ನೀಡುವುದರ ಮೂಲಕ ಅವರಲ್ಲಿ ಆತ್ಮಸ್ಥೈರ್ಯ, ಮಾನಸಿಕ ದೈಹಿಕ ಸ್ಥೈರ್ಯ ಹೆಚ್ಚಿಸಲು ಪ್ರಯತ್ನಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಬ್ರಹ್ಮಾವರ ತಾಲ್ಲೂಕಿನ ಆರೂರು ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ರವಿವಾರ ಭೇಟಿ ನೀಡಿ ಅವರು ಮಾತನಾಡುತಿದ್ದರು.

ಓಬವ್ವ ಆತ್ಮ ರಕ್ಷಣೆ ಕಲೆ ಕರಾಟೆಯನ್ನು ಮುಂಬರುವ ವರ್ಷಗಳಲ್ಲಿ ಆರನೇ ತರಗತಿ ಯಿಂದಲೇ ವಿದ್ಯಾರ್ಥಿನಿಯರಿಗೆ ಕಲಿಸಿಕೊಡಲಾಗುವುದು. ವಿದ್ಯಾರ್ಥಿನಿ ಯರಲ್ಲಿ ಆತ್ಮ ವಿಶ್ವಾಸ ಮೂಡಿಸಲು ಮತ್ತು ಸ್ವಯಂ ರಕ್ಷಣೆಗಾಗಿ ಆತ್ಮ ರಕ್ಷಣೆ ಕಲೆ ಕರಾಟೆ ತರಬೇತಿಯನ್ನು ನುರಿತ ಶಿಕ್ಷಕಿಯರಿಂದ ನೀಡಲಾಗುತ್ತಿದೆ. ಹೆಣ್ಣು ಮಕ್ಕಳು ಕೀಳು ಎನ್ನುವ ಮನೋಭಾವನೆ ಬಿಟ್ಟು ಇಂತಹ ಕಲೆಯನ್ನು ಕಲಿತು ಅವರು ಜೀವನದಲ್ಲಿ ಮುಂದೆ ಬರಲು ಕರಾಟೆ ಸಹಕಾರಿಯಾಗಲಿದೆ ಎಂದರು.

ರಾಜ್ಯದಲ್ಲಿ ಈ ಬಾರಿ 4 ಹೊಸ ವಸತಿ ಶಾಲೆಗಳನ್ನು ಆರಂಭಿಸಲಾಗಿದ್ದು, ಪ್ರಸ್ತುತ 830 ಶಾಲೆಗಳಲ್ಲಿ ಬಡ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಉತ್ತಮ ಫಲಿತಾಂಶ ಪಡೆಯುತ್ತಿದ್ದಾರೆ. ಈ ಬಾರಿ ಒಂದು ಸಾವಿರ ಶಿಕ್ಷಕರನ್ನು ನೇಮಕಾತಿ ಮಾಡ ಲಾಗಿದ್ದು, ಇನ್ನೂ 1500 ಸಾವಿರ ಶಿಕ್ಷಕರನ್ನು ನೇಮಕಾತಿ ಮಾಡುವ ಚಿಂತನೆ ಇದೆ ಎಂದರು.

ಇದೇ ಸಂದರ್ಭ ಎಸೆಸೆಲ್ಸಿಯಲ್ಲಿ 622 ಅಂಕ ಗಳಿಸಿದ ಶಾಲೆಯ ವಿದ್ಯಾರ್ಥಿ ರಂಜನ್ ಯು.ಜಿ ಅವರನ್ನು ಸಚಿವರು ಸನ್ಮಾನಿಸಿದರು. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವತಿಯಿಂದ ಸಚಿವರನ್ನು ಗೌರವಿಸಲಾಯಿತು.

ಈ ಸಂದರ್ಭ ವಸತಿ ಶಾಲೆಯ ವಿದ್ಯಾರ್ಥಿನಿಯರು ಕರಾಟೆ ಶಿಕ್ಷಕಿ ಅಮೃತಾ ಮಾರ್ಗದರ್ಶನದಲ್ಲಿ ಕರಾಟೆ ಪ್ರದರ್ಶನ ನೀಡಿದರು. ಸಚಿವರು ಶಾಲಾ ಆವರಣದಲ್ಲಿ ಗಿಡವನ್ನು ನೆಟ್ಟು ಪರಿಸರ ರಕ್ಷಣೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಅನಿತಾ ಮಡ್ಲೂರು, ಶಾಲೆಯ ಪ್ರಭಾರ ಪ್ರಾಂಶುಪಾಲ ಶ್ರೀಧರ ಶೆಟ್ಟಿ, ಆರೂರು ಗ್ರಾಪಂ ಅಧ್ಯಕ್ಷೆ ಮಮತಾ ಸಂತೋಷ್ ಶೆಟ್ಟಿ, ಉಪಾಧ್ಯಕ್ಷ ಗುರುರಾಜ್ ರಾವ್, ಮಾಜಿ ಅಧ್ಯಕ್ಷ ರಾಜೀವ ಕುಲಾಲ, ಪಿಡಿಓ ಸಂದೇಶ್ ಶೆಟ್ಟಿ ಉಪಸ್ಥಿತರಿದ್ದರು.

ಶಾಲೆಯಿಂದ ಸಚಿವರಿಗೆ ಮನವಿ

ಆರೂರು ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಸಚಿವರಲ್ಲಿ ಮನವಿ ಮಾಡಲಾಯಿತು.

400ಮೀ. ಟ್ರ್ಯಾಕ್ ಸೌಲಭ್ಯವುಳ್ಳ ಆಟದ ಮೈದಾನ, ವಿಜ್ಞಾನ ಕಾಲೇಜು ವಿಭಾಗಕ್ಕೆ 80 ವಿದ್ಯಾರ್ಥಿಗಳು ಏಕಕಾಲಕ್ಕೆ ಕುಳಿತುಕೊಳ್ಳಲು ಅಗತ್ಯವಿರುವ 2 ಬೋಧನಾ ಕೊಠಡಿ ಮತ್ತು 450 ವಿದ್ಯಾರ್ಥಿಗಳು ಸೇರಬಹುದಾದ ಸಭಾಭವನ ನಿರ್ಮಿಸಿ ಕೊಡುವಂತೆ, ಶಾಲೆಯ ಎರಡು ತರಗತಿ ಕೋಣೆಗಳಿಗೆ ಗ್ರಾನೈಟ್ ಅಳವಡಿಕೆ, ಅಡುಗೆ ಆಹಾರ ಸಾಮಗ್ರಿಗಳ ದಾಸ್ತಾನು ಕೊಠಡಿ ಮತ್ತು ಶಾಲೆಯ ಗೇಟಿನ ಬಳಿ ಸ್ವಾಗತ ಕಮಾನು ನಿರ್ಮಾಣ ಮಾಡಿಕೊಡುವಂತೆ ಮನವಿ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News