ಬಾಂಡ್ಯದಲ್ಲಿ ಗದ್ದೆಗಿಳಿದು ನಾಟಿ ಮಾಡಿ ಖುಷಿಪಟ್ಟ ವಿದ್ಯಾರ್ಥಿಗಳು!

Update: 2022-07-24 15:32 GMT

ಕುಂದಾಪುರ : ರವಿವಾರದ ರಜ ದಿನದಲ್ಲಿ ಮನೆಯಲ್ಲಿ ಆಟ ಪಾಠ ದೊಂದಿಗೆ ಬ್ಯುಸಿ ಆಗಿರಬೇಕಾಗಿದ್ದ ಶಾಲಾ ಮಕ್ಕಳು ಕುಗ್ರಾಮದ ಗದ್ದೆಗೆ ಬಂದು ರಜೆಯ ಮಜವನ್ನು ಸೊಗಸಾಗಿ ಅನುಭವಿಸಿ ಸಂಭ್ರಮಿಸಿದರು.

ಕುಂದಾಪುರ ತಾಲೂಕಿನ ವಕ್ವಾಡಿ ಗುರುಕುಲ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳು ಭಾನುವಾರ ರಜೆಯಿದ್ದರೂ ಶಾಲೆಗೆ ಬಂದು ಅಲ್ಲಿ ಶಾಲಾ ವಾಹನದ ಮೂಲಕ ನೇರಳಕಟ್ಟೆ ಹಾಗೂ ಆಜ್ರಿ ಮಧ್ಯಭಾಗದ ಬಾಂಡ್ಯ ಎಂಬ ಕುಗ್ರಾಮಕ್ಕೆ ಬಂದಿಳಿದರು.

ಶಾಲಾ ಆಡಳಿತ ಮಂಡಳಿ ಆಯೋಜಿಸಿದ್ದ ನಾಟಿ ಕಾರ್ಯಕ್ಕಾಗಿ ಆಗಮಿಸಿದ  ಮಕ್ಕಳನ್ನು ವಿಶೇಷವಾಗಿ ಬರ ಮಾಡಿಕೊಳ್ಳಲಾಯಿತು. ಗದ್ದೆಗೆ ಬಂದ ವಿದ್ಯಾರ್ಥಿ ಗಳು ಹಿಂದೆ ಮುಂದೆ ನೋಡದೇ ಮೊದಲೇ ಉಳುಮೆ ಮಾಡಿದ್ದ ಗದ್ದೆಗಿಳಿದು ನಾಟಿ ಕಾರ್ಯಕ್ಕೆ ಮುಂದಾದರು. ಸ್ಥಳೀಯರ ಕೃಷಿಕ ಮಹಿಳೆಯರು ಆ ಹೊತ್ತಿನ ಮಟ್ಟಿಗೆ ಈ ವಿದ್ಯಾರ್ಥಿಗಳಿಗೆ ನಾಟಿ ಕೆಲಸಕ್ಕೆ ಗುರುವಾದರು.

ನಾವು ಯಾರಿಗೂ ಕಮ್ಮಿ ಇಲ್ಲ ಎಂಬಂತೆ ಹಿರಿಯರು ಹೇಳಿಕೊಟ್ಟಂತೆಯೇ ಕೈಯಲ್ಲಿ ನೇಜಿ ಹಿಡಿದು ಸಾಲು ನಾಟಿ ಮಾಡಿ ಸಂಭ್ರಮಿಸಿದರು. ಮಕ್ಕಳು ನಾಜೂಕಾಗಿ ನಾಟಿ ಮಾಡಿ ಸೈ ಎನಿಸಿಕೊಂಡರು. ವಿದ್ಯಾರ್ಥಿಗಳ ಜೊತೆ ನಾಟಿ ಕಾರ್ಯದಲ್ಲಿ ಸಂಸ್ಥೆಯ ಶಿಕ್ಷಕರೂ ಕೂಡ ಭಾಗಿಯಾಗಿದ್ದರು. ಕೃಷಿ ರಂಗದತ್ತ ಯುವ ಜನತೆ ಬೆನ್ನು ಹಾಕುತ್ತಿರುವ ಮಧ್ಯೆಯೇ ಗುರುಕುಲ ವಿದ್ಯಾಸಂಸ್ಥೆಯ ಯುವ ವಿದ್ಯಾರ್ಥಿಗಳ ಈ ಕೃಷಿ ಆಸಕ್ತಿ ಮಾದರಿಯಾಗಿದೆ.

ಸಂಸ್ಥೆಯ ಜಂಟಿ ಕಾರ್ಯನಿರ್ವಾಹಕರಾದ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ- ಅನುಪಮಾ ಶೆಟ್ಟಿಯವರ ಪರಿಕಲ್ಪನೆಯಲ್ಲಿ ಸುಮಾರು ೭೮ ವಿದ್ಯಾರ್ಥಿಗಳನ್ನು ಬಾಂಡ್ಯದ ಕೃಷಿ ಗದ್ದೆಗೆ ಕರೆತಂದು ಕೃಷಿ ಅನುಭವಿಗಳ ಮೂಲಕ ಅವರಿಗೆ ನಾಟಿ ಮಾಡುವುದನ್ನು ಹೇಳಿಕೊಟ್ಟು ಅವರ ಜೊತೆಗೆ ನಾಟಿ ಕಾರ್ಯದಲ್ಲಿ ತೊಡಗಿಸಿ ಕೊಳ್ಳಲು ಅವಕಾಶ ನೀಡಲಾಯಿತು. ವಿದ್ಯಾರ್ಥಿಗಳಿಗೆ ಇನ್ನಷ್ಟು ಉತ್ಸಾಹ ತುಂಬುವ ನಿಟ್ಟಿನಲ್ಲಿ ಕೆಸರು ಗದ್ದೆ ಓಟ, ಹಗ್ಗಜಗ್ಗಾಟ ಆಯೋಜಿಸಲಾಗಿತ್ತು.

"ಕೃಷಿ ಪ್ರಧಾನದ ಕುಟುಂಬ ನಮ್ಮದು. ಭತ್ತದ ಕೃಷಿ ಲಾಭ-ನಷ್ಟದ ದೃಷ್ಠಿಯಿಂದ ಇತ್ತೀಚೆಗೆ ಕಮ್ಮಿಯಾಗುತ್ತಿದೆ. ನಾವು ಕಳೆದ ದಶಕಗಳಿಂದ ರಾಸಾಯನಿಕ ರಹಿತವಾದ ಭತ್ತದ ಕೃಷಿ ಮಾಡುತ್ತಿದ್ದು ನಮ್ಮ ಸಂಸ್ಥೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಕೃಷಿ ವಿಚಾರ ಲ ಭತ್ತದ ಕೃಷಿ ಬಗ್ಗೆ ತಿಳುವಳಿಕೆ ನೀಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ".
-ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ, ಜಂಟಿ ಕಾರ್ಯನಿರ್ವಾಹಕರು, ಬಾಂಡ್ಯ ಎಜುಕೇಶನ್ ಟ್ರಸ್ಟ್ 

"ಶಾಲೆಯಲ್ಲಿ ತರಗತಿಯೊಳಗೆ ಓದುತ್ತೇವೆ. ಆದರೆ ಕೃಷಿ ಬಗ್ಗೆ ತಿಳಿಹೇಳುವ ಮೂಲಕ ನಮ್ಮಲ್ಲಿ ಕೃಷಿ ಆಸಕ್ತಿ ಮೂಡಿಸಲಾಗುತ್ತಿದೆ. ಇದೊಂದು ಖುಷಿಯ ಅನುಭವ".
- ವಿದ್ಯಾರ್ಥಿಗಳು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News