ಸಿಇಟಿ ಫಲಿತಾಂಶ: ಮಣಿಪಾಲದ ಅವಳಿ ಸಹೋದರರ ಅಪೂರ್ವ ಸಾಧನೆ

Update: 2022-07-30 12:55 GMT
ವೃಜೇಶ್ ವೀಣಾದರ್ ಶೆಟ್ಟಿ / ವೃಶಾನ್ ವೀಣಾಧರ್ ಶೆಟ್ಟಿ

ಉಡುಪಿ, ಜು.30: ರಾಜ್ಯದ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಳೆದ ತಿಂಗಳು ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯಲ್ಲಿ ಮಣಿಪಾಲದ ಅವಳಿ ಸಹೋದರರು ಅಪರೂಪದ ಅಪೂರ್ವ ಸಾಧನೆಯೊಂದನ್ನು ಮಾಡಿದ್ದಾರೆ. ಐದು ವಿಭಾಗಗಳಲ್ಲಿ ನಡೆದ ಸಿಇಟಿ ಪರೀಕ್ಷೆಯ ನಾಲ್ಕು ವಿಭಾಗಗಳಲ್ಲಿ ಈ ಸಹೋದರರಿಬ್ಬರು ಒಟ್ಟು 7 ರ್ಯಾಂಕ್ ಗಳನ್ನು ಪಡೆದಿದ್ದಾರೆ.

ಮಣಿಪಾಲದ ಮಾಧವಕೃಪಾ ಆಂಗ್ಲ ಮಾಧ್ಯಮ ಶಾಲೆಯ ಈ ಅವಳಿ ಸಹೋದರರಲ್ಲಿ ವೃಜೇಶ್ ವೀಣಾದರ್ ಶೆಟ್ಟಿ ನಾಲ್ಕು ವಿಭಾಗಗಳಲ್ಲಿ ರ್ಯಾಂಕ್ ಪಡೆದರೆ, ವೃಶಾನ್ ವೀಣಾಧರ್ ಶೆಟ್ಟಿ ಮೂರು ವಿಭಾಗಗಳಲ್ಲಿ ರ್ಯಾಂಕ್ ಪಡೆದಿದ್ದಾರೆ.

ನ್ಯಾಚುರೋಪಥಿ, ಯೋಗ ವಿಜ್ಞಾನ ಕೋರ್ಸ್‌ನಲ್ಲಿ ವೃಜೇಶ್ ಎರಡನೇ ರ್ಯಾಂಕ್ (ಶೇ.98.34) ಪಡೆದರೆ, ವೃಶಾನ್ ನಾಲ್ಕನೇ ರ್ಯಾಂಕ್ (ಶೇ.98) ಪಡೆದಿದ್ದಾರೆ. ಬಿಎಸ್ಸಿ (ಕೃಷಿ)ಯಲ್ಲಿ ವೃಜೇಶ್ 9ನೇ ರ್ಯಾಂಕ್ (ಶೇ.94.79) ಪಡೆದಿದ್ದಾರೆ. ವೆಟರನರಿ (ಪಶು ವೈದ್ಯ ವಿಜ್ಞಾನ) ವಿಭಾಗದಲ್ಲಿ ವೃಶಾನ್ 5ನೇ ರ್ಯಾಂಕ್ (ಶೇ.96.667) ಹಾಗೂ ವೃಜೇಶ್ 6ನೇ ರ್ಯಾಂಕ್ (ಶೇ.96.66) ಸಂಪಾದಿಸಿದ್ದಾರೆ. ಬಿ.ಫಾರ್ಮಾ (ಫಾರ್ಮಸಿ) ವಿಭಾಗದಲ್ಲಿ ವೃಜೇಶ್ 7ನೇ ರ್ಯಾಂಕ್ (ಶೇ.96.667) ಹಾಗೂ ವೃಶಾನ್ 8ನೇ ರ್ಯಾಂಕ್ (ಶೇ.96.66) ಪಡೆದಿದ್ದಾರೆ.

ಸಹೋದರರ ಗುರಿ ಏಮ್ಸ್: ರ್ಯಾಂಕ್‌ ಗಳಿಸಿದ ಅವಳಿ ಸಹೋದರರ ಗುರಿ ಇರುವುದು ವೈದ್ಯರಾಗುವತ್ತ. ಇದಕ್ಕಾಗಿ ಇಬ್ಬರೂ ನೀಟ್ ಪರೀಕ್ಷೆಯ ಫಲಿತಾಂಶವನ್ನು ಎದುರು ನೋಡುತ್ತಿದ್ದಾರೆ. ಅಖಿಲ ಭಾರತ ಮಟ್ಟದ ನೀಟ್ ಪರೀಕ್ಷೆಯಲ್ಲಿ ಟಾಪ್ ರ್ಯಾಂಕ್ ಪಡೆದು ಹೊಸದಿಲ್ಲಿಯ ಏಮ್ಸ್ (ಎಐಐಎಂಎಸ್)ನಲ್ಲಿ ವೈದ್ಯ ಪದವಿ ಪಡೆಯುವತ್ತ ಇಬ್ಬರ ಗುರಿ ನೆಟ್ಟಿದೆ. ಇಂಜಿನಿಯರಿಂಗ್ ತಮ್ಮ ಆಸಕ್ತಿಯ ವಿಷಯವೇ ಆಗಿರಲಿಲ್ಲ ಎಂದು ವೃಜೇಶ್ ‘ವಾರ್ತಾಭಾರತಿ’ಗೆ ತಿಳಿಸಿದರು.

ಒಂದು ವೇಳೆ ದಿಲ್ಲಿ ಏಮ್ಸ್‌ನಲ್ಲಿ ಸೀಟು ತಪ್ಪಿದರೆ, ಮಣಿಪಾಲ ಕೆಎಂಸಿಯಲ್ಲಿ ಎಂಬಿಬಿಎಸ್ ಓದುವುದಾಗಿ ವೃಜೇಶ್ ಹೇಳಿದರು. ಸದ್ಯಕ್ಕೆ ನಮ್ಮ ಗುರಿ ವೈದ್ಯರಾಗುವುದು. ವೈದ್ಯರಾಗಿ ಮುಂದೇನು ಎಂಬುದನ್ನು ಮುಂದೆ ನಿರ್ಧರಿಸುತ್ತೇವೆ ಎಂದವರು ಹೇಳಿದರು.

ದುಬೈಯಲ್ಲಿ ಆರಂಭಿಕ ವಿದ್ಯಾಭ್ಯಾಸ: ಮಣಿಪಾಲದಲ್ಲಿ ಫೈನಾನ್ಷಿಯಲ್ ಕನ್ಸಲ್ಟೆಂಟ್ ಆಗಿರುವ ವೀಣಾಧರ್ ಶೆಟ್ಟಿ ಹಾಗೂ ಗೃಹಿಣಿ ರೇಖಾ ಶೆಟ್ಟಿ ದಂಪತಿಗಳ ಪುತ್ರರಾಗಿರುವ ವೃಜೇಶ್ ಹಾಗೂ ವೃಶಾನ್ ತಮ್ಮ ಆರಂಭಿಕ ವಿದ್ಯಾಭ್ಯಾಸವನ್ನು ಪಡೆದುದು ದುಬಾಯಿಯಲ್ಲಿ. 1ರಿಂದ 7ರವರೆಗೆ ದುಬೈಯಲ್ಲಿ ಕಲಿತ ಬಳಿಕ, ಮಣಿಪಾಲದ ಮಾಧವಕೃಪಾದಲ್ಲಿ ಅವರು ಎಂಟರಿಂದ 12ನೇ ತರಗತಿಯವರೆಗಿನ ವಿದ್ಯಾಭ್ಯಾಸ ನಡೆಸಿದ್ದಾರೆ. ಇದೀಗ ಅವರ ತಂಗಿ ಮಾಧವಕೃಪಾದಲ್ಲಿ ಮೂರನೇ ತರಗತಿಯಲ್ಲಿ ಓದುತಿದ್ದಾರೆ.

ನೀಟ್ ಮತ್ತು ಸಿಇಟಿಗಾಗಿ ತಾವು ಉಡುಪಿಯ ಬೇಸ್‌ನಲ್ಲಿ ಕೋಚಿಂಗ್ ಪಡೆದಿರುವುದಾಗಿ ವೃಜೇಶ್ ತಿಳಿಸಿದರು. ಅಭ್ಯಾಸಕ್ಕಾಗಿ ಸಿಇಟಿ ಬರೆದಿದ್ದ ತಮಗೆ ಉತ್ತಮ ಮಾರ್ಕ್ ಬರುವ ನಿರೀಕ್ಷೆ ಇತ್ತು ಎಂದ ಅವರು ಫಲಿತಾಂಶದಿಂದ ಹೆತ್ತವರಿಗೂ, ತಮಗೂ ತುಂಬಾ ಖುಷಿಯಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News