ಸಾಮಾಜಿಕ ತಾಣಗಳಲ್ಲಿ ಸುಳ್ಳುಸುದ್ದಿ ಹರಡಿದ ಆರೋಪ: ಮಂಗಳೂರು ಸೆನ್ ಪೊಲೀಸರಿಂದ 5 ಪ್ರಕರಣಗಳು ದಾಖಲು

Update: 2022-07-31 08:17 GMT

ಮಂಗಳೂರು, ಜು.31: ಸುರತ್ಕಲ್ ನಲ್ಲಿ ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್ ಮತ್ತು ಕಾಮೆಂಟ್‌ಗಳನ್ನು ಮಾಡಿರುವ ವ್ಯಕ್ತಿಗಳ ವಿರುದ್ಧ ಮಂಗಳೂರು ಸೆನ್ ಪೊಲೀಸರು 5 ಪ್ರಕರಣಗಳನ್ನು ದಾಖಲಿಸಿದ್ದಾರೆ.

ಕರಾವಳಿಯಲ್ಲಿ ದೊಡ್ಡಮಟ್ಟದ ಕೋಮು ಸಂಘರ್ಷ ಸ್ಫೋಟಗೊಳ್ಳುವ ಸಾಧ್ಯತೆ ಇದೆ ಎಂಬುದಾಗಿ ರಾಜ್ಯ ಗುಪ್ತಚರ ದಳದ ಮಾಹಿತಿ ಎಂಬ ಸುಳ್ಳು ಸಂದೇಶ, ಪ್ರವೀಣ್‌  ಕೊಲೆಗೆ ಪ್ರತೀಕಾರವಾಗಿ ಕೊಲೆ ಮಾಡಲು ಕರೆ ನೀಡಿರುವ ಪೋಸ್ಟ್, ಸುರತ್ಕಲ್‌ನಲ್ಲಿ ನಡೆದಿರುವ ಫಾಝಿಲ್ ಕೊಲೆಗೆ ಪ್ರತೀಕಾರವಾಗಿ ಕೊಲೆ ಮಾಡುವುದಾಗಿ ಫೇಸ್‌ಬುಕ್ ಗ್ರೂಪ್‌ಗಳಲ್ಲಿ ಪೋಸ್ಟ್ ಹಾಕಿ ಚರ್ಚೆ ನಡೆಸಿದ್ದು, ಮಂಗಳೂರಿನಲ್ಲಿ ನಡೆದ ಒಂದು ಕೊಲೆಗೆ ಪ್ರತೀಕಾರವಾಗಿ 10 ಕೊಲೆ ಮಾಡುವುದಾಗಿ ಪೋಸ್ಟ್ ಹಾಕಿದ್ದು, ನಿರ್ದಿಷ್ಟ ಜಾತಿ ಮತ್ತು ಸಮುದಾಯವನ್ನು ಗುರಿಯಾಗಿಸಿಕೊಂಡು ಹತ್ಯೆಗೆ ಕರೆ ನೀಡುವ ಮೆಸೇಜ್ ಸಹಿತ ಫೇಸ್‌ಬುಕ್ ಪೋಸ್ಟ್/ ವಾಟ್ಸಪ್ ಗ್ರೂಪ್ ಚರ್ಚೆ ಮತ್ತು ಕಾಮೆಂಟ್ಸ್ ಅನ್ ದಿ ನ್ಯೂಸ್ ಕಾಲಂ, ಪ್ರಿಂಟ್ ಇಲೆಕ್ಟ್ರಾನಿಕ್ಸ್, ಯೂಟ್ಯೂಬ್, ಡಿಜಿಟಲ್‌ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

ದಾಖಲಾದ ಐದು ಪ್ರಕರಣಗಳ ಬಗ್ಗೆ ತನಿಖೆ ನಡೆಯುತ್ತಿದೆ. ಇನ್ನೂ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹರಿಯಬಿಡುತ್ತಿದ್ದು, ಅವುಗಳ ಮೇಲೂ ನಿಗಾ ವಹಿಸಲಾಗಿದೆ. ಆಕ್ಷೇಪಾರ್ಹ ಪೋಸ್ಟ್ ಹಾಕುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸೆನ್ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News