ವಕ್ವಾಡಿ ಗುರುಕುಲ ಶಾಲೆಯಲ್ಲಿ ಆಷಾಢದಲ್ಲೊಂದು ವಿಶಿಷ್ಟ ಕಾರ್ಯಕ್ರಮ

Update: 2022-07-31 12:53 GMT

ಕುಂದಾಪುರ, ಜು. 31: ಬಾಂಡ್ಯಾ ಎಜುಕೇಶನ್ ಟ್ರಸ್ಟ್ ಹಾಗೂ ವಕ್ವಾಡಿ ಗುರುಕುಲ ವಿದ್ಯಾಸಂಸ್ಥೆ ವತಿಯಿಂದ ಆಷಾಢ ಮಳೆಗಾಲದಲ್ಲಿ ಸಾಂಪ್ರಾದಾಯಿಕ ಔಷಧೀಯ ಸಸ್ಯಗಳಿಂದ ತಯಾರಿಸಿದ ವಿವಿಧ ಬಗೆಯ ಖಾದ್ಯಗಳ ಪರಿಚಯಿ ಸುವ ವಿಭಿನ್ನ ಮತ್ತು ವೈಶಿಷ್ಟ್ಯಪೂರ್ಣ ‘ಸಸ್ಯಾಮೃತ’ ಕಾರ್ಯಕ್ರಮವನ್ನು ರವಿವಾರ ಹಮ್ಮಿಕೊಳ್ಳಲಾಗಿತ್ತು.

ಕರಾವಳಿಯಲ್ಲಿ ಮಳೆಗಾಲದ ಊಟೋಪಚಾರಕ್ಕೆ ಅದರದ್ದೇ ಆದ ಮಹತ್ವ ಇದೆ. ಆಧುನಿಕ ಶೈಲಿ ಆಹಾರ ಕ್ರಮದಿಂದ ಆರೋಗ್ಯದಲ್ಲಿ ಏರುಪೇರು ಸಾಮಾನ್ಯ ಸಂಗತಿಯಾಗಿದ್ದು, ಜನರಲ್ಲಿ ಆಹಾರ ಕ್ರಮದ ಬಗ್ಗೆ ಅರಿವು ಹಾಗೂ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಸಂಸ್ಥೆಯು ಕಳೆದ ಎಂಟು ವರ್ಷ ಗಳಿಂದ ಸಸ್ಯಾಮೃತ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ.

ವಿವಿಧ ಬಗೆಯ ಖಾದ್ಯಗಳು

ಸಸ್ಯಾಮೃತಕ್ಕೆ ಬಂದವರಿಗೆ ಮೊದಲಿಗೆ ಶುಂಠಿ ಕಾಳುಮೆಣಸಿನ ಪಾನಕ ನೀಡಿ ಸ್ವಾಗತಿಸಲಾಯಿತು. ಮಧ್ಯಾಹ್ನದ ಊಟಕ್ಕೆ ಮೆನುವಿನಲ್ಲಿ ಮಾಪಳ ಉಪ್ಪಿನ ಕಾಯಿ, ಬಾಳೆ ದಿಂಡಿನ ಕೋಸಂಬರಿ, ಸಾಂಬರ್ ಬಳ್ಳಿ ಚಟ್ನಿ, ಕೆಸುವಿನ ಚಟ್ನಿ, ವಾತಂಗಿ ಸೊಪ್ಪಿನ ಚಟ್ನಿ, ಕಣಿಲೆ ಪಲ್ಯ, ಪಾಂಡವ ಹರಿವೆ ಪಲ್ಯ, ಗಜಗಂಡೆ ಸೊಪ್ಪಿನ ಪಲ್ಯ, ಪತ್ರೋಡೆ ಪಲ್ಯ, ಪತ್ರೋಡೆ ಗಾಲಿ, ಹುಳಿಕೋಲ್ ಇಡ್ಲಿ, ಕ್ಯಾನಿಗೆಂಡೆ ಕಡುಬು, ಮೆಂತೆ ಸೊಪ್ಪಿನ ಚಿತ್ರಾನ್ನ, ಅನ್ನ, ಕನ್ನೆಕುಡಿ ತಂಬುಳಿ, ನೆಲ ಉರಗ ತಂಬುಳಿ, ಬಿಲ್ವಪತ್ರೆ ತಂಬುಳಿ, ಗೋವೆ ಕೆಸುವಿನ ಗೆಡ್ಡೆ ಸಾಸಿವೆ, ಹುರುಳಿ ಸಾರು, ಬಸಳೆ ಸಾಂಬರ್, ಕಬ್ಬಿನ ಪಳದ್ಯ, ಗೆಣಸಲೆ, ಮಾವಿನ ಹಣ್ಣಿನ ಬರ್ಫಿ, ತೊಡೆದೇವು, ನುಗ್ಗೆ ಸೊಪ್ಪಿನ ಬೋಂಡಾ, ಬಾಳೆ ಕುಂಡಿಗೆ ಬಜೆ, ಬಾಳೆ ಹಣ್ಣಿನ ಸಾಸಿವೆ, ಹಲಸಿನ ಹಣ್ಣಿನ ಪಾಯಸ, ಹಲಸಿನ ಬೀಜದ ಹೋಳಿಗೆ, ಮಜ್ಜಿಗೆ ಸೇರಿದಂತೆ ಒಟ್ಟು 32 ಬಗೆಯ ವಿವಿಧ ಔಷಧೀಯ ಹಾಗೂ ಸಾಂಪ್ರದಾಯಿಕ ಸಸ್ಯಗಳ ಖಾದ್ಯಗಳನ್ನು ಸವಿಯಲಾಯಿತು.

ದೇಸಿ ಮಾದರಿ ಅಡುಗೆ

ವಿಶೇಷವೆಂದರೆ ಗುರುಕುಲ ಸಂಸ್ಥೆಯ ಸುತ್ತಮುತ್ತಲಿನ ಸ್ಥಳದಲ್ಲಿ ಪೋಷಿಸಿ ಕೊಂಡು ಬರುತ್ತಿರುವ 400ಕ್ಕೂ ಅಧಿಕ ಸಸ್ಯ ಪ್ರಬೇಧಗಳನ್ನು ಹಾಗೂ ಉತ್ತರ ಕನ್ನಡ ಸಹಿತ ಹಳ್ಳಿ, ಕಾಡುಗಳಿಂದ ಹುಡುಕಿ ತಂದ ಸಸ್ಯಗಳನ್ನು ಮಾತ್ರವೇ ಉಪಯೋಗಿಸಿಕೊಂಡು ಈ ಆಹಾರ ಸಿದ್ಧಪಡಿಸಲಾಯಿತು.

ಅಡುಗೆಯಲ್ಲಿ ಮಾರುಕಟ್ಟೆಯ ಯಾವುದೇ ಸಾಂಬಾರು ಉತ್ಪನ್ನ ಬಳಸಿಲ್ಲ ಎನ್ನುವುದು ಮತ್ತೊಂದು ವಿಶೇಷ. ಬಾಣಸಿಗರಾದ ಬಸ್ರೂರು ಮೂಲದ ಮಹಾಬಲ ಹರಿಕಾರ ಮತ್ತು ಸಂಗಡಿಗರು ಖಾದ್ಯ ತಯಾರು ಮಾಡಿದ್ದರು. ಅಡುಗೆ ತಯಾರಿ ಸಹಿತ ಬಡಿಸುವಿಕೆಯಲ್ಲಿ ಸುಮಾರು 30 ಮಂದಿ ತಂಡ ಕಾರ್ಯನಿರ್ವಹಿಸಿದ್ದು 250 ಮಂದಿ ಮಧ್ಯಾಹ್ನದ ಊಟದ ಸವಿಯುಂಡರು.

ಬಾಂಡ್ಯಾ ಎಜುಕೇಶನಲ್ ಟ್ರಸ್ಟ್ ಜಂಟಿ ಕಾರ್ಯನಿರ್ವಾಹಕರಾದ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ, ಅನುಪಮಾ ಶೆಟ್ಟಿ ಆಮಂತ್ರಿತರನ್ನು ಸತ್ಕರಿಸಿದರು.

"ಕಳೆದ 8 ವರ್ಷಗಳಿಂದ ನಮ್ಮ ಶಾಲೆಯಲ್ಲಿ ಸಸ್ಯಾಮೃತ ಕಾರ್ಯಕ್ರಮದ ಮೂಲಕ ಸಸ್ಯಗಳ ಪರಿಚಯ ಅವುಗಳ ಬಳಕೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತದೆ. ಆರೋಗ್ಯ ಪೂರ್ಣ ಸ್ವಸ್ಥ ಸಮಾಜಕ್ಕೆ ರೋಗಮುಕ್ತ ಜೀವನ ಅವಶ್ಯ. ಜೀವನ ಶೈಲಿ ಬದಲಾವಣೆಯಿಂದ ಇತ್ತೀಚೆಗೆ ಜನರು ರೋಗಗಳಿಗೆ ತುತ್ತಾಗುತ್ತಿದ್ದು  ಸಸ್ಯಗಳು ಅಮೃತ ಸಮಾನ, ಅವುಗಳ ಅಡಿಗೆಯಲ್ಲಿ ಬಳಸುವ ಮೂಲಕ ಆರೋಗ್ಯಕರ ಜೀವನ ಸಾಧ್ಯ ಎನ್ನುವುದನ್ನು ತಿಳಸಲಾಗುತ್ತಿದೆ. ನಮ್ಮ ಸಂಸ್ಥೆಯ ಆವರಣದಲ್ಲಿಯೇ 400 ಔಷಧೀಯ ಸಸ್ಯ ಪ್ರಬೇಧಗಳಿವೆ.
-ಅನುಪಮಾ ಶೆಟ್ಟಿ, ಜಂಟಿ ಕಾರ್ಯಾನಿರ್ವಾಹಕಿ, ಬಾಂಡ್ಯಾ ಎಜುಕೇಶನಲ್ ಟ್ರಸ್ಟ್

"ದೇಸಿ ಆಹಾರದ ಬಳಕೆಯ ಮಾಹಿತಿ ಜೊತೆಗೆ ಅದರ ಸವಿ ಉಣಬಡಿಸುವ ಕಾರ್ಯಕ್ರಮದಲ್ಲಿ ಪ್ರತಿವರ್ಷ ಭಾಗವಹಿಸುತ್ತಿರುವೆ. ಕೊರೋನ ಕಾಲಘಟ್ಟದ ಬಳಿಕ ದೇಸಿ ಆಹಾರದ ಬಗ್ಗೆ ಜನರಲ್ಲಿ ಹೆಚ್ಚಿನ ಆಸಕ್ತಿ ಬಂದಿದೆ. ಉತ್ತಮ ಆಹಾರದ ವ್ಯವಸ್ಥೆ ಜೊತೆಗೆ ಇಬ್ಬರು ಸಂಪನ್ಮೂಲ ವ್ಯಕ್ತಿಗಳಿಂದ ಉಪಯುಕ್ತ ಮಾಹಿತಿ ನೀಡಲಾಗಿದೆ".
- ಟಿ.ಬಿ.ಶೆಟ್ಟಿ, ವಕೀಲರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News