ಭಾರೀ ಮಳೆಯಿಂದ ಉತ್ತರ ಕನ್ನಡದಲ್ಲಿ ಸಂಚಾರದಲ್ಲಿ ವ್ಯತ್ಯಯ; ಮತ್ತೆ ಯಥಾಸ್ಥಿತಿಗೆ ಬಂದ ಕೊಂಕಣ ರೈಲುಗಳ ಸಂಚಾರ

Update: 2022-08-02 14:41 GMT

ಉಡುಪಿ, ಆ. 2: ಕೊಂಕಣ ರೈಲು ಮಾರ್ಗದ ಕಾರವಾರ ವಿಭಾಗದಲ್ಲಿ ನಿನ್ನೆ ರಾತ್ರಿಯ ಬಳಿಕ ಮೇಘಸ್ಪೋಟ ಸಂಭವಿಸಿ, ಕೇವಲ ಐದು ಗಂಟೆಗಳ ಅವಧಿ ಯಲ್ಲಿ 403 ಮಿ.ಮೀ. ಮಳೆ ಸುರಿದ ಹಿನ್ನೆಲೆಯಲ್ಲಿ ಉತ್ತರ ಕನ್ನಡದ ಮುರ್ಡೇಶ್ವರ ಹಾಗೂ ಭಟ್ಕಳ ನಡುವೆ ರೈಲ್ವೆ ಹಳಿಗೆ ನೀರು ನುಗ್ಗಿ, ಅಲ್ಪಪ್ರಮಾಣದ ಭೂಜರಿತ ಹಾಗೂ ಹಾನಿ ಸಂಭವಿಸಿದ ಕಾರಣ ಇಂದು ಅಪರಾಹ್ನ ಮೂರು ಗಂಟೆಯವರೆಗೆ ಕೊಂಕಣ ರೈಲು ಮಾರ್ಗದಲ್ಲಿ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.

ಇದರಿಂದಾಗಿ ಭಟ್ಕಳ-ಮುರ್ಡೇಶ್ವರ ಮಧ್ಯೆ ರೈಲು ಹಳಿಗಳ ಮೇಲೆ ನೀರು ನಿಂತಿದ್ದು, ಹಳಿಯ ಪಕ್ಕದ ಮಣ್ಣು ನೀರಿನಲ್ಲಿ ಕೊಚ್ಚಿಕೊಂಡು ಹೋದವು. ಹೀಗಾಗಿ ತಾತ್ಕಾಲಿಕವಾಗಿ ಮಾರ್ಗದ ಎಲ್ಲಾ ರೈಲುಗಳ ಸಂಚಾರವನ್ನು ತಡೆ ಹಿಡಿಯಲಾಯಿತು. ಅಲ್ಲದೇ ರೈಲು ಹಳಿಯನ್ನು ಸಂಚಾರಕ್ಕೆ ಮುಕ್ತಗೊಳಿಸುವ ಕಾರ್ಯವನ್ನು ಸಮರೋಪಾದಿಯಲ್ಲಿ ಕೈಗೊಂಡು ಅಪರಾಹ್ನ 3 ಗಂಟೆಯ ಸುಮಾರಿಗೆ ರೈಲು ಸಂಚಾರ ಪುನರಾರಂಭ ಗೊಳ್ಳುವಂತಾಯಿತು ಎಂದು  ಕೊಂಕಣ ರೈಲ್ವೆಯ ಪ್ರಕಟಣೆ ತಿಳಿಸಿದೆ.  

ಇದರ ನಡುವೆ ಈ ಮಾರ್ಗದಲ್ಲಿ ಸಂಚರಿಸಬೇಕಾಗಿದ್ದ ರೈಲು ನಂ.೦೬೬೦೧ ಮಡಗಾಂವ್ ಜಂಕ್ಷನ್-ಮಂಗಳೂರು ಸೆಂಟ್ರಲ್ ವಿಶೇಷ ರೈಲಿನ ಸಂಚಾರವನ್ನು ರದ್ದುಪಡಿಸಲಾಯಿತು. ಹಾಗೂ ರೈಲು ನಂ.೦೬೬೦೨ ಮಂಗಳೂರು ಸೆಂಟ್ರಲ್- ಮಡಗಾಂವ್ ಜಂಕ್ಷನ್ ರೈಲನ್ನು ಉಡುಪಿಯಲ್ಲೇ ತಡೆ ಹಿಡಿಯಲಾಯಿತು.

ಅಲ್ಲದೇ ಆ.೧ರಂದು ಸಂಚಾರ ಪ್ರಾರಂಭಿಸಿದ್ದ ಎರ್ನಾಕುಲಂ ಜಂಕ್ಷನ್- ಪುಣೆ ಎಕ್ಸ್‌ಪ್ರೆಸ್ ರೈಲನ್ನು ಭಟ್ಕಳದಲ್ಲಿ, ಕೆಎಸ್‌ಆರ್ ಬೆಂಗಳೂರು- ಕಾರವಾರ ಎಕ್ಸ್‌ಪ್ರೆಸ್ ರೈಲನ್ನು ಶಿರೂರು ನಿಲ್ದಾಣದಲ್ಲಿ, ತಿರುವನಂತಪುರಂ ಸೆಂಟ್ರಲ್- ವಿರಾವಲ್ ಎಕ್ಸ್‌ಪ್ರೆಸ್ ರೈಲನ್ನು ಸೇನಾಪುರ ನಿಲ್ದಾಣದಲ್ಲಿ, ಲೋಕಮಾನ್ಯ ತಿಲಕ್ ಮುಂಬಯಿ- ಕೊಚ್ಚುವೇಲ್ ಎಕ್ಸ್‌ಪ್ರೆಸ್ ರೈಲನ್ನು ಅಂಕೋಲ ನಿಲ್ದಾಣಗಳಲ್ಲಿ ನಿಲ್ಲಿಸಲಾಯಿತು.

ಆ.2ರಂದು ಪ್ರಯಾಣ ಪ್ರಾರಂಭಿಸಿದ ರೈಲು ನಂ.೧೬೫೧೬ ಕಾರವಾರ- ಯಶವಂತಪುರ ರೈಲನ್ನು ಹೊನ್ನಾವರ ನಿಲ್ದಾಣದಲ್ಲಿ ತಾತ್ಕಾಲಿಕವಾಗಿ ನಿಲ್ಲಿಸಿದರೆ, ಗಾಂಧಿಧಾಮ- ತಿರುನಲ್ವೇಲಿ ರೈಲಿನ ಪ್ರಯಾಣವನ್ನು ಕುಮಟಾ ರೈಲು ನಿಲ್ದಾಣದಲ್ಲಿ ತಡೆ ಹಿಡಿಯಲಾಯಿತು.

ಹಳಿಗಳ ರಿಪೇರಿ ಬಳಿಕ ತಡೆ ಹಿಡಿಯಲಾದ ಎಲ್ಲಾ ರೈಲುಗಳು ಪ್ರಯಾಣ ಮುಂದುವರಿಸಿವೆ. ಮೊದಲನೇಯದಾಗಿ ಭಟ್ಕಳ ನಿಲ್ದಾಣದಲ್ಲಿ ನಿಂತಿದ್ದ  ಎರ್ನಾಕುಲಂ ಜಂಕ್ಷನ್- ಪುಣೆ ಎಕ್ಸ್‌ಪ್ರೆಸ್ ರೈಲು ಅಪರಾಹ್ನ ೩:೧೩ಕ್ಕೆ ತನ್ನ ಪ್ರಯಾಣ ಪುನರಾರಂಭಿಸಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News