ಕಾಮನ್‌ವೆಲ್ತ್ ಗೇಮ್ಸ್: ಭಾರತದ ಟೇಬಲ್ ಟೆನಿಸ್ ತಂಡಕ್ಕೆ ಚಿನ್ನ, ವೇಟ್‌ಲಿಫ್ಟರ್ ವಿಕಾಸ್ ಥಾಕೂರ್‌ಗೆ ಬೆಳ್ಳಿ
Update: 2022-08-02 15:40 GMT
ಬರ್ಮಿಂಗ್‌ಹ್ಯಾಮ್, ಆ.2: ಶರತ್ ಕಮಲ್ ನೇತೃತ್ವದ ಭಾರತದ ಟೇಬಲ್ ಟೆನಿಸ್ ತಂಡ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದೆ. ಇದರೊಂದಿಗೆ ಗೇಮ್ಸ್‌ನಲ್ಲಿ ಭಾರತಕ್ಕೆ ಐದನೇ ಬಂಗಾರದ ಪದಕ ಗೆದ್ದುಕೊಟ್ಟಿದೆ.
ಭಾರತದ ಟೇಬಲ್ ಟೆನಿಸ್ ತಂಡ ಮಂಗಳವಾರ ನಡೆದ ಫೈನಲ್ ಪಂದ್ಯದಲ್ಲಿ ಸಿಂಗಾಪುರ ತಂಡವನ್ನು 3-1 ಅಂತರದಿಂದ ಸೋಲಿಸಿ ಈ ಸಾಧನೆ ಮಾಡಿದೆ. ಹರ್ಮೀತ್ ದೇಸಾಯಿ ನೇರ ಗೇಮ್‌ಗಳ ಅಂತರದಿಂದ ಜಯ ಸಾಧಿಸಿ ಭಾರತಕ್ಕೆ ಗೆಲುವು ತಂದರು. ಸತ್ಯನ್ ಹಾಗೂ ಶರತ್ ಕಮಲ್ ಕೂಡ ಭಾರತದ ಗೆಲುವಿಗೆ ಕಾಣಿಕೆ ನೀಡಿದರು.
ಇದೇ ವೇಳೆ ಭಾರತದ ವೇಟ್‌ಲಿಫ್ಟರ್ ವಿಕಾಸ್ ಥಾಕೂರ್ ಪುರುಷರ 96 ಕೆಜಿ ವಿಭಾಗದ ಫೈನಲ್‌ನಲ್ಲಿ ಒಟ್ಟು 346 ಕೆಜಿ ತೂಕ ಎತ್ತಿ ಹಿಡಿಯುವ ಮೂಲಕ ಬೆಳ್ಳಿ ಪದಕ ಜಯಿಸಿದರು. ವಿಕಾಸ್ ಸ್ನಾಚ್‌ನಲ್ಲಿ 155 ಕೆಜಿ ಹಾಗೂ ಕ್ಲೀನ್ ಆ್ಯಂಡ್ ಜರ್ಕ್‌ನಲ್ಲಿ 191 ಕೆಜಿ ಎತ್ತಿ ಹಿಡಿದರು.