ವಿಶ್ವಸಂಸ್ಥೆಯಲ್ಲಿ ಭಾರತದ ಮೊದಲ ಮಹಿಳಾ ರಾಯಭಾರಿ ರುಚಿರಾ ಕಾಂಭೋಜ್

Update: 2022-08-04 05:09 GMT

ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ರಾಯಭಾರಿಯಾಗಿ ಆಯ್ಕೆಯಾಗಿರುವ ಐಎಫ್‌ಎಸ್ ಅಧಿಕಾರಿ ರುಚಿರಾ ಕಾಂಭೋಜ್ ಅವರು ಆ ಹುದ್ದೆಗೆ ಆಯ್ಕೆಯಾಗಿರುವ ಮೊದಲ ಭಾರತೀಯ ಮಹಿಳೆ ಎನಿಸಿದ್ದಾರೆ. ಅವರು ಆಗಸ್ಟ್ 2ರಂದು ವಿಶ್ವಸಂಸ್ಥೆಯ ನ್ಯೂಯಾರ್ಕ್ ಕೇಂದ್ರ ಕಚೇರಿಯಲ್ಲಿ ಮಹಾ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರಿಗೆ ತನ್ನ ಪರಿಚಯಪತ್ರ ಸಲ್ಲಿಸಿದರು. ಅವರು ಕೆಲವರ್ಷಗಳಿಂದ ಈ ಹುದ್ದೆಯಲ್ಲಿದ್ದ ಟಿ.ಎಸ್. ತಿರುಮೂರ್ತಿ ಅವರ ಸ್ಥಾನಕ್ಕೆ ಬಂದಿದ್ದಾರೆ.

ಉಕ್ರೇನ್ ಬಿಕ್ಕಟ್ಟಿನಲ್ಲಿ ಭಾರತವು ರಶ್ಯ ಮತ್ತು ಯುಎಸ್‌ಎ ನೇತೃತ್ವದ, ಮುಖ್ಯವಾಗಿ ನೇಟೊ ಕೂಟದ ಐರೋಪ್ಯ ದೇಶಗಳ ನಡುವೆ ರಾಜತಾಂತ್ರಿಕ ಅಡಕತ್ತಿಯಲ್ಲಿ ಸಿಲುಕಿರುವ ಹಿನ್ನೆಲೆಯಲ್ಲಿ- ಭಾರತದ ಹಿತಾಸಕ್ತಿಗಳನ್ನು ಸಮರ್ಥವಾಗಿ ಕಾಪಾಡಬೇಕಾಗಿರುವ ಹೊತ್ತಿನಲ್ಲಿ- ರುಚಿರಾ ಕಾಂಭೋಜ್ ಅವರು ವಹಿಸಿಕೊಂಡಿರುವ ಈ ಹುದ್ದೆ ಅತ್ಯಂತ ಮಹತ್ವದ್ದಾಗಿದೆ. ಅವರು ಅಧಿಕಾರವಹಿಸಿಕೊಂಡ ಬೆನ್ನಲ್ಲೇ ಒಂದು ಭಾರೀ ಬಿಕ್ಕಟ್ಟು ಭುಗಿಲೆದ್ದಿದೆ. ಯುಎಸ್‌ಎಯ ಕಾಂಗ್ರೆಸ್‌ನ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರ ತೈವಾನ್ ಭೇಟಿಯ ಹಿನ್ನೆಲೆಯಲ್ಲಿ- ಅಲ್ಲಿನ ಆಯಕಟ್ಟಿನ ಜಾಗಗಳ ಮೇಲೆ ಮಿಲಿಟರಿ ದಾಳಿ ನಡೆಸುವುದಾಗಿ ಚೀನಾ ಬೆದರಿಸಿದೆ. ಭಾರತವು ಚೀನಾವನ್ನು ಗುರಿಮಾಡಿಕೊಂಡಿರುವ ಯುಎಸ್‌ಎ, ಜಪಾನ್, ಆಸ್ಟ್ರೇಲಿಯಾ ಒಳಗೊಂಡಿರುವ, ಚರ್ಚಿತ ಕ್ವಾಡ್ (QUAD) ರಕ್ಷಣಾ ಒಪ್ಪಂದದ ಭಾಗವಾಗಿರುವುದರಿಂದ- ಈ ಬಿಕ್ಕಟ್ಟು ಉಲ್ಬಣಗೊಂಡರೆ, ಭಾರತವನ್ನು ಮತ್ತೊಮ್ಮೆ ಇಕ್ಕಟ್ಟಿಗೆ ಸಿಲುಕಿಸುವುದು ಖಂಡಿತ. ಇದರಿಂದಾಗಿ, ವಿಶ್ವಸಂಸ್ಥೆಯಲ್ಲಿ ಕಾಂಭೋಜ್ ಅವರ ಜವಾಬ್ದಾರಿ ಹಲವು ಪಟ್ಟು ಹೆಚ್ಚಾಗಲಿದೆ. ಆದರೆ, ಕಾಂಭೋಜ್ ಅವರಿಗೆ ವಿಶ್ವಸಂಸ್ಥೆಯೇನೂ ಹೊಸದಲ್ಲ. ಅವರು ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ನಿಯೋಗಕ್ಕೆ 2002ರಿಂದ 2005ರ ತನಕ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಸದಸ್ಯತ್ವ ಡಿಸೆಂಬರಿನಲ್ಲಿ ಕೊನೆಗೊಳ್ಳಲಿದ್ದು, ಆ ಒಂದು ತಿಂಗಳು ಭಾರತವು ಅಧ್ಯಕ್ಷ ದೇಶವಾಗಲಿದೆ ಎಂಬುದೂ ಗಮನಾರ್ಹ.

ಈ ನೇಮಕಾತಿಯು ಸಾಂಕೇತಿಕವಾಗಿಯಾದರೂ ಭಾರತೀಯ ಮಹಿಳೆಯರ ಮುನ್ನಡೆಗೆ ಒಂದು ಪ್ರೇರಣೆಯಾಗಿದೆ. ಅಧಿಕಾರ ವಹಿಸಿಕೊಂಡ ತಕ್ಷಣ ಅವರು ಮಾಡಿರುವ ಟ್ವೀಟ್‌ನಂತೆ ''ಈ ಹುದ್ದೆಗೇರುವ ಗೌರವವನ್ನು ನೀಡಲಾದ ಮೊದಲ ಭಾರತೀಯ ಮಹಿಳೆ ನಾನು ಎಂಬುದು ಹೆಮ್ಮೆ. ಅಲ್ಲಿ, ಹೊರಗಿರುವ ಹುಡುಗಿಯರೇ, ನಾವೆಲ್ಲರೂ ಇದನ್ನು ಸಾಧಿಸಬಹುದು.''

ಉತ್ತರ ಪ್ರದೇಶದ ಲಕ್ನೊದಲ್ಲಿ ಮೇ 3, 1964ರಲ್ಲಿ ಹುಟ್ಟಿದ 58 ವರ್ಷ ಪ್ರಾಯದ ರುಚಿರಾ ಕಾಂಭೋಜ್ ಅವರ ದಿವಂಗತ ತಂದೆ ಭೂ ಸೇನಾ ಅಧಿಕಾರಿಯಾಗಿದ್ದರು. ತಾಯಿ ದಿಲ್ಲಿ ವಿಶ್ವವಿದ್ಯಾನಿಲಯದಲ್ಲಿ ಸಂಸ್ಕೃತ ಪ್ರೊಫೆಸರ್ ಆಗಿದ್ದರು. ಪತಿ ಉದ್ಯಮಿ ದಿವಾಕರ ಕಾಂಭೋಜ್ ಮತ್ತು ಒಬ್ಬಳೇ ಮಗಳು ಸಾರಾ ಕಾಂಭೋಜ್. ರಾಜಕೀಯ ಶಾಸ್ತ್ರದಲ್ಲಿ ಎಂಎ ಪದವೀಧರೆಯಾದ ಕಾಂಭೋಜ್, ಹಿಂದಿ, ಇಂಗ್ಲಿಷ್ ಮತ್ತು ಫ್ರೆಂಚ್ ಭಾಷೆಯಲ್ಲಿ ಪರಿಣತಿ ಹೊಂದಿದ್ದಾರೆ. ಆವರ ಹಲವಾರು ತಜ್ಞ ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

1987ರ ಬ್ಯಾಚಿನ ಇಂಡಿಯನ್ ಫಾರಿನ್ ಸರ್ವಿಸ್ (ಐಎಫ್‌ಎಸ್) ಅಧಿಕಾರಿಯಾಗಿರುವ ಕಾಂಭೋಜ್, ಆ ವರ್ಷದ ಮಹಿಳೆಯರಲ್ಲಿ ಮೊದಲ ಸ್ಥಾನ ಗಳಿಸಿದ್ದರು. ಈ ಹುದ್ದೆ ವಹಿಸಿಕೊಳ್ಳುವ ಮೊದಲು ಭೂತಾನ್‌ನಲ್ಲಿ ಭಾರತದ ರಾಯಭಾರಿಯಾಗಿದ್ದರು. 1989-91ರಲ್ಲಿ ಅವರು ಫ್ರಾನ್ಸ್‌ನ ರಾಯಭಾರ ಕಚೇರಿಯಲ್ಲಿ ತೃತೀಯ ಕಾರ್ಯದರ್ಶಿಯಾಗಿ ತಮ್ಮ ಸೇವೆ ಆರಂಭಿಸಿದರು. ಅಲ್ಲಿಂದ ಭಾರತಕ್ಕೆ ಮರಳಿದ ಅವರು, 1991ರಿಂದ 1996ರ ತನಕ ವಿದೇಶಾಂಗ ಸಚಿವಾಲಯದ ಪಶ್ಚಿಮ ಯುರೋಪ್ ವಿಭಾಗದಲ್ಲಿ ಅಧೀನ ಕಾರ್ಯದರ್ಶಿಯಾಗಿದ್ದರು. 1996ರಿಂದ1999ರ ತನಕ ಅವರು ಮಾರಿಷಸ್‌ನ ಭಾರತೀಯ ದೂತಾವಾಸದಲ್ಲಿ ಆರ್ಥಿಕ ಮತ್ತು ವಾಣಿಜ್ಯ ವಿಭಾಗದ ಪ್ರಥಮ ಕಾರ್ಯದರ್ಶಿಯೂ, ಫೋರ್ಟ್ ಲೂಯಿಸ್‌ನ ಭಾರತೀಯ ಹೈಕಮಿಷನ್‌ನಲ್ಲಿ ಖಜಾಂಚಿಯೂ ಆಗಿದ್ದರು.

ಜುಲೈ 2017ರಿಂದ 2019ರ ತನಕ ಅವರು ದಕ್ಷಿಣ ಆಫ್ರಿಕಾದಲ್ಲಿ ಭಾರತೀಯ ಹೈಕಮಿಷನರ್ ಆಗಿ ಮೊದಲಬಾರಿಗೆ ಸ್ವತಂತ್ರ ಹುದ್ದೆ ನಿರ್ವಹಿಸಿದ್ದರು. ಅವರಿಗೆ ಆ ದೇಶದ ಒಳಗೆಯೇ ಇರುವ ಪುಟ್ಟ ದೇಶವಾದ ಲೆಸೋತೊದ ಕಾರ್ಯವ್ಯಾಪ್ತಿಯೂ ಇತ್ತು. ಮೇ 2019ರಲ್ಲಿ ಭೂತಾನ್‌ನಲ್ಲಿ ರಾಯಭಾರಿಯಾಗಿ ನೇಮಕವಾದ ಅವರು, ಈ ಹೊಸ ನೇಮಕಾತಿಯ ತನಕ ಅಲ್ಲಿದ್ದರು.

ಅವರ ಈ ನೇಮಕಾತಿ ಕುರಿತು ಒಂದು ಪ್ರಮುಖ ಟೀಕೆಯಿದೆ. ಅದೆಂದರೆ, ಪ್ರಸ್ತುತ ಜಾಗತಿಕ ಬಿಕ್ಕಟ್ಟಿನ ಸಂದರ್ಭದಲ್ಲಿ- ಭಾರತವು ಇರುವ ರಾಜಕೀಯ ಇಕ್ಕಟ್ಟಿನ ಸಂದರ್ಭದಲ್ಲಿ- ಅತ್ಯಂತ ಅನುಭವಿ ರಾಜತಾಂತ್ರಿಕರನ್ನು ವಿಶ್ವಸಂಸ್ಥೆಯ ಈ ಹುದ್ದೆಗೆ ನೇಮಿಸಬೇಕಾಗಿದ್ದರೂ, ಬರೀ ದಕ್ಷಿಣ ಆಫ್ರಿಕಾ ಮತ್ತು ಭೂತಾನ್‌ನಂತಹ ಚಿಕ್ಕ ಮಿತ್ರದೇಶಗಳಲ್ಲಿ ಮಾತ್ರ ಸ್ವತಂತ್ರ ಕಾರ್ಯನಿರ್ವಹಣೆಯ ಅನುಭವವಿರುವ ಕಾಂಭೋಜ್ ಅವರನ್ನು ನೇಮಿಸಿರುವುದು. ಆದರೆ, ವಿಶ್ವಸಂಸ್ಥೆಯಿಂದು ಹಲ್ಲಿಲ್ಲದ ಹುಲಿಯಾಗಿರುವುದರಿಂದ ಈ ಹುದ್ದೆಯೇ ಮಹತ್ವದ್ದಲ್ಲ ಎಂಬುದು ಸಿನಿಕರ ಅಭಿಪ್ರಾಯ.

ಅದೇನೇ ಇರಲಿ; ವಿಶ್ವಸಂಸ್ಥೆಯಲ್ಲಿ ಮಹಿಳಾ ರಾಯಭಾರಿಗಳಾಗಿರುವ ಯುಎಸ್‌ಎ ರಾಯಭಾರಿ ಲಿಂಡಾ ಥಾಮಸ್-ಗ್ರೀನ್‌ಫೀಲ್ಡ್, ಯುಕೆಯ ಶಾಶ್ವತ ರಾಯಭಾರಿ ಬಾರ್ಬರಾ ವುಡ್‌ವರ್ಡ್, ನಾರ್ವೆಯ ರಾಯಭಾರಿ ಮೋನಾ ಜೂಲ್, ಯುಎಇಯ ರಾಯಭಾರಿ ಲಾನಾ ಝಕ ನಸೀಬೇಹ್ ಅವರ ಸಾಲಿಗೆ ಈ ಬಾರಿ ಐರ್‌ಲ್ಯಾಂಡಿನ ಹೊಸ ರಾಯಭಾರಿ ಜೆರಾಲ್ಡೈನ್ ನಾಸನ್ ಅವರ ಜೊತೆ ರುಚಿರಾ ಕಾಂಭೋಜ್ ಕೂಡಾ ಸೇರ್ಪಡೆಯಾಗಿರುವುದು ಹೆಮ್ಮೆಯ ವಿಷಯವೇ.

ಆದರೆ, ಈ ಹೆಮ್ಮೆಯ ನಡುವೆಯೂ ಒಂದು ವಿಷಯವನ್ನು ನೆನಪಿಸಬೇಕು. ಕ್ರೀಡೆಯೂ ಸೇರಿದಂತೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಾರತೀಯರ ವೈಯಕ್ತಿಕ ಸಾಧನೆಗಳನ್ನು ತನ್ನ ವೈಯಕ್ತಿಕ ಸಾಧನೆ ಎಂಬಂತೆ ಬಿಂಬಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ- ಕಾಂಭೋಜ್ ಅವರು ವಿದೇಶಾಂಗ ವ್ಯವಹಾರಗಳ ಕ್ಷೇತ್ರದಲ್ಲಿ ಇಷ್ಟು ಮೇಲೇರುವುದು ಮೋದಿ ಕಾಲದಲ್ಲಿ ಮಾತ್ರ ಮೊದಲ ಬಾರಿಗೆ ಸಾಧ್ಯವಾಯಿತು ಎಂಬಂತೆ ಚಿತ್ರಿಸುತ್ತಿದ್ದಾರೆ. ಆದರೆ, ಜವಾಹರಲಾಲ್ ನೆಹರೂ ಅವರ ತಂಗಿ ವಿಜಯಲಕ್ಷ್ಮೀ ಪಂಡಿತ್ ಅವರು 1953-1954ರಷ್ಟು ಹಿಂದೆಯೇ ಇಡೀ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು ಮಾತ್ರವಲ್ಲ; ಹಲವಾರು ಪ್ರಬಲ ದೇಶಗಳಲ್ಲಿ ರಾಯಭಾರಿಯೂ ಆಗಿದ್ದರು. ಐಎಎಸ್ ಪಾಸಾದ ಭಾರತದ ಮೊದಲ ಮಹಿಳೆ ಮತ್ತು ಮೊದಲ ಐಎಫ್‌ಎಸ್ ಅಧಿಕಾರಿ ಸಿ.ಬಿ. ಮುತ್ತಮ್ಮ, ಇನಾಮ್ ಗಂಭೀರ್, ನಿರುಪಮಾ ರಾವ್, ಶಮ್ಮಾ ಜೈನ್, ಮೀರಾ ಶಂಕರ್ ಮುಂತಾದವರು ಬೇರೆಬೇರೆ ದೇಶಗಳಲ್ಲಿ ಭಾರತದ ರಾಯಭಾರಿಗಳಾಗಿ ಹೆಸರು ಮಾಡಿದ್ದಾರೆ. ಇವರೆಲ್ಲರೂ ಮೋದಿಯ ಹೆಸರು ಸಾರ್ವಜನಿಕರಿಗೆ ಗೊತ್ತಾಗುವ ಮೊದಲೇ ತಮ್ಮ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದರು.

ಏನೇ ಇದ್ದರೂ ರುಚಿರಾ ಅವರು ಈ ಬಿಕ್ಕಟ್ಟಿನ ಸಮಯದಲ್ಲಿ ಅತ್ಯುತ್ತಮ ಕೆಲಸ ಮಾಡಿ, ಈ ಪ್ರಸಿದ್ಧ ಮಹಿಳೆಯರ ಸಾಲಿಗೆ ಸೇರಿ ಭಾರತೀಯ ಮಹಿಳಾ ಸಶಕ್ತೀಕರಣಕ್ಕೆ ಸ್ಫೂರ್ತಿಯಾಗಲಿ ಎಂದು ಹಾರೈಸೋಣ.

Writer - ನಿಖಿಲ್ ಕೋಲ್ಪೆ

contributor

Editor - ನಿಖಿಲ್ ಕೋಲ್ಪೆ

contributor

Similar News