ಕುಂದಾಪುರ: ಸರಕಾರಿ ಆಸ್ಪತ್ರೆ ಐಸಿಯುಗೆ 35 ಲಕ್ಷ ರೂ. ಉಪಕರಣಗಳ ಕೊಡುಗೆ

Update: 2022-08-04 15:12 GMT

ಕುಂದಾಪುರ, ಆ.4: ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ನವಜಾತ ಶಿಶುಗಳ ವಿಭಾಗಕ್ಕೆ 5 ಬೆಡ್‌ಗಳ ಸುಸಜ್ಜಿತ ಐಸಿಯು ನಿರ್ಮಾಣವಾಗಿದ್ದು, ಇದಕ್ಕೆ ಅಗತ್ಯವಿದ್ದ ಉಪಕರಣಗಳನ್ನು ಅಮ್ಮುಂಜೆ ನಾರಾಯಣ ನಾಯಕ್ ಅವರ ಸ್ಮರಣಾರ್ಥ ನೀಡಲಾಗಿದ್ದು ಸಮಾಜದಿಂದ ಪಡೆದುದನ್ನು ಸಮಾಜಕ್ಕೆ ನೀಡಬೇಕೆನ್ನುವ ಇಂಥ ತುಡಿತ ಎಲ್ಲರಿಗೂ ಮಾದರಿ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಹೇಳಿದ್ದಾರೆ. 

ಕುಂದಾಪುರ ಸರಕಾರಿ ಆಸ್ಪತ್ರೆಯ ನವಜಾತ ಶಿಶುಗಳ ವಿಭಾಗದ ಐಸಿಯುವಿಗೆ ಅಮ್ಮುಂಜೆ ನಾರಾಯಣ ನಾಯಕ್-ರತ್ನಾ ನಾಯಕ್ ಅವರ ಸ್ಮರಣಾರ್ಥ ಕುಟುಂಬದವರು ನೀಡಿದ 35 ಲಕ್ಷ ರೂ.ಗಳ ಉಪಕರಣಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಗುರುವಾರ ಸಂಜೆ ಭಾಗವಹಿಸಿ ಅವರು ಮಾತನಾಡಿದರು.

ಸಾಮಾಜಿಕ ಕಳಕಳಿಯೊಂದಿಗೆ ಅವರೇ ಮುಂದೆ ಬಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಮೂಲಕ ಉಪಕರಣಗಳನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ನೀಡಿರುವುದು ಶ್ಲಾಘನೀಯ. ಇದರ ಸರಿಯಾದ ನಿರ್ವಹಣೆ, ನುರಿತ ಸಿಬಂದಿಗಳ ಮೂಲಕ ಸಾರ್ವಜನಿಕರಿಗೆ ಉತ್ತಮ ಸೇವೆ ದೊರೆವಂತಾಗಲಿ ಎಂದು ಜಿಲ್ಲಾಧಿಕಾರಿ ಹಾರೈಸಿದರು.

ಇದೇ ಸಂದರ್ಭ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಅವರಿಗೆ ಕುಂದಾಪುರ ಸರಕಾರಿ ಆಸ್ಪತ್ರೆಯ ವಿವಿಧ ವಿಭಾಗಗಳನ್ನು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಹಾಗೂ ಶಸ್ತ್ರಚಿಕಿತ್ಸಕ ಡಾ. ರಾಬರ್ಟ್ ರೆಬೆಲ್ಲೋ ಪರಿಚಯಿಸಿದರು. ಆಸ್ಪತ್ರೆ ಕಾರ್ಯವೈಖರಿ ಬಗ್ಗೆ ಜಿಲ್ಲಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗಭೂಷಣ್ ಉಡುಪ, ಜಿಲ್ಲಾ ಆಶ್ರಿತ ರೋಗವಾಹಕಗಳ ನಿಯಂತ್ರಣಾಧಿಕಾರಿ ಡಾ.ಪ್ರಶಾಂತ್ ಭಟ್, ಜಿಲ್ಲಾ ಕ್ಷಯ ರೋಗ ನಿಯಂತ್ರ ಣಾಧಿಕಾರಿ ಡಾ. ಚಿದಾನಂದ, ದಾನಿಗಳ ಕುಟುಂಬಿಕರಾದ ಅಮ್ಮುಂಜೆ ನಿತ್ಯಾನಂದ ನಾಯಕ್, ಡಾ. ಸುಖಾನಂದ ಶೆಣೈ, ಶೋಭಾ ಶೆಣೈ, ತಹಶೀಲ್ದಾರ್  ಕಿರಣ್ ಗೌರಯ್ಯ, ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಆಸ್ಪತ್ರೆಯ ಪಿಜಿಶಿಯನ್ ಡಾ.ನಾಗೇಶ್, ಅರವಳಿಕೆ ತಜ್ಞ ಡಾ. ವಿಜಯಶಂಕರ್, ಮಕ್ಕಳ ತಜ್ಞೆ ಡಾ.ಸುಜಾತಾ ಬಿ.ಟಿ., ಶುಶ್ರೂಷಕ ಅಧೀಕ್ಷಕಿ ಅನ್ನಪೂರ್ಣ ಟಿ.ಆರ್. ಉಪಸ್ಥಿತರಿದ್ದರು.

ಆಸ್ಪತ್ರೆಯ ಶುಶ್ರೂಷಕಿ ವೀಣಾ ಸ್ವಾಗತಿಸಿ, ಕೌನ್ಸಿಲರ್ ವೀಣಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News