ಹರ್‌ಘರ್ ತಿರಂಗದ ವೇಳೆ ಧ್ವಜಕ್ಕೆ ಅಪಮಾನವಾಗದಂತೆ ಎಚ್ಚರ ವಹಿಸಿ: ಸಚಿವ ಸುನಿಲ್‌ ಕುಮಾರ್

Update: 2022-08-06 15:55 GMT

ಉಡುಪಿ, ಆ.6: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ  ಆಗಸ್ಟ್ 13ರಿಂದ 15ರವರೆಗೆ ಜಿಲ್ಲೆಯ ಪ್ರತಿ ಮನೆಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಿ. ಆದರೆ ಈ ಸಂದರ್ಭದಲ್ಲಿ ರಾಷ್ಟ್ರಧ್ವಜಕ್ಕೆ ಯಾವುದೇ ರೀತಿಯಲ್ಲಿ ಅಪಮಾನ ವಾಗದಂತೆ ಎಚ್ಚರ ವಹಿಸಿ ಎಂದು ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಹೇಳಿದ್ದಾರೆ.

ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ, ಹರ್‌ಘರ್ ತಿರಂಗ ಕಾರ್ಯಕ್ರಮವನ್ನು ಆಯೋಜಿಸುವ ಕುರಿತು ಜಿಲ್ಲೆಯ ಎಲ್ಲಾ ಗ್ರಾಮಪಂಚಾಯತ್‌ಗಳ ಅಧ್ಯಕ್ಷರು,  ಉಪಾಧ್ಯಕ್ಷರು, ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಮತ್ತು ಪಂಚಾಯತ್ ಪಿಡಿಓಗಳಿಗೆ ನಡೆದ ಸಭೆಯ ಆದ್ಯಕ್ಷತೆ ವಹಿಸಿ ಅವರು  ಮಾತನಾಡುತಿದ್ದರು.

ಆ.13ರಿಂದ 15ರವರೆಗೆ ನಡೆಯುವ ಪ್ರತೀ ಮನೆಮನೆಯ ಮೇಲೆ ರಾಷ್ಟ್ರಧ್ವಜ ಹಾರಿಸುವ ಹರ್‌ಘರ್ ತಿರಂಗ ಅಭಿಯಾನವನ್ನು ರಾಜ್ಯದ  ಪ್ರತೀ ಮನೆ ಮನೆ ಗಳಲ್ಲಿ ಕುಟುಂಬದ ಎಲ್ಲಾ ಸದಸ್ಯರು  ಒಟ್ಟು ಸೇರಿ, ಕೌಟುಂಬಿಕ ಹಬ್ಬದ ರೀತಿಯಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸುವಂತೆ ಅವರು ಜನತೆಗೆ ಕರೆ ನೀಡಿದರು.

ದೇಶಕ್ಕೆ ಸ್ವಾತಂತ್ರ್ಯ ಸಿಗುವಾಗ ನಾವ್ಯಾರೂ ಹುಟ್ಟಿರಲಿಲ್ಲ. ಹೀಗಾಗಿ ನಾವ್ಯಾರೂ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲ್ಲ. ಈಗ ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಭಾಗವಹಿಸುವ ಸದವಕಾಶ ಸಿಕ್ಕಿದೆ. ಆದ್ದರಿಂದ 3 ದಿನಗಳ ಕಾಲ ಸಂಪೂರ್ಣವಾಗಿ ಅಝಾದಿ ಕಾ ಅಮೃತ ಮಹೋತ್ಸವದಲ್ಲಿ ಭಾಗವಹಿಸುವ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ನಿಜವಾದ ಗೌರವವನ್ನು ಸಲ್ಲಿಸಬೇಕು. ಅಂದು ಮನೆ ಮಂದಿ ಎಲ್ಲಾ ಸೇರಿ ಧ್ವಜಾರೋಹಣ ನೆರವೇರಿಸಿ,  ರಾಷ್ಟ್ರಗೀತೆ ಹಾಡಿ, ಸಿಹಿ ವಿತರಿಸಿ ಸಂಭ್ರಮಿಸಬೇಕು ಎಂದರು.

ದೇಶದ ಸ್ವಾತಂತ್ರ್ಯ ಹೋರಾಟವೆಂದರೆ ಉತ್ತರ ಭಾರತದ ಹೋರಾಟಗಳೇ ನೆನಪಾಗುತ್ತವೆ. ಆದರೇ ಕರ್ನಾಟಕ ರಾಜ್ಯದಲ್ಲೂ ಅನೇಕ ಸ್ವಾತಂತ್ರ್ಯ ಹೋರಾಟಗಳು ನಡೆದಿವೆ.  1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮ ದಿಂದಲೇ ಸ್ವಾತಂತ್ರ್ಯ ಹೋರಾಟ ಪ್ರಾರಂಭಗೊಂಡಿತು ಎಂಬ ನಂಬಿಕೆ ಇದೆ.  ಆದರೆ ಕರಾವಳಿಯಲ್ಲಿ 1837ರಲ್ಲೇ ಸುಳ್ಯದಿಂದ ರೈತರು ಮಂಗಳೂರಿಗೆ ಬಂದು, ಬಾವುಟಗುಡ್ಡೆಯಲ್ಲಿ ನಮ್ಮದೇ ಬಾವುಟ ಹಾರಿಸಿ ಮಂಗಳೂರನ್ನು ಸ್ವತಂತ್ರ ಎಂದು ಘೋಷಿಸಿದ್ದರು ಎಂದರು.

ಅದೇ ರೀತಿ ಉಳ್ಳಾಲದ ರಾಣಿ ಅಬ್ಬಕ್ಕ ಪೋರ್ಚುಗೀಸರ ವಿರುದ್ಧ ನಡೆಸಿದ ಹೋರಾಟವೂ ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟವೇ ಆಗಿತ್ತು. ಅದೇ ರೀತಿ ವಿದುರಾಶ್ವತ್ಥದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನವನ್ನು ದಕ್ಷಿಣ ಭಾರತದ ಜಲಿಯನ್‌ವಾಲ್ ಭಾಗ್ ಎಂದು ಕರೆಯಲಾಗುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮದ ಮೂಲಕ ರಾಜ್ಯದಲ್ಲಿ ಸ್ವಾತಂತ್ರ್ಯ ಹೋರಾಟದ ಪ್ರಮುಖ ಘಟನೆಗಳು ನಡೆದ 75 ಸ್ಥಳಗಳನ್ನು ಗುರುತಿಸಿ ಅಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ  ಹಾಗೂ ರಾಜ್ಯದ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದಂತೆ 75 ಪುಸ್ತಕಗಳನ್ನು ಹೊರತರಲಾಗಿದೆ ಎಂದು ಸುನಿಲ್‌ ಕುಮಾರ್ ಹೇಳಿದರು.

ರಾಜ್ಯದ ಪ್ರತಿ ಮನೆ, ಸರ್ಕಾರಿ ಕಚೇರಿ, ಅಂಗಡಿ, ವ್ಯಾಪಾರಿ ಕಟ್ಟಡಗಳ ಮೇಲೆ  ಒಟ್ಟು  ಒಂದು ಕೋಟಿ ತ್ರಿವರ್ಣ ಧ್ವಜಗಳನ್ನು ಹಾರಿಸುವ ಗುರಿ ಇದೆ. ಅದೇ ರೀತಿ  ಉಡುಪಿ ಜಿಲ್ಲೆಯಲ್ಲಿ 4 ಲಕ್ಷ ರಾಷ್ಟ್ರಧ್ವಜಗಳನ್ನು ಹಾರಿಸಲು ಉದ್ದೇಶಿಸಲಾಗಿದೆ. ಇದು ಕೇವಲ ಸರ್ಕಾರಿ ಕಾರ್ಯಕ್ರಮವಾಗದೇ, ಜನರ ಭಾವನಾತ್ಮಕ ಕಾರ್ಯಕ್ರಮವಾಗ ಬೇಕು. ಸ್ಥಳೀಯ ಜನಪ್ರತಿನಿಧಿಗಳು, ಸಂಘಸಂಸ್ಥೆಗಳು ಉತ್ಸಾಹದಿಂದ ಪ್ರತಿ ಮನೆಗೂ ಧ್ವಜ ತಲುಪುವಂತೆ ಮಾಡಬೇಕು ಎಂದರು.

ಪ್ರತಿ ಮನೆಯ ಮೇಲೂ ಧ್ವಜ ಹಾರಿಸಬೇಕು ಎಂಬ ಕಾರಣಕ್ಕೆ ಧ್ವಜಗಳನ್ನು ಉಚಿತವಾಗಿ ವಿತರಿಸಬಾರದು. ಪ್ರತಿಯೊಬ್ಬರು ಧ್ವಜಗಳನ್ನು ಖರೀದಿಸಿಯೇ ಹಾರಿಸಬೇಕು. ಗೌರವಯುತವಾಗಿ ಧ್ವಜಾರೋಹಣಕ್ಕೆ ಸಾಕಷ್ಟು ಸಿದ್ದತೆಗಳನ್ನು ಮಾಡಿಕೊಳ್ಳಬೇಕು ಎಂದು ಸಚಿವರು ಕಿವಿಮಾತು ಹೇಳಿದರು.

ಸಭೆಯಲ್ಲಿ ಸಚಿವರು ಹರ್‌ಘರ್ ತಿರಂಗ ಕಾರ್ಯಕ್ರಮದ ಕರಪತ್ರ ಬಿಡುಗಡೆಗೊಳಿಸಿದರು. ಸಾಂಕೇತಿಕವಾಗಿ ಗ್ರಾಪಂನ ಅಧ್ಯಕ್ಷರಿಗೆ ರಾಷ್ಟ್ರಧ್ವಜಗಳನ್ನು ಹಸ್ತಾಂತರಿಸಿದರು. ಸಭೆಗೆ ಮೊದಲು ಸಚಿವರು ಸಭಾಭವನದ ಹೊರಗೆ  ಸಂಜೀವಿನಿ ಸ್ವಸಹಾಯ ಸಂಘದ ಸದಸ್ಯರ ಧ್ವಜ ಮಾರಾಟ ಮಳಿಗೆಯಲ್ಲಿ ಗ್ರಾಹಕರಿಗೆ ಧ್ವಜಗಳನ್ನು ಹಸ್ತಾಂತರಿಸಿದರು. ಜಿಲ್ಲಾಡಳಿತದ ಮೂಲಕ ತೆರೆಯಲಾದ ರಾಷ್ಟ್ರಧ್ವಜ ಮಾರಾಟ ಮಳಿಗೆಯನ್ನು ಉದ್ಘಾಟಿಸಿದರು.

ಕಾರ್ಯಕ್ರಮಗಳಲ್ಲಿ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ., ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್., ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್ ಉಪಸ್ಥಿತರಿದ್ದರು.

ಜಿಪಂ ಸಿಇಓ ಪ್ರಸನ್ನ ಎಚ್. ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.  ಜಿಲ್ಲಾ ಕ್ರೀಡಾಧಿಕಾರಿ ಡಾ.ರೋಶನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News