ಹಿಂದುತ್ವ ಕೂಟದಿಂದ ಸಂವಿಧಾನ ವಿರೋಧಿ ಆಡಳಿತ: ಸುರೇಶ್ ಕಲ್ಲಾಗರ್

Update: 2022-08-07 14:26 GMT

ಉಡುಪಿ, ಆ.7: ಹಿಂದುತ್ವ ಮತ್ತು ಕಾರ್ಪೊರೇಟ್‌ಗಳ ಅಕ್ರಮ ಕೂಟವು ದೇಶದಲ್ಲಿ ಸಂವಿಧಾನ ವಿರೋಧಿಯಾಗಿ ಆಡಳಿತ ನಡೆಸುತ್ತಿದೆ. ಇದು ಕಾರ್ಮಿಕರ ಐಕ್ಯತೆಗೆ ಧಕ್ಕೆ ತರುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ, ಆಹಾರ ಧಾನ್ಯಗಳ ಮೇಲೆ ಜಿಎಸ್‌ಟಿ ಹೇರಿಕೆಯಿಂದ ದಿನಗೂಲಿ ಕಾರ್ಮಿಕರ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ಸಿಐಟಿಯು ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಆರೋಪಿಸಿದ್ದಾರೆ.

ಉಡುಪಿ ಸಾಯಿ ರೆಸಿಡೆನ್ಸಿಯಲ್ಲಿ ರವಿವಾರ ಆಯೋಜಿಸಲಾದ ಸಿಐಟಿಯು 6ನೇ ಉಡುಪಿ ತಾಲೂಕು ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ಸ್ವಾತಂತ್ರ್ಯ ಗಳಿಸಲು ದೇಶದ ಕಾರ್ಮಿಕರು ರೈತರು ಜಾತಿ ಮತ ಧರ್ಮದ ಭೇದವಿಲ್ಲದೆ ಹೋರಾಟ ನಡೆಸಿದರು. ಕಾರ್ಮಿಕ ವರ್ಗದ ಸಂಘಟನೆ, ಐಕ್ಯತೆ, ಹೋರಾಟ ದೇಶದ ಸಮಗ್ರತೆಯನ್ನು ರಕ್ಷಿಸುವ ಗುರಿ ಹೊಂದಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಕಾರ್ಮಿಕರು, ರೈತರು ಒಗ್ಗಟ್ಟಾಗಿ ಆಚರಿಸಬೇಕು. ಸರಕಾರದ ಕಾರ್ಮಿಕ ವಿರೋಧಿ ಜನವಿರೋಧಿ ನೀತಿಗಳ ವಿರುದ್ಧ ಹೋರಾಟ ಮನ್ನಡೆಸಬೇಕು ಎಂದರು.

ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ವಿಮಾ ನೌಕರರ ಸಂಘದ ಕೆ.ವಿಶ್ವನಾಥ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಸಿಐಟಿಯು ತಾಲೂಕು ಅಧ್ಯಕ್ಷ ರಾಮ ಕಾರ್ಕಡ ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಅತಿಥಿ ಗಳಾಗಿ ಸಿಐಟಿಯು ಜಿಲ್ಲಾಧ್ಯಕ್ಷ ಕೆ.ಶಂಕರ್, ಶೇಖರ ಬಂಗೇರ, ಭಾರತಿ, ಸಿಐಟಿಯು ಜಿಲ್ಲಾ ಖಜಾಂಚಿ ಶಶಿಧರ ಗೊಲ್ಲ, ಉಮೇಶ್ ಕುಂದರ್ ಉಪಸ್ಥಿತರಿದ್ದರು.

ಸಿಐಟಿಯು ತಾಲೂಕು ಪ್ರಧಾನ ಕಾರ್ಯದರ್ಶಿ ಕವಿರಾಜ್ ವಾರ್ಷಿಕ ವರದಿ ಲೆಕ್ಕಪತ್ರ ಮಂಡಿಸಿದರು. ಉಡುಪಿ ತಾಲೂಕು ಎರಡು ಸಂಚಲನ ಸಮಿತಿಯನ್ನು ಆಯ್ಕೆ ಮಾಡಲಾಯಿತು. ನೂತನ ಉಡುಪಿ ಸಂಚಲನ ಸಮಿತಿಗೆ 22 ಮಂದಿ  ಆಯ್ಕೆ ಮಾಡಿ, ಸಂಚಾಲಕರಾಗಿ ಕವಿರಾಜ್ ಆಯ್ಕೆಯಾದರು.

ಬ್ರಹ್ಮಾವರ ತಾಲೂಕಿಗೆ 22 ಮಂದಿ ಸಂಚಲನ ಸಮಿತಿ ಆಯ್ಕೆ ಮಾಡ ಲಾಯಿತು. ಬ್ರಹ್ಮಾವರ ಸಿಐಟಿಯು ಸಂಚಾಲಕರಾಗಿ ರಾಮ ಕಾರ್ಕಡ ಸಹ ಸಂಚಲಕರಾಗಿ ಸುಭಾಷ್ ನಾಯ್ಕ ಆಯ್ಕೆಯಾದರು. ಸಿಐಟಿಯು ಮುಖಂಡ ಸರೋಜ ಸ್ವಾಗತಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News