ಮಳೆ-ಪ್ರವಾಹ | ರಾಜ್ಯದಲ್ಲಿ 73 ಮಂದಿ ಸಾವು: ಸಚಿವ ಆರ್.ಅಶೋಕ್
ಬೆಂಗಳೂರು, ಆ. 8: ‘ಮಳೆ ಮತ್ತು ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಮನೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ನೆರವು ನೀಡುವ ನಿಟ್ಟಿನಲ್ಲಿ ಹತ್ತು-ಹದಿನೈದು ದಿನಗಳಿಗೆ ಆಗುವಷ್ಟು ಪಡಿತರ ಪದಾರ್ಥಗಳು ಒಳಗೊಂಡಿರುವ ‘ಕಾಳಜಿ ಕಿಟ್' ನೀಡುವ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಮೂರನೇ ಮಹಡಿಯಲ್ಲಿರುವ ಸಮಿತಿ ಕೊಠಡಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ 14 ಜಿಲ್ಲೆಯಲ್ಲಿ ಮಳೆ-ಪ್ರವಾಹ ಪೀಡಿತ ಜಿಲ್ಲೆಗಳಾಗಿವೆ. ಆ ಪೈಕಿ 161 ಗ್ರಾಮಗಳಿವೆ. ಈವರೆಗೆ 21,727 ಜನರು ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮಳೆ ಸಂಬಂಧಿತ ಘಟನೆಗಳಲ್ಲಿ ಈವರೆಗೆ 73 ಜನರು ಸಾವನ್ನಪ್ಪಿದ್ದಾರೆ. ಸಿಡಿಲುಬಡಿದು 15 ಜನ, ಗಾಳಿ-ಮಳೆಗೆ ಮರಬಿದ್ದು 5 ಜನರು ಸಾವನ್ನಪ್ಪಿದ್ದರೆ, ಮನೆ ಕುಸಿದು 19, ಪ್ರವಾಹಕ್ಕೆ ಸಿಲುಕಿ 24 ಜನರು, ಭೂಕುಸಿತದಿಂದ 9, ವಿದ್ಯುತ್ ಅವಘಡಕ್ಕೆ ಸಿಲುಕಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ' ಎಂದು ಅವರು ಮಾಹಿತಿ ನೀಡಿದರು.
‘ಸಂಕಷ್ಟಕ್ಕೆ ಸಿಲುಕಿರುವ ಜನರು ಕಾಳಜಿ ಕೇಂದ್ರಗಳಿಗೆ ಬರಲು ನಿರುತ್ಸಾಹ ತೋರಿಸುತ್ತಿದ್ದಾರೆ. ತಮ್ಮ ಸ್ನೇಹಿತರು ಸಂಬಂಧಿಕರ ಮನೆಗೆ ಹೋಗುತ್ತಿದ್ದಾರೆ. ಹೀಗಾಗಿ ಅವರಿಗೆ ‘ಕಾಳಜಿ ಕಿಟ್' ನೀಡುವ ಹೊಸ ವ್ಯವಸ್ಥೆ ಜಾರಿಗೆ ತಂದಿದ್ದೇವೆ. ಸಂಕಷ್ಟಕ್ಕೆ ಸಿಲುಕಿದ ಜನರು ತಾವು ಅನಾಥರು ಎಂಬ ಭಾವನೆ ಅವರಲ್ಲಿ ಬಾರದ ರೀತಿಯಲ್ಲಿ ಕ್ರಮ ವಹಿಸಲಾಗಿದೆ' ಎಂದು ಹೇಳಿದರು.
‘ಕಾಳಜಿ ಕಿಟ್‍ನಲ್ಲಿ 10 ಕೆ.ಜಿ ಅಕ್ಕಿ, ತೊಗರಿ ಬೆಳೆ, ಉಪ್ಪು, ಎಣ್ಣೆ, ಅರಿಶಿಣದ ಪುಡಿ, ಖಾರದ ಪುಡಿ ಸೇರಿದಂತೆ ಹತ್ತರಿಂದ ಹದಿನೈದು ದಿನಕ್ಕೆ ಆಗುವಷ್ಟು ದಿನಸಿ ನೀಡುತ್ತೇವೆ. ಕಾಳಜಿ ಕೇಂದ್ರದಲ್ಲಿ ಇರುವವರಿಗೂ ದಿನಸಿ ನೀಡಲಾಗುತ್ತದೆ. ಮನೆ ಕಳೆದುಕೊಂಡವರಿಗೆ ಸರಕಾರದ ಮಾರ್ಗಸೂಚಿ ಅನ್ವಯ ಸೂಕ್ತ ಪರಿಹಾರವನ್ನು ನೀಡಲಾಗುವುದು' ಎಂದು ಅವರು ವಿವರಿಸಿದರು.
‘ರಾಜ್ಯದಲ್ಲಿ ತಿಂಗಳಿನಿಂದ ಎಡಬಿಡದೆ ಸುರಿಯುತ್ತಿರುವ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ 73 ಜನರು ಬಲಿಯಾಗಿದ್ದಾರೆ. ಕೊಡಗು, ಹಾಸನ, ಮಂಡ್ಯ, ರಾಮನಗರ, ಚಾಮರಾಜನಗರ, ತುಮಕೂರು, ಭಟ್ಕಳ ಸೇರಿದಂತೆ 13 ಜಿಲ್ಲೆಗಳಲ್ಲಿ ನಾನೇ ಪ್ರವಾಸ ಮಾಡಿದ್ದು ಖುದ್ದು ಪರಿಸ್ಥಿತಿಯನ್ನು ಅವಲೋಕಿಸಿದ್ದೇನೆ' ಎಂದು ಆರ್.ಅಶೋಕ್ ವಿವರ ನೀಡಿದರು.
‘ರಾಜ್ಯದಲ್ಲಿ 75 ಪರಿಹಾರ ಶಿಬಿರಗಳನ್ನು ತೆರೆಯಲಾಗಿದ್ದು, ಇದರಲ್ಲಿ 7,386 ಮಂದಿ ಆಶ್ರಯ ಪಡೆದಿದ್ದಾರೆ. ಮಳೆ ಮತ್ತು ಪ್ರವಾಹ ಪೀಡಿತ ಭಾಗಗಳಲ್ಲಿ 8,197 ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ' ಎಂದ ಸಚಿವ ಅಶೋಕ್, ‘ಈ ಹಿಂದೆ ಇದ್ದ ಗಂಜಿ ಕೇಂದ್ರವನ್ನು ಇದೀಗ ‘ಕಾಳಜಿ ಕೇಂದ್ರ' ಎಂದು ಮರುನಾಮಕರಣ ಮಾಡಲಾಗಿದೆ. ‘ಗಂಜಿ, ಅನ್ನ, ಸಾಂಬರ್ ಬಿಟ್ಟು, ಚಪಾತಿ ಪಲ್ಯ, ಉಪ್ಪಿನಕಾಯಿ, ಹಪ್ಪಳ, ಮೊಸರು ಕೊಡಲಾಗುತ್ತದೆ. ಮೊಟ್ಟೆಯನ್ನು ಕೊಡಲು ಆದೇಶ ಮಾಡಲಾಗಿದೆ' ಎಂದು ತಿಳಿಸಿದರು.
‘ಪ್ರತಿ ದಿನ ಬೇರೆ ಬೇರೆ ಉಪಾಹಾರ ನೀಡಲು ಆದೇಶಿಸಲಾಗಿದೆ. ಕಾಳಜಿ ಕೇಂದ್ರದಲ್ಲಿ ಇರುವವರಿಗೆ ಟೂತ್ ಪೇಸ್ಟ್, ಬ್ರೆಶ್, ಸೋಪು, ಒಂದು ಟವಲ್ ನೀಡಲು ಸೂಚಿಸಿದ್ದೇವೆ. ಇನ್ನೂ ಕೆಲವು ಕಡೆಗಳಲ್ಲಿ ಮಳೆ ಮತ್ತು ಚಳಿ ಪರಿಸ್ಥಿತಿ ಹಿನ್ನೆಲೆಯಲ್ಲಿ ಕೆಲವರು ಬೆಡ್‍ಶಿಟ್, ದಿಂಬು ಕೊಡಲು ಕೇಳಿದ್ದು ಅವುಗಳನ್ನು ಒದಗಿಸಿಕೊಡಲಾಗುತ್ತಿದೆ' ಎಂದು ಅಶೋಕ್ ವಿವರಿಸಿದರು.