ಚಿಕ್ಕಮಗಳೂರು: ಸ್ವಾತಂತ್ರ್ಯ ದಿನಾಚರಣೆಗೆ ಶುಭ ಕೋರಿ ನಗರಸಭೆ ಹಾಕಿದ್ದ ಬ್ಯಾನರ್ ಗಳಲ್ಲಿ ಗಾಂಧೀಜಿ ಭಾವಚಿತ್ರ ನಾಪತ್ತೆ!

Update: 2022-08-15 13:40 GMT

ಚಿಕ್ಕಮಗಳೂರು, ಆ.15: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ರಾಜ್ಯ ಸರಕಾರದ ಜಾಹೀರಾತುಗಳಲ್ಲಿ ಸಾವರ್ಕರ್ ಭಾವಚಿತ್ರ ಬಳಸಿರುವುದೂ ಸೇರಿದಂತೆ ಅಲಲ್ಲಿ ಸಾವರ್ಕರ್ ಅವರನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಬಿಂಬಿಸುತ್ತಿರುವ ಬಗ್ಗೆ ವ್ಯಾಪಕ ಪರ-ವಿರೋಧದ ಚರ್ಚೆ, ಗಲಾಟೆಗಳು ರಾಜ್ಯಾದ್ಯಂತ ನಡೆಯುತ್ತಿದ್ದು, ಚಿಕ್ಕಮಗಳೂರು (Chikkamagaluru) ನಗರಸಭೆ ವತಿಯಿಂದ ನಗರದ ವಿವಿಧೆಡೆ ಹಾಕಲಾಗಿರುವ ಬ್ಯಾನರೊಂದು ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಈ ಬ್ಯಾನರ್ ನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಭಾವಚಿತ್ರ ನಾಪತ್ತೆಯಾಗಿದೆ.

ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ಸರಕಾರಿ ಸಂಸ್ಥೆಗಳು ಇದುವರೆಗೂ ಹಾಕುತ್ತಿದ್ದ ಯಾವುದೇ ಪ್ಲೆಕ್ಸ್, ಬ್ಯಾನರ್ ಗಳಲ್ಲಿ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರವನ್ನು ಕಡ್ಡಾಯವಾಗಿ ಹಾಕಲಾಗುತ್ತಿತ್ತು. ಎಲ್ಲ ಬ್ಯಾನರ್ ಗಳಲ್ಲೂ ಗಾಂಧೀಜಿ ಅವರ ದೊಡ್ಡ ದೊಡ್ಡ ಭಾವಚಿತ್ರಗಳು ಇರುತ್ತಿತ್ತು. ಆದರೆ ಈ ಬಾರಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಚಿಕ್ಕಮಗಳೂರು ನಗರಸಭೆ ವತಿಯಿಂದ ನಗರದ ವಿವಿಧೆಡೆ ಹಾಕಲಾಗಿರುವ ಬ್ಯಾನರ್ ಗಳಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರ ನಾಪತ್ತೆಯಾಗಿದ್ದು, ಗಾಂಧೀಜಿ ಅವರು ಭಾವಿಚಿತ್ರ ಹಾಕದಿರುವ ಬಗ್ಗೆ ಸಾರ್ವಜನಿಕರು, ಸಂಘಸಂಸ್ಥೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ವಾತಂತ್ರ್ಯ ಚಳವಳಿ ಸಂದರ್ಭ ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದಿದ್ದ ಸಾವರ್ಕರ್ ಭಾವಚಿತ್ರ ಹಾಕುವ ಮೂಲಕ ಮಹಾತ್ಮಗಾಂಧೀಜಿ ಸೇರಿದಂತೆ ಎಲ್ಲ ಸ್ವಾತಂತ್ರ್ಯ ಹೋರಾಟಗಾರರಿಗೆ ನಗರಸಭೆ ಅವಮಾನ ಮಾಡಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ:  ಶಿವಮೊಗ್ಗ: ಸಾವರ್ಕರ್  ಬ್ಯಾನರ್ ತೆರವು, 2 ಗುಂಪುಗಳ ಮಧ್ಯೆ ಗಲಾಟೆ


ಈ ಹಿಂದೆ ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ಯಾವುದೇ ಬ್ಯಾನರ್ ನೋಡಿದರೂ ಅಲ್ಲಿ ಗಾಂಧೀಜಿ ಅವರ ಭಾವಚಿತ್ರ ಇರುತ್ತಿತ್ತು, ಆದರೆ ನಗರಸಭೆ ಆಡಳಿತ ಈ ಬಾರಿ ಹಾಕಿರುವ ಬ್ಯಾನರ್ ನಲ್ಲಿ ಗಾಂಧೀಜಿ ನಾಪತ್ತೆಯಾಗಿದ್ದಾರೆ. ಚಂದ್ರಶೇಖರ್ ಆಜಾದ್ ಅವರು ಸ್ವಾತಂತ್ರ್ಯ ಹೋರಾಟಗಾರರು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಬ್ರಿಟಿಷರಿಗೆ ಕ್ಷಮಾಪಣೆ ಕೋರಿ ಪತ್ರ ಬರೆದ ಸಾವರ್ಕರ್ ಯಾವ ರೀತಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರಾಗುತ್ತಾರೆ ಎಂಬುದನ್ನು ನಗರಸಭೆ ಆಡಳಿತವೇ ಹೇಳಬೇಕು. ಚಿಕ್ಕಮಗಳೂರು ನಗರಸಭೆಯಲ್ಲಿ ಬಿಜೆಪಿ ಆಡಳಿತವಿದ್ದು, ಸಾವರ್ಕರ್ ಬಿಜೆಪಿಯವರ ಆರಾಧ್ಯ ದೈವ ಇದ್ದರೂ ಇರಬಹುದು, ಬಿಜೆಪಿಯವರ ಖುಷಿಗೆ ಪೊಟೊ ಹಾಕಿಕೊಂಡಿರಬಹುದು, ಸಾವರ್ಕರ್ ಪೊಟೊ ಹಾಕಿದ್ದಕ್ಕೆ ನಮ್ಮ ಅಭ್ಯಂತರವೂ ಇಲ್ಲ, ಆದರೆ ನಗರಸಭೆ ಆಡಳಿತ ಹಾಕಿರುವ ಬ್ಯಾನರ್ ನಲ್ಲಿ ಗಾಂಧೀಜಿ ಅವರ ಭಾವಚಿತ್ರ ಹಾಕದೇ ಕಡೆಗಣಿಸಿರುವುದು ಅತೀವ ನೋವುಂಟು ಮಾಡಿದೆ.

- ದಂಟರಮಕ್ಕಿ ಶ್ರೀನಿವಾಸ್, ದಸಂಸ ಮುಖಂಡ
 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News